Advertisement

ನ್ಯೂಟ್ರಿಶನ್‌ ಪರಿಣತರ ಸಂದರ್ಶನ ಕೆಲವು ಸಲಹೆಗಳು

06:00 AM Sep 03, 2017 | Team Udayavani |

ಸ್ವತಃ ಅಥವಾ ನಿಮ್ಮ ವೈದ್ಯರ ಶಿಫಾರಸಿನಂತೆ ನ್ಯೂಟ್ರಿಶನ್‌ (ಪೌಷ್ಟಿಕತೆ) ಪರಿಣತರು ಅಥವಾ ಡಯೆಟಿಶಿಯನ್‌ರಿಂದ ಪೌಷ್ಟಿಕತೆಗೆ ಸಂಬಂಧಿಸಿ ದಂತೆ ಸಲಹೆಗಳನ್ನು ಪಡೆದುಕೊಳ್ಳುವವರಿಗೆ ಕೆಲವೊಂದು ಪ್ರಮುಖ ಮಾಹಿತಿ ಇಲ್ಲಿದೆ.

Advertisement

1. ಮೊದಲಿಗೆ ವೈದ್ಯಕೀಯ ತಪಾಸಣೆಗೆ ಒಳಗಾಗಿ: ಓರ್ವ ನ್ಯೂಟ್ರಿಶನ್‌ ಪರಿಣತರು ನಿಮಗೆ ಮಾರ್ಗದರ್ಶನ ನೀಡುವುದಕ್ಕೆ ಮೊದಲು ನಿಮ್ಮ ದೇಹಾರೋಗ್ಯದ ಸ್ಥಿತಿಯ ಬಗ್ಗೆ ತಿಳಿದುಕೊಂಡಿರುವುದು ಅತ್ಯಂತ ಮುಖ್ಯವಾಗಿರುತ್ತದೆ. ರಕ್ತ ಪರೀಕ್ಷೆ ವರದಿ, ಕೊಲೆಸ್ಟ್ರಾಲ್‌ ಪ್ರಮಾಣ, ಟ್ರಿಗ್ಲಿಸಿರೈಡ್ಸ್‌, ರಕ್ತದಲ್ಲಿ ಸಕ್ಕರೆಯ ಪ್ರಮಾಣದ ಕುರಿತಂತೆ ನೀವು ನ್ಯೂಟ್ರಿಶನ್‌ ಪರಿಣತರಿಗೆ ಮಾಹಿತಿ ನೀಡಬೇಕಾಗುತ್ತದೆ.  ಕೆಲವೊಂದು ಆರೋಗ್ಯ ಸಮಸ್ಯೆಗಳನ್ನು ಡಯೆಟ್‌ನಿಂದ ಸಂಪೂರ್ಣವಾಗಿ ಅಥವಾ ಭಾಗಶಃ ನಿರ್ವಹಿಸಬಹುದಾಗಿರುತ್ತದೆ. ಶಾರೀರಿಕ ಚಟುವಟಿಕೆಗಳಿಂದಲೂ ಇವುಗಳನ್ನು ನಿರ್ವಹಿಸಲು ಪೂರಕವಾಗಿ ಪರಿಣಮಿಸುತ್ತವೆ. ಹಾಗಾಗಿ ನಿಮ್ಮ ವೈದ್ಯರು ನ್ಯೂಟ್ರಿಶನ್‌ ಪರಿಣತರ ಸಲಹೆ ಪಡೆಯುವಂತೆ ನಿಮಗೆ ತಿಳಿಸಿರುತ್ತಾರೆ. ಹಾಗಾಗಿ ನ್ಯೂಟ್ರಿಶನ್‌ ಪರಿಣತರಿಗೆ ನಿಮ್ಮ ಆರೋಗ್ಯದ ಬಗ್ಗೆ  ಸಂಪೂರ್ಣ ಮಾಹಿತಿ ನೀಡಬೇಕು. 

2. ನಿಮ್ಮ ಉದ್ದೇಶಗಳನ್ನು ತಿಳಿಸಿ: ನ್ಯೂಟ್ರಿಶನ್‌ ಪರಿಣತರ ಸಲಹೆ ಪಡೆಯಲು ಬಂದಿರುವ ಉದ್ದೇಶವನ್ನು ಮೊದಲು ತಿಳಿಸಬೇಕು. ಉದಾ: ದೇಹ ತೂಕವನ್ನು ಕಳೆದುಕೊಳ್ಳಬೇಕೇ ಅಥವಾ ಗಳಿಸಬೇಕೇ?, ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚಿನ ಶಕ್ತಿ ಅಗತ್ಯದ ಬಗ್ಗೆ, ಕೊಲೆಸ್ಟ್ರಾಲ್‌ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳಲು, ಉತ್ತಮ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಇತ್ಯಾದಿಗಳಿಗೆ ಸಂಬಂಧಿಸಿದಂತೆ ನಿಮಗೆ ನ್ಯೂಟ್ರಿಶನ್‌ ಪರಿಣತರ ಸಲಹೆ ಬೇಕಿರಬಹುದು. ಈ ಬಗ್ಗೆ ಅವರಿಗೆ ಮುಂಚಿತವಾಗಿ ಸ್ಪಷ್ಟವಾಗಿ ತಿಳಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಸಂದರ್ಶನದ ಉದ್ದೇಶವು ವಿವೇಚನೆ ಉಳ್ಳದ್ದಾಗಿರಬೇಕು. 

3. ಪವಾಡ ಮಾಡುವ ಮಾತ್ರೆಗಳಿಲ್ಲ;ನಂಬಬೇಡಿ! ನ್ಯೂಟ್ರಿಶನ್‌ ಪರಿಣತರು ನಿಮ್ಮ ಜೀವನಶೈಲಿಯನ್ನು ಆರೋಗ್ಯ ಪೂರಕವಾಗಿ ಬದಲಾಯಿಸುವ ಕಡೆಗೆ ಗಮನ ಕೇಂದ್ರೀಕರಿಸುತ್ತಾರೆ. ಆಹಾರದ ಆಯ್ಕೆಗಳ ಬಗ್ಗೆ ಮಾರ್ಗದರ್ಶನ ನೀಡುತ್ತಾರೆ. ಶೀಘ್ರ ಪರಿಣಾಮ ಉಂಟು ಮಾಡುವ ಡಯೆಟ್‌ ಬಗ್ಗೆ ಅವರು ತಿಳಿಸುವುದಿಲ್ಲ. ನ್ಯೂಟ್ರಿಶನ್‌ ಪರಿಣತರು ನಿಮ್ಮ ಗುರಿಗಳನ್ನು ಶೀಘ್ರವಾಗಿ ಈಡೇರಿಸಲು ನೆರವಾಗಬಲ್ಲ ಯಾವುದೇ ಮಾತ್ರೆಗಳನ್ನು ನೀಡುವುದಿಲ್ಲ. ಮಾತ್ರೆಗಳಿಂದ ಪವಾಡಸದೃಶವಾಗಿ ನಿಮ್ಮ ಉದ್ದೇಶ ಸಾಧಿತವಾಗುತ್ತದೆ ಎಂಬುದು ಶುದ್ಧ ತಪ್ಪು, ಇದನ್ನು ನಂಬಬಾರದು.
 
4. ಪೌಷ್ಟಿಕಾಂಶ ಪೂರಕಗಳ ಮಾಹಿತಿ ನೀಡಿ: ನೀವು ಸೇವಿಸುತ್ತಿರುವ ಮೂಲಿಕೆಗಳು ಅಥವಾ ಸಸ್ಯ ಸಂಬಂಧಿತ ಪೌಷ್ಟಿಕಾಂಶ ಪೂರಕಗಳ ಬಗ್ಗೆ ನ್ಯೂಟ್ರಿಶನ್‌ ಪರಿಣತರಿಗೆ ಮಾಹಿತಿ ನೀಡುವುದು ಅತ್ಯಗತ್ಯ.

5. ನ್ಯೂಟ್ರಿಶನ್‌ ಪರಿಣತರ ಪ್ರಶ್ನೆಗಳಿಗೆ ಉತ್ತರಿಸಲು ಸಿದ್ಧವಾಗಿರಿ: ನ್ಯೂಟ್ರಿಶನ್‌ ಪರಿಣತರು ನಿಮ್ಮಿಂದ ಬಯಸಿದ ಎಲ್ಲ ಮಾಹಿತಿಗಳನ್ನು ಸರಿಯಾಗಿ ನೀಡಿ. ಯಾವುದೇ ವಿಷಯವನ್ನು ಮುಚ್ಚಿಡಬೇಡಿ. ಉದಾ: ಆರೋಗ್ಯಕ್ಕೆ ಸಂಬಂಧಿಸಿದಂತೆ ಆನುವಂಶೀಯವಾಗಿ ಕಾಡುತ್ತಿರುವ ಸಮಸ್ಯೆಗಳ ಬಗ್ಗೆ, ಆಹಾರಾಭ್ಯಾಸದ ಬಗ್ಗೆ, ಇತ್ಯಾದಿ. ನೀವು ನೀಡಿದ ಮಾಹಿತಿಯನ್ನಾಧರಿಸಿ ನ್ಯೂಟ್ರಿಶನ್‌ ಪರಿಣತರು ನಿಮ್ಮ ದೇಹಕ್ಕೆ ಹೊಂದಿಕೊಳ್ಳುವ ಡಯೆಟ್‌ ಮಾದರಿಯನ್ನು ತಿಳಿಸುತ್ತಾರೆ. ಆಹಾರ ಆಯ್ಕೆಗಳು ಮತ್ತು ಅಗತ್ಯ ಸಲಹೆಗಳನ್ನು ನೀಡುತ್ತಾರೆ.

Advertisement

6. ತೂಕದ ಕುರಿತ ಸಮಾಲೋಚನೆಗೆ: ದೇಹದ ತೂಕಕ್ಕೆ ಸಂಬಂಧಿಸಿದಂತೆ ನಿಮಗೆ ಸಲಹೆಗಳನ್ನು ನೀಡಬೇಕಾದ್ದಲ್ಲಿ, ನ್ಯೂಟ್ರಿಶನ್‌ ಪರಿಣತರು ನಿಮ್ಮ ಎತ್ತರವನ್ನು ಅಳೆಯಬಹುದು. ಕೆಲವೊಮ್ಮೆ ನಿಮ್ಮ ಸೊಂಟದ ಅಳತೆಯನ್ನೂ ಪಡೆದುಕೊಳ್ಳಬಹುದು.

7. ಅರ್ಥಮಾಡಿಕೊಳ್ಳಿ: ಯಾವುದೇ ಸಲಹೆ ಬಗ್ಗೆ ನಿಮಗೆ ಸ್ಪಷ್ಟತೆ ಉಂಟಾಗದಿದ್ದರೆ ಮತ್ತೂಮ್ಮೆ ಕೇಳಿ ಸ್ಪಷ್ಟಪಡಿಸಿಕೊಳ್ಳುವುದು ಅತ್ಯಂತ ಅಗತ್ಯವಾಗಿರುತ್ತದೆ.

8. ನೀವು ಕೇಳುವ ಪ್ರತಿ ಪ್ರಶ್ನೆ  ನಿರ್ದಿಷ್ಟವಾಗಿರಲಿ.

9. ಯಾವುದೇ ರೀತಿಯ ವೈದ್ಯಕೀಯ ಸಲಹೆಗಳನ್ನು ಮುಕ್ತವಾಗಿ ಸ್ವೀಕರಿಸಿ.

10. ಆಹಾರ ಸೇವನೆ ದಾಖಲೆಗಳನ್ನು ಗಂಭೀರವಾಗಿ ನಿರ್ವಹಿಸಿ: ನೀವು ಸೇವಿಸುವ ಆಹಾರದ ಕುರಿತು ಮಾಹಿತಿಯನ್ನು  ನಿರ್ವಹಿಸಲು ಸಲಹೆ ನೀಡಿದ್ದಲ್ಲಿ ಅದನ್ನು ಗಂಭೀರವಾಗಿ ಪರಿಗಣಿಸಿ ಮತ್ತು ತಪ್ಪದೆ ನಿರ್ವಹಿಸಿ. ಆಹಾರ ಸೇವನೆ ಪ್ರಮಾಣದ ದಾಖಲೀಕರಣ ಅತ್ಯಗತ್ಯ. ಕಪ್‌ ಮತ್ತು ಚಮಚಗಳನ್ನು ಬಳಸಿ ಆಹಾರ ಸೇವನೆ ಪ್ರಮಾಣ ಅಳೆಯಿರಿ.

11. ಕುಟುಂಬವನ್ನು ತೊಡಗಿಸಿಕೊಳ್ಳಿ: ನಿಮಗೆ ಅಡುಗೆ ಮಾಡಿಕೊಳ್ಳಲು ತಿಳಿಯದಿದ್ದರೆ ಅಥವಾ ಸಾಧ್ಯವಾಗದಿದ್ದರೆ ನಿಮ್ಮ ಕುಟುಂಬದ ಸದಸ್ಯರನ್ನು ನ್ಯೂಟ್ರಿಶನ್‌ ಪರಿಣತರ ಸಲಹೆ ಪಡೆಯುವ ವೇಳೆ ಕರೆದೊಯ್ಯಿರಿ. ಕುಟುಂಬದ ಸದಸ್ಯರ ಸಹಕಾರದಿಂದ ನಿಮ್ಮ ಪ್ರಯತ್ನ ಸಫ‌ಲವಾಗಬಹುದು. ಅವರಿಂದ ನಿಮಗೆ ಪ್ರೇರಣೆಯೂ ದೊರೆಯುತ್ತದೆ.

12. ನೀಡಿದ ಸಲಹೆಯನ್ನು ಅನುಸರಿಸಿ: ನ್ಯೂಟ್ರಿಶನ್‌ ಪರಿಣತರು ನೀಡಿದ ಸಲಹೆಗಳನ್ನು ಗಂಭೀರವಾಗಿ ಅನುಸರಿಸಿ. ನ್ಯೂಟ್ರಿಶನ್‌ ಪರಿಣತರು ನೀಡಿದ ದಿನಾಂಕದಂದೇ ಅವರನ್ನು ಭೇಟಿಯಾಗಿ. ಇದರಿಂದ ನಿಮ್ಮ ಉದ್ದೇಶ ಸಾಧನೆಯಲ್ಲಿ ಸಕಾಲದಲ್ಲಿ ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ ಮತ್ತು ನಿಮ್ಮ ಪ್ರಶ್ನೆಗಳಿಗೂ ಸಕಾಲದಲ್ಲಿ ಉತ್ತರ ದೊರೆಯುತ್ತದೆ.

13. ನ್ಯೂಟ್ರಿಶನ್‌ ಪರಿಣತರು ನೀಡಿದ ಸಲಹೆಯನ್ನು ಸರಿಯಾಗಿ ಅನುಪಾಲನೆ ಮಾಡುವುದರಿಂದ ಉದ್ದೇಶಿತ ಗುರಿ ಸಾಧನೆಯಾಗಲಿದೆ. ದೇಹದ ತೂಕ, ಕೊಲೆಸ್ಟ್ರಾಲ್‌ ಪ್ರಮಾಣ ಸಹಿತ ದೇಹದಲ್ಲಿ ಬದಲಾವಣೆಗಳು ಉಂಟಾಗಲು ನಿರ್ದಿಷ್ಟ ಸಮಯ ತೆಗೆದುಕೊಳ್ಳುತ್ತದೆ. ಆದ್ದರಿಂದ ಈ ಬಗ್ಗೆ ಅರಿವು ಹೊಂದಿರುವುದು ಅತ್ಯಂತ ಅಗತ್ಯವಾಗಿರುತ್ತದೆ. 

– ಡಾ| ಅರುಣ ಮಲ್ಯ,   
ಸೀನಿಯರ್‌ ಡಯೆಟಿಶಿಯನ್‌,
ಕೆ.ಎಂ.ಸಿ. ಆಸ್ಪತ್ರೆ, ಡಾ| ಅಂಬೇಡ್ಕರ್‌ ವೃತ್ತ,
ಮಂಗಳೂರು.

Advertisement

Udayavani is now on Telegram. Click here to join our channel and stay updated with the latest news.

Next