ಹೈದರಾಬಾದ್ : ಮೌಲಾನಾ ಸಯ್ಯದ್ ಸಲ್ಮಾನ್ ನದ್ವೀ ಅವರನ್ನು ಪರೋಕ್ಷವಾಗಿ ಟೀಕಿಸಿರುವ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು “ಕೆಲವು ವ್ಯಕ್ತಿಗಳು ಪ್ರಧಾನಿ ನರೇಂದ್ರ ಮೋದಿ ಅವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ ಮತ್ತು ಆ ಮೂಲಕ ಮುಸ್ಲಿಂ ಕಾನೂನು ಮಂಡಳಿಯಲ್ಲಿ ಒಡಕು ಸೃಷ್ಟಿಸುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.
ಅಯೋಧ್ಯೆಯಲ್ಲಿನ ಬಾಬರಿ ಮಸೀದಿ – ರಾಮಜನ್ಮ ಭೂಮಿ ವಿವಾದಕ್ಕೆ ಸಂಬಂಧಿಸಿ ಅಖೀಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ(ಎಐಎಂಪಿಎಲ್‌ಬಿ) ಸದಸ್ಯರಾಗಿರುವ ನದ್ವಿ ಅವರು “ಇಸ್ಲಾಂ ನಲ್ಲಿ ಮಸೀದಿ ಸ್ಥಳಾಂತರಿಸುವುದಕ್ಕೆ ಅವಕಾಶವಿದೆ’ ಎಂದು ಹೇಳಿದ್ದರು.
ಈ ಹೇಳಿಕೆಯನ್ನು ಖಂಡಿಸುತ್ತಾ ಓವೈಸಿ ಅವರು ಬಾಬರಿ ಮಸೀದಿಗೆ ಸಂಬಂಧಪಟ್ಟು ಯಾವದೇ ರಾಜಿ ಇಲ್ಲ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಅಪೇಕ್ಷೆಗೆ ಅನುಗುಣವಾಗಿ ನದ್ವೀ ಅವರು “ಮುಸ್ಲಿಮರು ಬಾಬರಿ ಮಸೀದಿ ಯನ್ನು ಬಿಟ್ಟುಕೊಡಬೇಕು’ ಎಂದು ಹೇಳುತ್ತಿದ್ದಾರೆ ಎಂದು ಓವೈಸಿ ಆರೋಪಿಸಿದರು.
‘ಮುಸ್ಲಿಮರು ಬಾಬರಿ ಮಸೀದಿಯನ್ನು ಬಿಟ್ಟುಕೊಡಬೇಕು ಎಂದು ಕರೆ ನೀಡುವ ಯಾರಿಗೇ ಆದರೂ ಮುಸ್ಮಿಮರು ಸಾಮಾಜಿಕ ಬಹಿಷ್ಕಾರ ಹಾಕಬೇಕು’ ಎಂದು ಓವೈಸಿ ಗುಡುಗಿದರು.