ಮಹಾನಗರ: ಪದವು ಸೆಂಟ್ರಲ್ ವಾರ್ಡ್ ನಗರದಿಂದ ತುಸು ಒಳಗಿರುವುದರಿಂದ ಗ್ರಾಮೀಣ ಭಾಗವೆಂದೇ ಪರಿಗಣಿಸಬಹುದು. ಪಾಲಿಕೆಯಲ್ಲಿ 35ನೇ ವಾರ್ಡ್ ಆಗಿ ಗುರುತಿಸಿಕೊಂಡಿರುವ ಪದವು ಸೆಂಟ್ರಲ್ ಭೌಗೋಳಿಕವಾಗಿ ಸಣ್ಣದಾದರೂ, ಹೆಚ್ಚಿನ ಧಾರ್ಮಿಕ ಕೇಂದ್ರಗಳು, ಶಿಕ್ಷಣ ಸಂಸ್ಥೆಗಳನ್ನು ಒಳಗೊಂಡಿರುವ ವಾರ್ಡ್ ಇದಾಗಿದೆ. ಮಂಗಳೂರು ನಗರದಲ್ಲೇ ಅತೀ ಹೆಚ್ಚು ಅಂದರೆ, ಏಳು ಅಂಗನವಾಡಿ ಕೇಂದ್ರಗಳನ್ನು ಈ ವಾರ್ಡ್ ಹೊಂದಿರುವುದು ವಾರ್ಡ್ ವೈಶಿಷ್ಟ್ಯವಾಗಿದೆ.
ಕೊಂಗೂರು ಮಠ, ಸೇಕ್ರೆಡ್ ಹಾರ್ಟ್ ಶಾಲೆ, ಕಾನ್ವೆಂಟ್, ನೀತಿನಗರ ರಾಜರಾಜೇಶ್ವರಿ ದೇವಸ್ಥಾನ, ಶಕ್ತಿನಗರ ಮುತ್ತಪ್ಪ ಗುಡಿ ಇಲ್ಲಿದೆ. ಕೆಲವು ಪ್ರದೇಶಗಳು ಇತರ ವಾರ್ಡ್‌ಗೆ ಸೇರ್ಪಡೆಗೊಂಡ ಕಾರಣ ಈ ವಾರ್ಡ್‌ನ ಭೌಗೋಳಿಕ ವ್ಯಾಪ್ತಿ ಸ್ವಲ್ಪ ಕಿರಿದಾಗಿದೆ.
ಈ ವಾರ್ಡ್‌ನಲ್ಲಿ ಸುತ್ತಾಟ ನಡೆಸಿದಾಗ ಕೆಲವೆಡೆ ಅಭಿವೃದ್ಧಿ ಕಾಮಗಾರಿಗಳು ಕಾಣಿಸಿ ದರೂ, ಹಲವು ಸಮಸ್ಯೆಗಳು ಕಂಡು ಬಂದಿವೆ. ಜನರ ಮೂಲಭೂತ ಸೌಕರ್ಯಗಳಲ್ಲಿ ಬಹುಮುಖ್ಯವಾಗಿ ಬೇಕಾದ ಸುಗಮ ಸಂಚಾರಕ್ಕೆ ಸುವ್ಯವಸ್ಥಿತ ರಸ್ತೆ ವ್ಯವಸ್ಥೆ ಇಲ್ಲಿ ಬಹುಮುಖ್ಯವಾದ ಆವಶ್ಯಕತೆಯಾಗಿದೆ. ಶಕ್ತಿನಗರ ಪ್ರವೇಶ ರಸ್ತೆಯಿಂದ ಪಂಚಮಹಲ್ ಗೇರು ಫ್ಯಾಕ್ಟರಿ ತನಕದ ರಸ್ತೆ ಕಾಂಕ್ರಿಟೀಕರಣಕ್ಕೆ ಬಾಕಿ ಉಳಿದಿದ್ದು, ಕಳೆದೈದು ವರ್ಷದಿಂದ ಪ್ಯಾಚ್‌ವರ್ಕ್ ನಲ್ಲೇ ಸುಧಾರಣೆಯಾಗುತ್ತಿದೆ ಎಂದು ಸ್ಥಳೀಯರು ಹೇಳುತ್ತಾರೆ. ಈ ರಸ್ತೆಯಲ್ಲಿ ನೀರು ಸರಬರಾಜು ಪೈಪ್‌ಲೈನ್ ಹಾದು ಹೋಗುವುದರಿಂದ ಪೈಪ್‌ಲೈನ್ ಸ್ಥಳಾಂತರಗೊಳ್ಳದೆ ರಸ್ತೆ ಕಾಂಕ್ರಿಟೀಕರಣಕ್ಕೆ ತೊಡಕಾಗುತ್ತಿದೆ. ಮಹಾಕಾಳಿ ಕ್ರಾಸ್ ರಸ್ತೆ ಆಸುಪಾಸಿನ ನಿವಾಸಿಗಳಿಗೆ ಒಳಚರಂಡಿ ಸಮಸ್ಯೆಯು ದೈನಂದಿನ ಸಮಸ್ಯೆಯಾಗಿಯೇ ಉಳಿದಿದೆ. ಈ ವಾರ್ಡ್ ನ ಮಹಾಕಾಳಿ ಕ್ರಾಸ್ ಸಹಿತ ಹಲವು ಕಡೆಗಳಲ್ಲಿ ಬೇಸಗೆಯಲ್ಲಿ ನೀರಿನ ಸಮಸ್ಯೆ ಬೃಹದಾಕಾರವಾಗಿದ್ದು, ಟ್ಯಾಂಕರ್ ನೀರನ್ನೇ ಅವಲಂಬಿಸಬೇಕಾಗಿದೆ ಎನ್ನುತ್ತಾರೆ ನಾಗರಿಕರು. ಕಸ ವಿಲೇವಾರಿ ಮೂರು ದಿನಕ್ಕೊಮ್ಮೆ ನಡೆಯುವುದರಿಂದ ಮತ್ತು ಮುಖ್ಯರಸ್ತೆಗೇ ಕಸ ತಂದಿಡಬೇಕಾಗಿರುವುದರಿಂದ ಸೂಕ್ತ ವಿಲೇವಾರಿಯೂ ಇಲ್ಲಿನ ನಾಗರಿಕರಿಗೆ ಸಮಸ್ಯೆ ಅನುಭವಿಸುವಂತಾಗಿದೆ.
ಶಕ್ತಿನಗರ ಮುಖ್ಯರಸ್ತೆ ಕಾಂಕ್ರಿಟೀಕರಣ, ಕಾರ್ಮಿಕ ಕಾಲನಿ ಕಾಂಕ್ರಿಟೀಕರಣ, ಕುಚ್ಚಿಕಾಡ್ ರಸ್ತೆ ಕಾಂಕ್ರಿಟೀಕರಣ ನಡೆದಿದ್ದು, ಅಭಿವೃದ್ಧಿ ಕಾಮಗಾರಿ ನಡೆದಿದೆ ಎನ್ನುವುದಕ್ಕೆ ಈ ಕಾಂಕ್ರಿಟೀಕರಣಗೊಂಡ ರಸ್ತೆಗಳು ಸಾಕ್ಷಿಯಾಗಿವೆ.
ಮಳೆಗಾಲದ ಕಾರಣದಿಂದಾಗಿ ಕಾಂಕ್ರೀಟ್ ರಸ್ತೆಗಳನ್ನು ಸಂಪರ್ಕಿಸುವ ಕೆಲವು ರಸ್ತೆಗಳಲ್ಲಿ ಕೆಲವು ಕಡೆ ಹೊಂಡ ಗುಂಡಿ ಸೃಷ್ಟಿಯಾಗಿವೆ. ಕೊಂಗೂರು ಮಠಕ್ಕೆ ಸಂಪರ್ಕಿಸುವ ರಸ್ತೆ ರೈಲ್ವೇ ಸಮಸ್ಯೆಯಿಂದಾಗಿ ಡಾಮರೀಕರಣಗೊಳ್ಳದೆ ಮಣ್ಣಿನ ರಸ್ತೆಯಾಗಿಯೇ ಉಳಿದಿದೆ. ಮಳೆಗಾಲದಲ್ಲಿ ಇಲ್ಲಿ ಸಂಚಾರವೇ ಕಷ್ಟಸಾಧ್ಯವಾಗಿರುವುದು ಕಂಡು ಬಂದಿದೆ.
5 ಲಕ್ಷ ರೂ. ವೆಚ್ಚದಲ್ಲಿ ಕ್ಯಾಸ್ತಲಿನೋ ಕಾಲನಿ ಮತ್ತು ಬೇಕಲ್‌ಕಾರ್ಲಿನ್ ಕಾಲನಿ ರಸ್ತೆ ಕಾಂಕ್ರಿಟೀಕರಣಕ್ಕೆ ಗುದ್ದಲಿಪೂಜೆ ನಡೆದಿದ್ದು, ಕಾಮಗಾರಿ ಮಳೆಗಾಲದ ಬಳಿಕ ಆರಂಭವಾಗಬೇಕಿದೆ. ಉಳಿದಂತೆ ಅಲ್ಲಲ್ಲಿ ಸಣ್ಣಪುಟ್ಟ ಒಳಚರಂಡಿ ಸಮಸ್ಯೆಗಳಿದ್ದರೂ, ಬೃಹದಾಕಾರದ ಸಮಸ್ಯೆಗಳು ಇಲ್ಲಿ ಗೋಚರಿಸಿಲ್ಲ.
ರಾಜಕೀಯ ಹಿನ್ನೋಟ
ವಾರ್ಡ್ ನಂ. 35 ಪದವು ಸೆಂಟ್ರಲ್‌ನಲ್ಲಿ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಕೆ. ಜುಬೈದಾ ಅವರು ಬಿಜೆಪಿ ಅಭ್ಯರ್ಥಿಗಿಂತ 113 ಮತಗಳ ಅಂತರದಲ್ಲಿ ಜಯ ಗಳಿಸಿದ್ದರು. ಕಳೆದ ಎರಡು ಅವಧಿಯಲ್ಲಿಯೂ ಮಹಿಳೆಗೆ ಅವಕಾಶವಿದ್ದು, ಕ್ರಮವಾಗಿ ಪಕ್ಷೇತರ ಅಭ್ಯರ್ಥಿ ಮರಿಯಮ್ಮ ಥೋಮಸ್ ಮತ್ತು ಕಾಂಗ್ರೆಸ್‌ನ ಜುಬೈದಾ ಅವಕಾಶ ಪಡೆದಿದ್ದರು. ಈ ಬಾರಿ ಈ ವಾರ್ಡ್ ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವುದರಿಂದ ಜುಬೈದಾ ಅವರಿಗೆ ಮತ್ತೂಮ್ಮೆ ಸ್ಪರ್ಧಿಸಲು ಅವಕಾಶವಿದೆ.
ಪದವು ಸೆಂಟ್ರಲ್ ವಾರ್ಡ್
ಭೌಗೋಳಿಕ ವ್ಯಾಪ್ತಿ: ಸುಲ್ತಾನ್‌ಬತ್ತೇರಿಯಿಂದ ಬೊಕ್ಕಪಟ್ಣ, ರಾಜೀವನಗರ, ನೀತಿನಗರ, ಕೋಂಗೂರು ಮಠ, ಕಾರ್ಮಿಕ ಕಾಲೊನಿ, ಕಲ್ಪನೆ, ಕುಚ್ಚಿಕಾಡ್ ಪ್ರದೇಶವು ಪದವು ಸೆಂಟ್ರಲ್ ವಾರ್ಡ್‌ನ ವ್ಯಾಪ್ತಿಗೆ ಸೇರಿವೆ.
ಒಟ್ಟು ಮತದಾರರು 8300
ನಿಕಟಪೂರ್ವ ಕಾರ್ಪೊರೇಟರ್-ಜುಬೈದಾ
(ಕಾಂಗ್ರೆಸ್)
2013ರ ಚುನಾವಣೆ ಮತ ವಿವರ
ಕಾಂಗ್ರೆಸ್: ಕೆ. ಜುಬೈದಾ: 1482
ಬಿಜೆಪಿ: ಸುಮನಾ ಶರಣ್: 1369
ಪಕ್ಷೇತರ: ಮರಿಯಮ್ಮ ಥೋಮಸ್: 1249
ಧನ್ಯಾ ಬಾಳೆಕಜೆ