ಹೊಸದಿಲ್ಲಿ: ಜುಲೈ 2 ರಂದು ಉತ್ತರಪ್ರದೇಶದ ಹಥರಸ್ ‘ಸತ್ಸಂಗ’ದ(Hathras stampede) ವೇಳೆ ಕೆಲವು ಜನರು ವಿಷಕಾರಿ ದ್ರವವನ್ನು ಹೊಂದಿರುವ ಕ್ಯಾನ್‌ಗಳನ್ನು ಗುಂಪಿನಲ್ಲಿ ತೆರೆದು ಕಾಲ್ತುಳಿತವನ್ನು ಉಂಟುಮಾಡಿದರು ಎಂದು ಸಾಕ್ಷಿಗಳು ಹೇಳಿದ್ದಾರೆ ಎಂದು ಸ್ವಯಂಘೋಷಿತ ದೇವಮಾನವ ಭೋಲೆ ಬಾಬಾ ಅವರ ವಕೀಲ ಎ.ಪಿ.ಸಿಂಗ್ ಭಾನುವಾರ ಆರೋಪಿಸಿದ್ದಾರೆ.
ದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ವಕೀಲ ಸಿಂಗ್, ಕಾಲ್ತುಳಿತದ ಹಿಂದೆ ಭೋಲೆ ಬಾಬಾ ಅವರ ಅಪಾರ ಜನಪ್ರಿಯತೆಗೆ ಕಳಂಕ ತರಲು ಪಿತೂರಿ ಮಾಡಲಾಗಿದೆ. ಧಾರ್ಮಿಕ ಕಾರ್ಯಕ್ರಮದ ವೇಳೆ 15-16 ಮಂದಿ ವಿಷ ಎರಚಿದ್ದಾರೆ. ಕಾಲ್ತುಳಿತವಾಗುವಂತೆ ಪ್ರಚೋದಿಸಿದ ನಂತರ ಸಂಚುಕೋರರು ಸ್ಥಳದಿಂದ ಓಡಿಹೋದರು’ ಎಂದು ಹೇಳಿದ್ದಾರೆ.
’10-12 ಮಂದಿ ವಿಷ ಎರಚಿದ್ದಾರೆ. ಪ್ರತ್ಯಕ್ಷದರ್ಶಿಗಳು ಹೇಳುವಂತೆ ಮಹಿಳೆಯರು ಬೀಳುತ್ತಿದ್ದರು ಮತ್ತು ಅನೇಕರು ಉಸಿರಾಟದ ತೊಂದರೆಯಿಂದ ಸಾವನ್ನಪ್ಪಿದ್ದಾರೆ. ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಎಸ್‌ಐಟಿ ಮತ್ತು ಹಥರಾಸ್ ಎಸ್‌ಪಿ ತನಿಖೆ ನಡೆಸುತ್ತಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ವಶಪಡಿಸಿಕೊಂಡು, ಆ ವಾಹನಗಳನ್ನು ಗುರುತಿಸಬೇಕು. ಇದೆಲ್ಲವೂ ಪೂರ್ವ ಯೋಜಿತ ಕೃತ್ಯ ಎಂದು ಹೇಳಿದ್ದಾರೆ.
ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಸ್ವಯಂಘೋಷಿತ ದೇವಮಾನವ ಸೂರಜ್‌ಪಾಲ್ ಅಲಿಯಾಸ್ ನಾರಾಯಣ್ ಸಕರ್ ಹರಿ ಅಲಿಯಾಸ್ ಭೋಲೆ ಬಾಬಾನ ‘ಸತ್ಸಂಗ’ದ ನಂತರ ನಡೆದ ಕಾಲ್ತುಳಿತದಲ್ಲಿ 121 ಜನರು ಸಾವನ್ನಪ್ಪಿದರು,ಮೃತರಲ್ಲಿ ಹೆಚ್ಚಾಗಿ ಮಹಿಳೆಯರೇ ಸೇರಿದ್ದಾರೆ. ಸರಕಾರ ಉನ್ನತ ಮಟ್ಟದ ತನಿಖೆ ನಡೆಸುತ್ತಿದ್ದು ಈಗಾಗಲೇ ಕೆಲವರನ್ನು ಬಂಧಿಸಲಾಗಿದೆ. ಪ್ರಮುಖ ಆರೋಪಿ ದೇವಪ್ರಕಾಶ್ ಮಧುಕರ್ ಕಳೆದ ವಾರ ವಿಶೇಷ ತನಿಖಾ ತಂಡದ (SIT) ಮುಂದೆ ಶರಣಾಗಿದ್ದ.
ಗರಿಷ್ಠ 80,000 ಮಂದಿ ಭಾಗವಹಿಸುವ ಕಾರ್ಯಕ್ರಮಕ್ಕೆ ಸಂಘಟಕರು ಅನುಮತಿ ಪಡೆದಿದ್ದರು. ಆದರೆ 2.5 ಲಕ್ಷಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು ಎಂದು ಪ್ರಾಥಮಿಕ ತನಿಖಾ ವರದಿಗಳು ಹೇಳಿವೆ.