ದಾವಣಗೆರೆ: ಇಂದಿನ ವಾತಾವರಣದಲ್ಲಿ ಎಲ್ಲಾ ಕಾರ್ಮಿಕರು ಒಂದಾಗಲೇಬೇಕು. ಇಲ್ಲದಿದ್ದಲ್ಲಿ ಉಳಿಗಾಲ ಇಲ್ಲ ಎಂದು ಹರಪನಹಳ್ಳಿಯ ಪ್ರಗತಿಪರ ಸಾಹಿತಿ ಇಸ್ಮಾಯಿಲ್ ಎಲಿಗಾರ್ ತಿಳಿಸಿದ್ದಾರೆ. ಸಿಐಟಿಯು ಸಂಘಟನೆಯಿಂದ ಸೋಮವಾರ ರೋಟರಿ ಬಾಲಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಮಿಕ ದಿನಾಚರಣೆಯಲ್ಲಿ ಮಾತನಾಡಿದರು.
ಸರ್ಕಾರಗಳ ನೀತಿಯಿಂದಾಗಿ ಶ್ರಮಿಕ ವರ್ಗದವರ ಮುಂದೆ ಬಹು ದೊಡ್ಡ ಸವಾಲುಗಳಿವೆ. ಸಂಕಷ್ಟದ ದಿನಗಳಿವೆ. ವಿವಿಧ ಕಾರಣದಿಂದ ಛಿದ್ರವಾಗಿರುವ ಕಾರ್ಮಿಕ ಸಂಘಟನೆಗಳು ಒಂದಾಗಬೇಕು. ಇಲ್ಲದಿದ್ದಲ್ಲಿ ಕಾರ್ಮಿಕ ಸಮೂಹದ ಹಿತಾಸಕ್ತಿ ಕಾಪಾಡಲಿಕ್ಕೆ ಸಾಧ್ಯ ಇಲ್ಲ ಎಂದರು.
ಅಚ್ಚೆದಿನ್ ಹೆಸರಲ್ಲಿ ಅಧಿಕಾರಕ್ಕೆ ಬಂದಿರುವ ಕೇಂದ್ರ ಸರ್ಕಾರ ಅನುಸರಿಸುತ್ತಿರುವ ಕಾರ್ಪೋರೇಟ್ ಕಂಪನಿಗಳ ಪರವಾದ ನೀತಿಗಳು ಲೂಟಿಕೋರ ಸಂಸ್ಥೆಗಳಿಗೆ ಅತ್ಯಂತ ಒಳ್ಳೆಯ ದಿನ ತರುತ್ತಿವೆ. ಸಂಪತ್ತು ಎನ್ನುವುದು ಕೆಲವೇ ಕೆಲ ಮನೆತನಗಳ ಪಾಲಾಗುತ್ತಿದೆ.
ಅದನ್ನೇ ಕೇಂದ್ರ ಸರ್ಕಾರ ದೇಶದ ಸಮಗ್ರ ಅಭಿವೃದ್ಧಿ ಎನ್ನುವಂತೆ ಬಿಂಬಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಆಹಾರ ಆಯಾಯ ಜನರ ಆಯ್ಕೆ. ಆದರೆ, ಕೇಂದ್ರ ಸರ್ಕಾರ ಗೋ ಹತ್ಯೆ ನಿಷೇಧ, ನೋಟು ರದ್ಧತಿಗಳ ವಿಷಯದಲ್ಲೂ ರಾಜಕಾರಣ ಮಾಡುತ್ತಿದೆ.
ಸಾರ್ವಜನಿಕರ ಮೇಲೆ ಹಲವಾರು ವಿಷಯಗಳನ್ನ ಬಲವಂತವಾಗಿ ಹೇರಲಾಗುತ್ತಿದೆ. ಕಾರ್ಮಿಕ ವರ್ಗಕ್ಕೆ ನೀಡಬೇಕಾದ ಸೌಲಭ್ಯ ನೀಡಲಾಗುತ್ತಿಲ್ಲ ಎಂದು ತಿಳಿಸಿದರು. ಸಂಘಟನೆ ಜಿಲ್ಲಾ ಗೌರವ ಅಧ್ಯಕ್ಷ ಕೆ.ಎಲ್. ಭಟ್, ಎಂ.ಆರ್. ಹಿರೇಮಠ, ಕೆ.ಎಚ್. ಆನಂದಮೂರ್ತಿ, ಶ್ರೀನಿವಾಸಮೂರ್ತಿ, ಕೈದಾಳ್ ಉಮೇಶ್, ಟಿ.ವಿ. ರೇಣುಕಮ್ಮ ಇತರರು ಇದ್ದರು. ಕಾರ್ಯಕ್ರಮದ ಮುನ್ನ ಮಹಾನಗರಪಾಲಿಕೆಯಿಂದ ಮೆರವಣಿಗೆ ನಡೆಯಿತು.