ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸೇರಿ ಕೆಲವರ ಹೇಳಿಕೆ, ಪ್ರಶ್ನೆಗಳಿಗೆ ಯಾವುದೇ ಉತ್ತರ ನೀಡದಿರಲು ನಿರ್ಧರಿಸಿದ್ದೇನೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
ನೆರೆ ಸಂತ್ರಸ್ತರ ಸಮಸ್ಯೆಗೆ ಸ್ಪಂದಿಸದೆ ಬೆಂಗಳೂರು ಪರಿವೀಕ್ಷಣೆ ಹೆಸರಿನಲ್ಲಿ ನಾಟಕವಾಡುತ್ತಿದ್ದಾರೆ ಎಂಬುದಾಗಿ ಎಚ್.ಡಿ.ಕುಮಾರಸ್ವಾಮಿ ಅವರ ಟ್ವೀಟ್‌ಗೆ ಭಾನುವಾರ ಗೃಹ ಕಚೇರಿ “ಕೃಷ್ಣಾ’ದಲ್ಲಿ ಪ್ರತಿಕ್ರಿಯಿಸಿದ ಯಡಿಯೂರಪ್ಪ, ನನ್ನ ಆಡಳಿತವನ್ನು ಸಹಿಸುತ್ತಿಲ್ಲ. ಕಳೆದ 14 ತಿಂಗಳ ಆಡಳಿತ ಹೇಗಿತ್ತು ಎಂಬುದು ಎಲ್ಲರಿಗೂ ತಿಳಿದಿದೆ. ಹಿಂದಿನ ಮೈತ್ರಿ ಸರ್ಕಾರದ ಆಡಳಿತವನ್ನು ಜನ ಖಂಡ ತುಂಡವಾಗಿ ಟೀಕಿಸಿದ್ದರು. ಹಾಗಾಗಿ ನಾನು ಯಾರೊಬ್ಬರ ಹೇಳಿಕೆ, ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ. ನನ್ನ ಆದ್ಯತೆಯಂತೆ ಮುಂದುವರಿಯುತ್ತೇನೆಂದು ಹೇಳಿದರು.
ಕೆಲವರು ಟೀಕೆ ಟಿಪ್ಪಣಿ ಮಾಡುತ್ತಿರುತ್ತಾರೆ. ಸದ್ಯದಲ್ಲೇ ನಾನು ಕಾರವಾರದ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತಿ ದ್ದೇನೆ. ಈ ಹಿಂದೆ ಅಲ್ಲಿಗೆ ಭೇಟಿ ನೀಡಲು ಪ್ರಯತ್ನಿಸಿದರೂ ಪ್ರತಿಕೂಲ ಹವಾಮಾನದಿಂದ ಸಾಧ್ಯವಾಗಿರಲಿಲ್ಲ. ನೆರೆಪೀಡಿತ ಪ್ರದೇಶಕ್ಕೆ ಕೇಂದ್ರ ನಿಯೋಗ ಭೇಟಿ ನೀಡಿ ಪರಿಶೀಲಿಸಿದ್ದು, ಹೆಚ್ಚಿನ ಅನುದಾನ ಸಿಗುವ ನಿರೀಕ್ಷೆ ಇದೆ ಎಂದು ತಿಳಿಸಿದರು. ಸಂಕಷ್ಟಕ್ಕೆ ಸಿಲುಕಿರುವ ಜನ, ರೈತರಿಗೆ ಸ್ಪಂದಿಸುವುದು ನಮ್ಮ ಆದ್ಯತೆ. ಎತ್ತರದ ಸ್ಥಳಗಳಲ್ಲಿ ಭೂಮಿ ಖರೀದಿಸಿ ನವ ನಗರ ನಿರ್ಮಾಣಕ್ಕೆ ಒತ್ತು ನೀಡಲಾಗುವುದು ಎಂದು ಹೇಳಿದರು.
2009ರಲ್ಲಿ ಇದೇ ರೀತಿಯ ಪರಿಸ್ಥಿತಿ ಎದುರಾಗಿದ್ದಾಗ 250ಕ್ಕೂ ಹೆಚ್ಚು ಗ್ರಾಮಗಳನ್ನು ಎತ್ತರದ ಸ್ಥಳಗಳಿಗೆ ಸ್ಥಳಾಂತರಿಸಿದ್ದರಿಂದ ಈ ಬಾರಿ ಅನಾಹುತ ತಪ್ಪಿದೆ. ಈಗಲೂ ನದಿ, ಹೊಳೆ ಪಾತ್ರದ ನಿವಾಸಿಗಳ ಸ್ಥಳಾಂತರಕ್ಕೆ ಮನವಿ ಮಾಡಲಾಗುವುದು ಎಂದು ತಿಳಿಸಿದರು. ನೆರೆಯಿಂದಾಗಿ ಸಾಕಷ್ಟು ಭೂಮಿ ಹಾಳಾಗಿದ್ದು, ದೊಡ್ಡ ಪ್ರಮಾಣದಲ್ಲಿ ಬೆಳೆ ನಾಶವಾಗಿದೆ. ಅದಕ್ಕೆ ಎಷ್ಟು ಪರಿಹಾರ ನೀಡಿದರೂ ಕಡಿಮೆ. ಈಗಾಗಲೇ ರಾಜ್ಯ ಸರ್ಕಾರಿ ನೌಕರರು ಒಂದು ದಿನ ವೇತನವನ್ನು ದೇಣಿಗೆಯಾಗಿ ನೀಡಿದ್ದಾರೆ. ಸದ್ಯದಲ್ಲೇ ಐಟಿಬಿಟಿ ಕಂಪನಿ ಪ್ರತಿನಿಧಿಗಳ ಸಭೆ ಕರೆದು ಸಂತ್ರಸ್ತರ ಸಂಕಷ್ಟಕ್ಕೆ ದೊಡ್ಡ ಪ್ರಮಾಣದಲ್ಲಿ ನೆರವಾಗುವಂತೆ ಕೋರಲಾಗುವುದು ಎಂದು ಹೇಳಿದರು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಸಚಿವರು ನೆರೆಯಿಂದ ಹಾನಿಗೊಳಗಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ ಬೀದಿಗೆ ಬಿದ್ದಿರುವ ಬಡ ಕುಟುಂಬಗಳೊಂದಿಗೆ ಕುಳಿತು ಪರಿಹಾರ ಕಾರ್ಯಗಳ ಪರಿಶೀಲನೆ ಮಾಡಬೇಕಾದ ಈ ಸಂದರ್ಭದಲ್ಲಿ “ಬೆಂಗಳೂರು ನಗರದ ಪರಿವೀಕ್ಷಣೆ’ ಎಂಬ ನಾಟಕವಾಡುತ್ತಿದ್ದಾರೆ.
-ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ