ಹೊಸದಿಲ್ಲಿ: ದಿಲ್ಲಿ ಚುನಾವಣೆಯ ಫಲಿತಾಂಶ, ಕಾಂಗ್ರೆಸ್ ಪಕ್ಷದಲ್ಲಿರುವ ಭಿನ್ನಮತ, ಬೇಗುದಿಗೆ ತುಪ್ಪ ಸುರಿದಿದೆ. ಕೆಲವು ನಾಯಕರ ನಡೆ – ನುಡಿ, ಧೋರಣೆಗಳನ್ನು, ಹಿರಿಯ ನಾಯಕರು ಬಹಿರಂಗವಾಗಿಯೇ ಟೀಕಿಸಲಾರಂಭಿಸಿದ್ದಾರೆ.
ಕೇಂದ್ರದ ಮಾಜಿ ಸಚಿವ ಜೈರಾಂ ರಮೇಶ್ ಟ್ವೀಟ್‌ನಲ್ಲಿ ‘ನಾವು ಅಧಿಕಾರ ಕಳೆದುಕೊಂಡು ಆರು ವರ್ಷಗಳಾಗಿದ್ದರೂ ನಮ್ಮ ಕೆಲವು ನಾಯಕರು ತಾವಿನ್ನೂ ಸಚಿವ ಸ್ಥಾನದಲ್ಲೇ ಇದ್ದೇವೆ ಎಂಬಂತೆ ವರ್ತಿಸುತ್ತಿದ್ದಾರೆ. ಅವರೆಲ್ಲರೂ ಆತ್ಮವಿಮರ್ಶೆ ಮಾಡಿಕೊಳ್ಳಬೇಕು’ ಎಂದು ಖಾರವಾಗಿಯೇ ಹೇಳಿದ್ದಾರೆ.
ಕೇಂದ್ರದ ಮಾಜಿ ಸಚಿವ ಜ್ಯೋತಿರಾದಿತ್ಯ ಸಿಂದಿಯಾ, ಶುಕ್ರವಾರ ಟ್ವೀಟ್ ಮಾಡಿ “ಚುನಾವಣಾ ಫಲಿತಾಂಶವು ಕಾಂಗ್ರೆಸ್ ಪಾಲಿಗೆ ನಿರಾಶಾದಾಯಕ. ಇಂಥ ಸಂದರ್ಭದಲ್ಲಿ ಕಾಂಗ್ರೆಸ್‌ಗೆ ಹೊಸ ಧ್ಯೇಯದೊಂದಿಗೆ, ಹೊಸ ಕಾರ್ಯತಂತ್ರಗಳೊಂದಿಗೆ, ಹೊಸ ದಿಕ್ಕಿನಲ್ಲಿ ಸಾಗುವುದು ಅನಿವಾರ್ಯ. ಹಾಗಾದಲ್ಲಿ ಮಾತ್ರ ಜನರನ್ನು ನಾವು ತಲುಪಲು ಸಾಧ್ಯ’ ಎಂದಿದ್ದಾರೆ.
ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಪುತ್ರಿ ಶರ್ಮಿಷ್ಠೆ ಮುಖರ್ಜಿ ಕೂಡ ಟ್ವೀಟ್ ಮಾಡಿ ಆಪ್ ಅನ್ನು ಕೊಂಡಾಡಿದ್ದ ಮಾಜಿ ಸಚಿವ ಪಿ. ಚಿದಂಬರಂರನ್ನು ತರಾಟೆಗೆ ತೆಗೆದುಕೊಂಡಿದ್ದರು. ‘ಬಿಜೆಪಿಯನ್ನು ಸೋಲಿಸಲು ನಾವು ಬೇರೆಯವರಿಗೆ ಹೊರಗುತ್ತಿಗೆ ನೀಡಿದ್ದೇವೆಯೇ? ಇಲ್ಲ ಎಂದಾದರೆ ನಾವು ಆಪ್‌ನ ವಿಜಯವನ್ನು ಏಕೆ ಸಂಭ್ರಮಿಸಬೇಕು? ‘ಹೌದು’ ಎಂದಾದರೆ ನಾವು ನಮ್ಮ ‘ಅಂಗಡಿ’ಯನ್ನು ಮುಚ್ಚುವುದೇ ಲೇಸು, ಅಲ್ಲವೇ?’ ಎಂದು ಪ್ರಶ್ನಿಸಿದ್ದರು.
ವಿಶೇಷ ಅತಿಥಿ: ಚುನಾವಣೆ ಫಲಿತಾಂಶ ಹೊರಬಿದ್ದ ದಿನ ಮನಗೆದ್ದಿದ್ದ “ಬೇಬಿ ಮಫ್ಲರ್‌ಮ್ಯಾನ್’ ಎಂದೇ ಖ್ಯಾತನಾದ ಪುಟ್ಟ ಮಗು ಆವ್ಯಾನ್ ತೋಮರ್‌ನನ್ನು ಫೆ. 16ರಂದು ರಾಮ್‌ಲೀಲಾ ಮೈದಾನ ದಲ್ಲಿ ನಡೆಯಲಿರುವ, ದಿಲ್ಲಿ ಮುಖ್ಯಮಂತ್ರಿಯಾಗಿ ಅರವಿಂದ್ ಕೇಜ್ರಿವಾಲ್ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಆಹ್ವಾನಿಸಲಾಗಿದೆ. ಈ ಮಗುವಿನ ತಂದೆ ರಾಹುಲ್ ಆಪ್ ಕಾರ್ಯ ಕರ್ತರಾಗಿದ್ದಾರೆ.