Advertisement

ಕೆಲವರಿಗೆ ಹೊಟ್ಟೆ ಕಿಚ್ಚು ಶುರು: ಸಿದ್ದರಾಮಯ್ಯ

01:32 PM Oct 16, 2017 | |

ಮೈಸೂರು: ಮುಖ್ಯಮಂತ್ರಿಯಾಗಿ ತಾನು 5 ವರ್ಷ ಅವಧಿ ಪೂರ್ಣಗೊಳಿಸುತ್ತಿರುವುದನ್ನು ಕಂಡು ಕೆಲವರಿಗೆ ಹೊಟ್ಟೆಕಿಚ್ಚು, ಅಸೂಯೆ ಶುರುವಾಗಿದೆ. ಅವರ ಹೆಸರನ್ನು ಹೇಳಲು ತನಗಿಷ್ಟವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಮೈಸೂರು ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್‌ ಸಮಿತಿ ವತಿಯಿಂದ ಕೆ.ಆರ್‌.ನಗರದ ರೇಡಿಯೋ ಮೈದಾನದಲ್ಲಿ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

Advertisement

ತನ್ನನ್ನು ಟೀಕೆ ಮಾಡುವವರು ಅವರೇ ಸುಟ್ಟು ಹೋಗುತ್ತಾರೆ. 1976ರ ಸುಮಾರಿನಲ್ಲಿ ತಾನು ವಕೀಲನಾಗಿದ್ದಾಗ ಇಲ್ಲಿನ ಮುಖಂಡರುಗಳಾದ ಮಂಚನಹಳ್ಳಿ ಭದ್ರೇಗೌಡ, ಕೆಎಸ್ಸಾರ್ಟಿಸಿ ಟೈರ್‌ ರಾಮೇಗೌಡ, ಗಂಧನಹಳ್ಳಿ ಬಸವರಾಜು ಅವರ ನಡುವೆ ವೈಮನಸ್ಯ ಉಂಟಾಗಿತ್ತು. ಆಗ ಇಲ್ಲಿಗೆ ಬಂದು ಅವರನ್ನೆಲ್ಲಾ ಒಟ್ಟು ಮಾಡಿದಾಗ ಇಲ್ಲೊಬ್ಬರು ಮಹಾಶಯರು ಲೀಡರ್‌ ಆಗಲು ಸಾಧ್ಯವಾಯಿತು ಎಂದು ಮಾಜಿ ಸಂಸದ ಎಚ್‌.ವಿಶ್ವನಾಥ್‌ ಹೆಸರೇಳದೆ ತಮ್ಮ ಮಾತಿನುದ್ದಕ್ಕೂ ಚುಚ್ಚಿದರು.

ಸಿದ್ದರಾಮಯ್ಯನನ್ನು ನಾನೇ ಕಾಂಗ್ರೆಸ್‌ಗೆ ಕರೆತಂದೆ ಎಂದು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಇವರಿಗೇ ಕಾಂಗ್ರೆಸ್‌ನಲ್ಲಿ ಕಿಮ್ಮತ್ತಿರಲಿಲ್ಲ. ಇನ್ನು ತನ್ನನ್ನು ಪಕ್ಷಕ್ಕೆ ಸೇರಿಸಲಾಗುತ್ತಾ. ಬೆಂಗಳೂರಿನ ಪಿರಾನ್‌ ಎಂಬುವವರು ತಾನು ಕಾಂಗ್ರೆಸ್‌ ಸೇರಲು ಕಾರಣರು ಎಂದು ತಿರುಗೇಟು ನೀಡಿದರು.

2008ರಲ್ಲಿ ಕೆ.ಆರ್‌.ನಗರ ಕ್ಷೇತ್ರದಲ್ಲಿ ಮಂಚನಹಳ್ಳಿ ಮಹದೇವುಗೆ ಟಿಕೆಟ್‌ ಸಿಗಬೇಕಿತ್ತು. ತಾನು ಮಾಜಿ ಆಗಿದ್ದೀನಿ. ಇದೊಂದು ಬಾರಿ ಚುನಾವಣೆಗೆ ನಿಲ್ಲುತ್ತೇನೆ ಎಂದು ಟಿಕೆಟ್‌ ಪಡೆದರು. ಹೀಗಾಗಿ ಮಂಚನಹಳ್ಳಿ ಮಹದೇವುಗೆ 2009ರ ಲೋಕಸಭೆ ಚುನಾವಣೆಗೆ ನಿಲ್ಲುವಂತೆ ಒಪ್ಪಿಸಿದ್ದೆ. ಆದರೆ, 2008ರ ವಿಧಾನಸಭೆ ಚುನಾವಣೆಯಲ್ಲಿ ಸೋತವರು ಮತ್ತೆ 2009ರಲ್ಲಿ ತಾನೇ ಲೋಕಸಭೆಗೆ ಹೋಗುತ್ತೇನೆ.

ಗೆದ್ದು ಹೋದರೆ ಇನ್ನು ಕೆ.ಆರ್‌.ನಗರದ ಕಡೆಗೆ ತಲೆ ಹಾಕುವುದಿಲ್ಲ ಎಂದು ಹೇಳಿ ಮಂಚನಹಳ್ಳಿ ಮಹದೇವುಗೆ ಟಿಕೆಟ್‌ ತಪ್ಪಿಸಿದ್ದರು ಎಂದು ದೂರಿದರು. 2014ರ ಲೋಕಸಭಾ ಚುನಾವಣೆಯಲ್ಲಿ ಸೋತ ಮೇಲೂ ಸುಮ್ಮನಿರದೆ, ತನಗೆ ಅನ್ಯಾಯ ಆಯಿತು ಎಂದು ತಿರುಗುತ್ತಿದ್ದಾರೆ. ಆದರೆ, ನಿಜವಾಗಿ ಅನ್ಯಾಯವಾಗಿದ್ದು ಮಂಚನಹಳ್ಳಿ ಮಹದೇವುಗೆ ಎಂದು ಹೇಳಿದರು. 

Advertisement

ತನ್ನ ರಾಜಕೀಯ ಜೀವನದಲ್ಲಿ ತನ್ನನ್ನು ನಂಬಿದವರಿಗೆ ಎಂದೂ ದ್ರೋಹ ಮಾಡಿಲ್ಲ. ಮುಂದೆಯೂ ಮಾಡಲ್ಲ. ರಾಜಕೀಯ ಯಾರಪ್ಪನ ಮನೆ ಆಸ್ತಿಯೂ ಅಲ್ಲ. 2 ಬಾರಿ ಲೋಕಸಭೆ, 2 ಬಾರಿ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದೇನೆ. 30 ಜಿಲ್ಲೆಗಳ ಜನರ ಆಶೀರ್ವಾದದಿಂದ ಮುಖ್ಯಮಂತ್ರಿಯಾಗಿದ್ದೇನೆಂದರು.

ಸೋಲಿಸುವ ಪ್ರಯೋಗ ನಡೆಯಲ್ಲ: ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯನನ್ನು ಸೋಲಿಸಲು ದುಷ್ಟಶಕ್ತಿಗಳೆಲ್ಲಾ ಒಂದಾಗಿವೆ. ಇದೇನು ಹೊಸದಲ್ಲ. 2006ರ ಚಾಮುಂಡೇಶ್ವರಿ ಉಪ ಚುನಾವಣೆಯಲ್ಲೂ ಇಂತಹ ಪ್ರಯೋಗ ನಡೆಯಿತು. ಆದರೆ, ಕ್ಷೇತ್ರದ ಜನರು ತನಗೆ ಆಶೀರ್ವಾದ ಮಾಡಿದರು ಎಂದು ಸ್ಮರಿಸಿದರು.

ಶ್ರೀರಾಮ ಸಕ್ಕರೆ ಕಾರ್ಖಾನೆ ಸಮಸ್ಯೆ ಪರಿಹರಿಸಲು ಇಲ್ಲಿನವರೇ ಮಂತ್ರಿಯಾಗಿದ್ದಾಗ ಏಕೆ ಸಾಧ್ಯವಾಗಲಿಲ್ಲ. ತಾನು 15 ಕೋಟಿ ಕೊಟ್ಟ ನಂತರ ತಾನು ಮಾಡಿಸಿದೆ ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ. ತಾನು ಮನಸ್ಸು ಮಾಡದಿದ್ದರೆ ಆಗುತ್ತಿತ್ತಾ. ಅವರ ಹೆಸರನ್ನೂ ಹೇಳಬಾರದು ಎಂದು ಪರೋಕ್ಷವಾಗಿ ಎಚ್‌.ವಿಶ್ವನಾಥ್‌ ಮೇಲಿರುವ ಸಿಟ್ಟನ್ನು ತೋಡಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next