Advertisement
“ಪಕ್ಕದಲ್ಲೇ ತಂಗಿಯ ಮೃತದೇಹ ಅಂಗಾತವಾಗಿಬಿದ್ದಿದೆ. ಅದನ್ನು ಅಲ್ಲಿಂದ ತೆರವುಗೊಳಿಸಿ, ಅಂತ್ಯಕ್ರಿಯೆ ನೆರವೇರಿಸುವಂತೆ ಅಣ್ಣನು ಅಂಗಲಾಚಿಕೊಂಡರೂ ಯಾರೂ ಮನೆಯತ್ತ ಸುಳಿಯುತ್ತಲೇ ಇಲ್ಲ…’ಇದು ಕೊರೊನಾ ವೈರಸ್ ಎಂಬ ಮಹಾಮಾರಿಯು ಸೃಷ್ಟಿಸಿರುವಂಥ ದುರಂತ. ಮನು ಕುಲಕ್ಕೇ ಶಾಪವಾಗಿ ಪರಿಣಮಿಸಿರುವ ಈ ಅಗೋಚರ ವೈರಸ್ ವಿಶ್ವಾದ್ಯಂತ ಹಲವರನ್ನು ನೋವಿನ ನರಕಕ್ಕೆ ನೂಕಿದೆ. ಒಂದೆರಡು ಸುದ್ದಿಗಳು ಬಹಿರಂಗವಾದರೂ ಹೊರಗೆ ಬಾರದಂಥ ಇಂಥ ಇನ್ನೆಷ್ಟು ಕಣ್ಣೀರ ಕಥೆಗಳಿವೆಯೋ ಗೊತ್ತಿಲ್ಲ.
Related Articles
Advertisement
ಇಟೆಲಿ ನಮ್ಮನ್ನು ಅನಾಥರನ್ನಾಗಿಸಿತು: ಇಟೆಲಿಯ ನೇಪಲ್ಸ್‌ನಲ್ಲಿ ತನ್ನ ಕುಟುಂಬದೊಂದಿಗೆ ವಾಸವಿದ್ದ ಥೆರೇಸಾ ಫ್ರಾನ್ಸಿಸ್‌ಗೆ ಸೋಂಕಿನ ಲಕ್ಷಣ ಕಾಣಿಸಿಕೊಂಡಿತ್ತು. ಏಕಾಏಕಿ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಮಾ.7ರಂದು ಕೊನೆಯುಸಿರೆಳೆದರು. ಕೊರೊನಾ ಭೀತಿ ಹಿನ್ನೆಲೆಯಲ್ಲಿ ಥೆರೇಸಾ ಮೃತದೇಹ ಒಯ್ಯಲು ಸ್ಥಳೀಯ ಯಾವ ಆಸ್ಪತ್ರೆಯೂ ಮುಂದೆ ಬರಲಿಲ್ಲ. ಮನೆಯಲ್ಲಿರುವ ಥೆರೇಸಾರ ಸಹೋದರ ಲ್ಯೂಕಾ ಫ್ರಾನ್ಸಿಸ್ ಏನು ಮಾಡಬೇಕೆಂದು ತೋಚದೆ ಸಾಮಾಜಿಕ ಜಾಲತಾಣದ ಮೊರೆ ಹೋಗಿದ್ದಾರೆ.
ಸೆಲ್ಫಿ ವೀಡಿಯೋ ಮಾಡಿಕೊಂಡಿರುವ ಅವರು, ಪಕ್ಕದಲ್ಲೇ ಅಂಗಾತ ಬಿದ್ದಿರುವ ತಂಗಿಯ ಮೃತದೇಹವನ್ನು ತೋರಿಸುತ್ತಾ ತಮ್ಮ ಅಳಲು ತೋಡಿಕೊಂಡಿದ್ದಾರೆ. “ನನ್ನ ತಂಗಿ ಸತ್ತಿದ್ದಾಳೆ. ಆಕೆಯ ಅಂತ್ಯಕ್ರಿಯೆ ಮಾಡಲೂ ನನ್ನಿಂದ ಸಾಧ್ಯವಾಗುತ್ತಿಲ್ಲ. ಏಕೆಂದರೆ, ಅವಳ ಮೃತದೇಹ ಒಯ್ಯಲು ಯಾರೂ ಮುಂದೆಬರುತ್ತಿಲ್ಲ. ಇಟೆಲಿ ನಮ್ಮನ್ನು ಅನಾಥರನ್ನಾಗಿಸಿತು’ ಎಂದು ಹೇಳಿಕೊಂಡಿದ್ದಾರೆ.
ವೈರಲ್ ಬೈಟ್ಸ್
– ಸಂಸತ್ ಭವನಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧ. ವೀಕ್ಷಣ ಗ್ಯಾಲರಿಗೆ ಪಾಸ್ ವಿತರಣೆ ಸ್ಥಗಿತ, ಭವನದ ಸುತ್ತ ತಿರುಗಾಡಲೂ ನಿರ್ಬಂಧ– ಇರಾನ್‌ನಲ್ಲಿ ಶನಿವಾರ 97 ಸಾವು, ಮೃತರ ಸಂಖ್ಯೆ 611ಕ್ಕೇರಿಕೆ
– ಸೋಮವಾರದಿಂದ ತುರ್ತು ಅರ್ಜಿಗಳನ್ನಷ್ಟೇ ವಿಚಾರಣೆ ನಡೆಸಲು ಬಾಂಬೆ ಹೈಕೋರ್ಟ್ ನಿರ್ಧಾರ
– ರವಾಂಡಾದಲ್ಲಿ ಮೊದಲ ಸೋಂಕಿತ ಪತ್ತೆ. ಮಾ.8ರಂದು ಮುಂಬಯಿನಿಂದ ರವಾಂಡಾಗೆ ಬಂದಿದ್ದ ಭಾರತೀಯನಿಗೆ ಸೋಂಕು
– ಮಾ. 27ರ ವರೆಗೆ ಚೀನದಿಂದ ಹೊರಗಿರುವ ಎಲ್ಲ ಮಳಿಗೆಗಳನ್ನೂ ಮುಚ್ಚಲು ಆ್ಯಪಲ್ ಕಂಪೆನಿ ನಿರ್ಧಾರ
– ಚೀನದಲ್ಲಿ ಶನಿವಾರ 13 ಮಂದಿ ಸಾವು, ಸಾವಿನ ಸಂಖ್ಯೆ 3,189ಕ್ಕೇರಿಕೆ. ಸೋಂಕಿತರ ಸಂಖ್ಯೆ 80,824.
– ಗೋವಾದಲ್ಲೂ ಮಾ.31ರವರೆಗೆ ಕ್ಯಾಸಿನೋ, ಪಬ್, ಈಜುಕೊಳಗಳಿಗೆ ಬೀಗ, ಶಾಲೆಗಳಿಗೆ ರಜೆ
– ಸ್ಪೇನ್‌ನಲ್ಲಿ ಒಂದೇ ದಿನ 1,500 ಪ್ರಕರಣ ಪತ್ತೆ. ಸಾವಿನ ಸಂಖ್ಯೆ 136ಕ್ಕೇರಿಕೆ.
– ಕೊರೊನಾ ಪೀಡಿತ ದೇಶಗಳಿಗೆ ತೆರಳಿ ವಾಪಸಾಗಿದ್ದ 335 ಮಂದಿ ಪಂಜಾಬ್‌ನಲ್ಲಿ ನಾಪತ್ತೆ, ಬಲೆಬೀಸಿದ ಪೊಲೀಸರು
– ಅಮೆರಿಕದಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಣೆ: 50 ಶತಕೋಟಿ ಡಾಲರ್‌ನ ಅನುದಾನಕ್ಕೆ ಒಪ್ಪಿಗೆ ಮಾರ್ಗಸೂಚಿ ಪಾಲಿಸಿ: ಮೋದಿ
ರೋಗಲಕ್ಷಣ ಹೊಂದಿರುವವರು ಮನೆಯಲ್ಲೇ ಇದ್ದುಕೊಂಡು ನಿಗಾ ವಹಿಸುವುದು ಹೇಗೆ ಎಂಬ ಆರೋಗ್ಯ ಸಚಿವಾಲಯದ ಮಾರ್ಗಸೂಚಿಯನ್ನು ಪ್ರಧಾನಿ ನರೇಂದ್ರ ಮೋದಿ ಟ್ವಿಟರ್‌ನಲ್ಲಿ ಅಪ್‌ಲೋಡ್ ಮಾಡಿದ್ದು, ಎಲ್ಲರೂ ಅದನ್ನು ಓದಿಕೊಳ್ಳುವಂತೆ ಮತ್ತು ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದ್ದಾರೆ. ಮಾರ್ಗಸೂಚಿಯಲ್ಲೇನಿದೆ?
– ಮನೆಯಲ್ಲೇ ನಿಗಾದಲ್ಲಿರುವವರು ಗಾಳಿ- ಬೆಳಕು ಇರುವಂಥ ಪ್ರತ್ಯೇಕ ಕೊಠಡಿಯಲ್ಲೇ ಇರಬೇಕು
– ಆ ಕೊಠಡಿಗೆ ಹೊಂದಿಕೊಂಡಿರುವಂತೆ ಅಥವಾ ಪ್ರತ್ಯೇಕವಾದ ಶೌಚಾಲಯ ಇರಬೇಕು
– ಮನೆಯ ಇತರೆ ಯಾವುದೇ ಸದಸ್ಯ ಆ ಕೊಠಡಿಗೆ ಬಂದರೂ, ನಿಗಾದಲ್ಲಿರುವ ವ್ಯಕ್ತಿಯಿಂದ ಕನಿಷ್ಠ ಒಂದು ಮೀಟರ್ ಅಂತರ ಕಾಯ್ದುಕೊಳ್ಳಬೇಕು
– ನಿಗಾದಲ್ಲಿರುವ ವ್ಯಕ್ತಿಯು ರೋಗನಿರೋಧಕ ಶಕ್ತಿ ಕಡಿಮೆಯಿರುವಂಥ ವ್ಯಕ್ತಿಗಳು ಅಂದರೆ ವೃದ್ಧರು, ಗರ್ಭಿಣಿಯರು, ಮಕ್ಕಳು ಮತ್ತು ರೋಗಪೀಡಿತ ವ್ಯಕ್ತಿಗಳಿಂದ ದೂರವಿರಬೇಕು. ಎಲ್ಲ ಗಡಿ ಮಾರ್ಗ ಬಂದ್
ಭಾರತವು ಗಡಿ ದೇಶಗಳ ಎಲ್ಲ ಮಾರ್ಗಗಳನ್ನು ಬಂದ್ ಮಾಡಲು ನಿರ್ಧರಿಸಿದೆ. ಭಾರತ ಮತ್ತು ಪಾಕಿಸ್ಥಾನ ನಡುವಿನ ಎಲ್ಲ ಗಡಿ ರಸ್ತೆಗಳು ಮಾ. 16ರ ಮಧ್ಯರಾತ್ರಿಯಿಂದ ಬಂದ್ ಆಗಲಿವೆ. ಉಳಿದಂತೆ ಭಾರತ-ನೇಪಾಲ, ಭಾರತ-ಬಾಂಗ್ಲಾದೇಶ, ಭಾರತ-ಭೂತಾನ್, ಭಾರತ-ಮ್ಯಾನ್ಮಾರ್ ನಡುವಿನ ಎಲ್ಲ ರಸ್ತೆ ಮಾರ್ಗಗಳು ಮಾ. 14ರ ಮಧ್ಯರಾತ್ರಿಯಿಂದ ಬಂದ್ ಆಗಲಿವೆ. ಚೆಕ್‌ಪೋಸ್ಟ್‌ಗಳ ಮೂಲಕ ಅನಿವಾರ್ಯ ವಾಹನಗಳನ್ನು ಮಾತ್ರವೇ
ಬಿಡಲಾಗುತ್ತದೆ ಎಂದು ಪ್ರಕಟನೆ ತಿಳಿಸಿದೆ. ವಿಮಾನ ರದ್ದು
ಕೊರೊನಾ ಭೀತಿ ಹಿನ್ನೆಲೆಯಲ್ಲಿ ಮುಂದಿನ 2 ವಾರಗಳ ಕಾಲ ಎಲ್ಲ ಅಂತಾರಾಷ್ಟ್ರೀಯ ವಿಮಾನಗಳ ಸಂಚಾರ ರದ್ದು ಮಾಡುತ್ತಿರುವುದಾಗಿ ಸೌದಿ ಅರೇಬಿಯಾ ಶನಿವಾರ ಘೋಷಿಸಿದೆ. ಇದೇ ವೇಳೆ, ಮಾರ್ಚ್ ಅಂತ್ಯದವರೆಗೆ ಅಬುಧಾಬಿಯ ಎಲ್ಲ ನೈಟ್‌ಕ್ಲಬ್‌ಗಳು ಮತ್ತು ಪ್ರವಾಸಿ ರೆಸ್ಟಾರೆಂಟ್‌ಗಳನ್ನು ಮುಚ್ಚುವ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಆದರೆ, ಈ ನಿರ್ಧಾರ ದುಬಾೖಗೆ ಅನ್ವಯಿಸುವುದಿಲ್ಲ. ಅಮೆರಿಕದ ದಂಪತಿ ವಶಕ್ಕೆ
ಕೇರಳದ ನಿಗಾ ಕೇಂದ್ರದಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ ಅಮೆರಿಕದ ದಂಪತಿ ಕೊನೆಗೂ ಕೊಚ್ಚಿ ವಿಮಾನನಿಲ್ದಾಣದಲ್ಲಿ ಪತ್ತೆಯಾಗಿದ್ದಾರೆ. ಅವರನ್ನು ಕೂಡಲೇ ವಶಕ್ಕೆ ಪಡೆದು, ಕಲಮಶೆÏàರಿ ಮೆಡಿಕಲ್ ಕಾಲೇಜು ಆಸ್ಪತ್ರೆಯ ನಿಗಾ ವಾರ್ಡ್‌ನಲ್ಲಿ ಇರಿಸಲಾಗಿದೆ. ಲಂಡನ್‌ನಿಂದ ದೋಹಾ ಮೂಲಕ ಕೊಚ್ಚಿಗೆ ಆಗಮಿಸಿದ್ದ ಈ ದಂಪತಿಯಲ್ಲಿ ಜ್ವರ, ಕೆಮ್ಮು ಕಾಣಿಸಿಕೊಂಡಿತ್ತು. ಹೀಗಾಗಿ ಅವರು ಆಸ್ಪತ್ರೆಗೆ ಆಗಮಿಸಿದ್ದರು. ಕೂಡಲೇ ಅವರನ್ನು ನಿಗಾ ಕೇಂದ್ರದಲ್ಲಿ ಇರಿಸಲಾಗಿತ್ತು. ಆದರೆ ಅಲ್ಲಿಂದ ಅವರು ತಪ್ಪಿಸಿಕೊಂಡಿದ್ದರು. ಇದೇ ವೇಳೆ, ಮಹಾರಾಷ್ಟ್ರದಲ್ಲೂ ಇಂಥದ್ದೇ ಪ್ರಕರಣ ನಡೆದಿದ್ದು, ಶಂಕಿತ ಸೋಂಕು ಹಿನ್ನೆಲೆಯಲ್ಲಿ ನಾಗ್ಪುರದ ಆಸ್ಪತ್ರೆಗೆ ದಾಖಲಾಗಿದ್ದ ನಾಲ್ವರು, ವೈದ್ಯರಿಗೆ ಮಾಹಿತಿ ನೀಡದೆ ಅಲ್ಲಿಂದ ಹೊರನಡೆದಿದ್ದಾರೆ. ಅವರಿಗಾಗಿ ಹುಡುಕಾಟ ಆರಂಭವಾಗಿದೆ. ಗೋಮೂತ್ರ ಸೇವಿಸಲು ಕರೆ
ಅಖೀಲ ಭಾರತ ಹಿಂದೂ ಮಹಾಸಭಾವು ದಿಲ್ಲಿಯಲ್ಲಿ ಶನಿವಾರ “ಗೋಮೂತ್ರ ವಿತರಣೆ’ ಕಾರ್ಯಕ್ರಮ ಆಯೋಜಿ ಸಿತ್ತು. ಕೊರೊನಾವೈರಸ್‌ಗೆ ಗೋಮೂತ್ರ ರಾಮಬಾಣ ಎಂದಿರುವ ಹಿಂದೂ ಮಹಾಸಭಾದ ಅಧ್ಯಕ್ಷ ಸ್ವಾಮಿ ಚಕ್ರಪಾಣಿ, ಸ್ಥಳೀಯರಿಗೆ ಗೋಮೂತ್ರ ವಿತರಿಸಿದ್ದಾರೆ. ಜತೆಗೆ, ಮಾಂಸಾ ಹಾರ ತಿನ್ನುವವರನ್ನು ಶಿಕ್ಷಿಸಲೆಂದೇ ಕೊರೊನಾವೈರಸ್ ಅವತಾರವೆತ್ತಿದೆ. ಇನ್ನು ಮುಂದೆ ಯಾವತ್ತೂ ಭಾರತೀಯರು ಮಾಂಸಾಹಾರ ಸೇವಿಸುವುದಿಲ್ಲ. ಜಾಗತಿಕ ನಾಯಕರು ಕೂಡ ಗೋಮೂತ್ರ ಸೇವಿಸುವ ಮೂಲಕ ಕೊರೊನಾದಿಂದ ಮುಕ್ತರಾಗಬಹುದು ಎಂದೂ ಚಕ್ರಪಾಣಿ ತಿಳಿಸಿದ್ದಾರೆ. ಸೋಂಕಿತರ ಶವ ಸಂಸ್ಕಾರ ಹೀಗಿರಲಿ…
ಕೊರೊನಾ ಸೋಂಕಿಗೆ ಈ ವರೆಗೆ ವಿಶ್ವದೆಲ್ಲೆಡೆ 5 ಸಾವಿರಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಶನಿವಾರ ಮಾರ್ಗಸೂಚಿಯೊಂದನ್ನು ಹೊರಡಿಸಿದ್ದು, ಕೆಲ ನೈಸರ್ಗಿಕ ವಿಪತ್ತುಗಳ ಬಳಿಕ ಮೃತದೇಹಗಳಿಂದ ಸಾಂಕ್ರಾಮಿಕ ರೋಗಗಳು ಹರಡುತ್ತವೆ. ಆದರೆ ಅಂತಹ ಅಪಾಯ ಕೊರೊನಾ ವೈರಸ್‌ನಿಂದ ಆಗುತ್ತದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಸ್ಪಷ್ಟಪಡಿಸಿದೆ. ಹಾಗೇ ಕೆಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ತಿಳಿಸಿದೆ.
– ಸೋಂಕಿತ ವ್ಯಕ್ತಿ ಮೃತಪಟ್ಟ ಬಳಿಕ ವೈರಸ್‌ಗಳು ಹೆಚ್ಚು ಸಮಯ ಬದುಕುಳಿಯುವುದಿಲ್ಲ
– ಶವಗಳ ಹತ್ತಿರ ಸುಳಿದಾಡುವವರು ಕ್ಷಯ, ಹೆಪಟೈಟಿಸ್ ಬಿ, ಸಿ ಮತ್ತಿತರ ಕಾಯಿಲೆಗಳಿಗೆ ತುತ್ತಾಗಬಹುದು
– ಶ್ಮಶಾನ ಅಥವಾ ಶವ ಸಂಸ್ಕಾರದ ಕೆಲಸ ಮಾಡುವವರಿಗೆ ಕಾಲರಾ, ಟೈಫಾಯ್ಡ, ಎಚ್‌ಐವಿ ರೀತಿ ಕಾಯಿಲೆ ಬರಬಹುದು
– ಅಂತರ್ಜಲ ಮೂಲಗಳಿರುವ ಸ್ಥಳದಿಂದ ಕನಿಷ್ಠ 30 ಮೀ. ದೂರದಲ್ಲಿ ಶವಸಂಸ್ಕಾರ ಮಾಡಬೇಕು
– ಹೂಳುವ ಗುಂಡಿಯು ಭೂಗತ ಜಲಮಟ್ಟಕ್ಕಿಂತಲೂ ಕನಿಷ್ಠ 1.5 ಮೀ. ಮೇಲ್ಮಟ್ಟದಲ್ಲಿರಬೇಕು
– ಶ್ಮಶಾನ ಸ್ಥಳದಿಂದ ಹರಿಯುವ ನೀರು ಯಾವುದೇ ಕಾರಣಕ್ಕೂ ಜನವಸತಿ ಪ್ರದೇಶ ಪ್ರವೇಶಿಸಬಾರದು
– ದೇಹ ಹಾಗೂ ರಕ್ತದ ನಿರ್ವಹಣೆಗೆ ಸಂಬಂಧಿಸಿದಂತೆ ಜಾಗತಿಕ ಮಟ್ಟದ ಕ್ರಮಗಳನ್ನು ಅನುಸರಿಸಬೇಕು
– ಸಂಸ್ಕಾರದ ವೇಳೆ ಶವದ ಬ್ಯಾಗ್ ಬಳಸಬೇಕು ಮತ್ತು ಒಮ್ಮೆ ಶವ ಹೂತ ಸ್ಥಳವನ್ನು ಮತ್ತೆ ಅಗೆಯಬಾರದು
– ಶವ ಸಂಸ್ಕಾರಕ್ಕೆ ಬಳಸಿದ ವಾಹನ ಮತ್ತು ಸಾಧನಗಳನ್ನು ರಾಸಾಯನಿಕ ದ್ರಾವಣ ಬಳಸಿ ಸ್ವತ್ಛಗೊಳಿಸಬೇಕು.