Advertisement

ದಂತ ಚಿಕಿತ್ಸೆ ಕೆಲವು ಸಾಮಾನ್ಯ ತಪ್ಪು ಕಲ್ಪನೆಗಳು

10:26 PM Oct 19, 2019 | Sriram |

ಜನಸಾಮಾನ್ಯರಲ್ಲಿ ದಂತ ಚಿಕಿತ್ಸೆಯ ಬಗ್ಗೆ ಇರುವ ಕೆಲವು ಸಾಮಾನ್ಯ ತಪ್ಪು ಕಲ್ಪನೆಗಳನ್ನು ನಿವಾರಿಸುವ ಉದ್ದೇಶವುಳ್ಳದ್ದಾಗಿದೆ. ಕಳೆದ ಒಂದು ದಶಕದಲ್ಲಿ ದಂತ ಚಿಕಿತ್ಸೆಯು ಒಂದು ತಜ್ಞ ವೈದ್ಯಕೀಯ ಕ್ಷೇತ್ರವಾಗಿ ಅಪಾರ ಪ್ರಗತಿ, ಬೆಳವಣಿಗೆಯನ್ನು ಸಾಧಿಸಿದೆ. ಆದರೂ ದಂತ ಚಿಕಿತ್ಸೆಗೆ ಸಂಬಂಧಿಸಿದಂತೆ ಕೆಲವು ತಪ್ಪು ಕಲ್ಪನೆಗಳು ಜನರಲ್ಲಿ ಇನ್ನೂ ಉಳಿದುಕೊಂಡಿವೆ. ಇವುಗಳು ಕೆಲವೊಮ್ಮೆ ಸಕಾಲದಲ್ಲಿ ಸರಿಯಾದ ದಂತ ಚಿಕಿತ್ಸೆಯನ್ನು ಪಡೆದುಕೊಳ್ಳುವುದಕ್ಕೆ ಅಡ್ಡಿಯಾಗುತ್ತವೆ ಮತ್ತು ಇದರಿಂದಾಗಿ ಗಂಭೀರ ಸಮಸ್ಯೆಗಳು ಉದ್ಭವಿಸುತ್ತವೆ. ಆದ್ದರಿಂದಲೇ ದಂತ ಚಿಕಿತ್ಸೆಗೆ ಸಂಬಂಧಿಸಿದ ತಪ್ಪು ಕಲ್ಪನೆಯನ್ನು ನಿವಾರಿಸುವುದು ಮುಖ್ಯವಾಗಿದೆ.

Advertisement

1. ದಂತ ಚಿಕಿತ್ಸೆಯು ಬಹಳ ದುಬಾರಿ: ದಂತ ಚಿಕಿತ್ಸೆಯು ನಿಜವಾಗಿ ದುಬಾರಿಯಲ್ಲ; ಆದರೆ ನಾವು ವಹಿಸುವ ನಿರ್ಲಕ್ಷ್ಯದಿಂದ ಸಮಸ್ಯೆ ಗಂಭೀರ ಸ್ವರೂಪಕ್ಕೆ ತಿರುಗಿದಾಗ ದುಬಾರಿ ಚಿಕಿತ್ಸೆಗಳು ಅಗತ್ಯವಾಗುತ್ತವೆ. ಚಿಕಿತ್ಸೆಯನ್ನು ಸರಿಯಾದ ಸಮಯಕ್ಕೆ ಕೈಗೊಂಡರೆ ಸಮಸ್ಯೆಗಳನ್ನು ಕನಿಷ್ಠ ವೆಚ್ಚದಲ್ಲಿ ನಿಭಾಯಿಸಬಹುದಾಗಿರುತ್ತದೆ. ನಮ್ಮ ದೇಹಕ್ಕಿಂತ ಅಮೂಲ್ಯವಾದುದು ಇನ್ಯಾವುದೂ ಇಲ್ಲ; ಆದ್ದರಿಂದ ವಿಳಂಬ ಮಾಡದೆ, ಸಮಸ್ಯೆಯನ್ನು ಹಗುರವಾಗಿ ಪರಿಗಣಿಸದೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ಪಡೆಯಬೇಕು.
2. ದಂತ ಚಿಕಿತ್ಸೆಯು ತುಂಬಾ ನೋವುಂಟು ಮಾಡುತ್ತದೆ: ಸ್ಥಳೀಯ ಅರಿವಳಿಕೆಯ ಸಮರ್ಪಕವಾದ ಬಳಕೆಯಿಂದ ಯಾವುದೇ ದಂತ ಚಿಕಿತ್ಸೆಯನ್ನು ನೋವು ಮತ್ತು ತೊಂದರೆ ಅತ್ಯಂತ ಕಡಿಮೆ ಪ್ರಮಾಣದಲ್ಲಿರುವಂತೆ ಕೈಗೊಳ್ಳಬಹುದು. ರೋಗಿಗೆ ಮತ್ತೂ ಹೆದರಿಕೆ ಇದ್ದರೆ ಪೂರ್ಣ ಅರಿವಳಿಕೆ ಮತ್ತು ಮತ್ತು ಬರಿಸುವ ಔಷಧ ಪ್ರಯೋಗದ ಆಯ್ಕೆಗಳೂ ಇದ್ದು, ಇದರಿಂದ ಚಿಕಿತ್ಸೆಯು ಆರಾಮದಾಯಕವಾಗುತ್ತದೆ.
3. ವಸಡಿನಲ್ಲಿ ರಕ್ತಸ್ರಾವ ಆಗುತ್ತಿದ್ದರೆ ಹಲ್ಲುಜ್ಜಬಾರದು: ವಾಸ್ತವವಾಗಿ ಇದರ ವಿರುದ್ಧ, ಎಂದರೆ ಹಲ್ಲುಜ್ಜಬೇಕು ಎನ್ನುವುದು ನಿಜ. ವಸಡುಗಳಲ್ಲಿ ರಕ್ತಸ್ರಾವ ಆಗುತ್ತಿದೆ ಎಂದಾದರೆ ಅದಕ್ಕೆ ಉರಿಯೂತ ಮತ್ತು ಸೋಂಕು ಕಾರಣವಾಗಿರುತ್ತದೆ. ಆಗ ವ್ಯಕ್ತಿಯು ಆದಷ್ಟು ಬೇಗನೆ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯಬೇಕು. ಬಾಯಿಯ ನೈರ್ಮಲ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಬೇಕು.
4. ಹಲ್ಲು ತೆಗೆದರೆ ಕಣ್ಣಿಗೆ ತೊಂದರೆಯಾಗುತ್ತದೆ: ಜನಸಾಮಾನ್ಯರಲ್ಲಿ ಸಾಕಷ್ಟು ಪ್ರಮಾಣದಲ್ಲಿ ಇರುವ ಇನ್ನೊಂದು ತಪ್ಪು ಕಲ್ಪನೆಯಿದು. ಹಲ್ಲು ತೆಗೆದರೆ ಕಣ್ಣಿಗೆ ತೊಂದರೆಯಾಗುತ್ತದೆ, ದೃಷ್ಟಿ ನಾಶವಾಗುತ್ತದೆ ಎಂಬ ಹೇಳಿಕೆಯಲ್ಲಿ ಯಾವುದೇ ಸತ್ಯಾಂಶ ಇಲ್ಲ.
5. ಹಲ್ಲುಗಳನ್ನು ಉಪ್ಪು, ಇದ್ದಿಲು, ತಂಬಾಕು ಉಪಯೋಗಿಸಿ ಶುಚಿ ಮಾಡುವುದು ದಂತ ಆರೋಗ್ಯಕ್ಕೆ ಒಳ್ಳೆಯದು: ನಮ್ಮ ಹಲ್ಲುಗಳು ಸೂಕ್ಷ್ಮವಾದ ಎನಾಮಲ್‌ ಪದರದಿಂದ ಆವರಿಸಲ್ಪಟ್ಟಿವೆ. ಉಪ್ಪು ಮತ್ತು ಇದ್ದಿಲಿನಂತಹ ಒರಟು ವಸ್ತುಗಳಿಂದ ಶುಚಿಗೊಳಿಸುವುದರಿಂದ ಈ ಎನಾಮಲ್‌ ಪದರ ನಾಶವಾಗುವ ಸಾಧ್ಯತೆಯಿದೆ. ಇದರಿಂದ ಹಲ್ಲು ಸವಕಳಿ ಉಂಟಾಗುತ್ತದೆ. ಮಾರುಕಟ್ಟೆಯಲ್ಲಿ ದೊರಕುವ ಟೂತ್‌ಪೇಸ್ಟ್‌ ಮತ್ತು ಟೂತ್‌ಪೌಡರ್‌ಗಳನ್ನು ಹಲ್ಲುಗಳ ರಚನಶಾಸ್ತ್ರವನ್ನು ಗಮನದಲ್ಲಿ ಇರಿಸಿಕೊಂಡು ತಯಾರಿಸಲಾಗಿರುತ್ತದೆ ಮತ್ತು ಅವು ಹಲ್ಲು ಸವಕಳಿ ಉಂಟು ಮಾಡುವುದಿಲ್ಲ. ತಂಬಾಕಿಗೆ ಸಂಬಂಧಿಸಿ ಹೇಳುವುದಾದರೆ, ಸತತವಾಗಿ ತಂಬಾಕನ್ನು ಹಲ್ಲು ಶುಚಿಗೊಳಿಸಲು ಉಪಯೋಗಿಸಿದರೆ ಅದರಿಂದ ತಂಬಾಕು ಜಗಿಯುವ ಚಟ ಹುಟ್ಟಿಕೊಳ್ಳುವ ಸಾಧ್ಯತೆಯಿದೆ. ಇದನ್ನು ವರ್ಜಿಸಲೇ ಬೇಕು.
6. ಗರ್ಭಧಾರಣೆಯ ಸಂದರ್ಭ ಯಾವುದೇ ಬಗೆಯ ದಂತ ಚಿಕಿತ್ಸೆ ಪಡೆಯಬಾರದು: ಮಹಿಳೆಯ ಆರೋಗ್ಯದ ಜತೆಗೆ ಗರ್ಭದಲ್ಲಿರುವ ಭ್ರೂಣದ ಆರೋಗ್ಯವನ್ನೂ ಗಮನದಲ್ಲಿ ಇರಿಸಿಕೊಳ್ಳಬೇಕಾದ ನಿರ್ಣಾಯಕ ಕಾಲಘಟ್ಟ ಗರ್ಭಧಾರಣೆ. ಗರ್ಭ ಧರಿಸಿದ ಸಂದರ್ಭದಲ್ಲಿ ಹಲ್ಲಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಯನ್ನು ನಿರ್ಲಕ್ಷಿಸದೆ ವೈದ್ಯರ ಸಲಹೆ – ಚಿಕಿತ್ಸೆ ಪಡೆಯಬೇಕು.
7. ಹಾಲುಹಲ್ಲುಗಳು ಹೇಗೂ ಬಿದ್ದುಹೋಗುವಂಥವು; ಆದ್ದರಿಂದ ಹೆಚ್ಚು ಕಾಳಜಿ ವಹಿಸಬೇಕಾಗಿಲ್ಲ: ಖಾಯಂ ಹಲ್ಲುಗಳಂತೆಯೇ ಹಾಲು ಹಲ್ಲುಗಳು ಕೂಡ ಮುಖ್ಯ. ಹಾಲು ಹಲ್ಲುಗಳು ಬೇಗನೆ ಹುಳುಕಾಗಿ ಬಿದ್ದುಹೋದರೆ ಮಗುವಿನ ಒಟ್ಟಾರೆ ಪೌಷ್ಟಿಕಾಂಶ ಮಟ್ಟ ತೊಂದರೆಗೀಡಾಗಿ ಆರೋಗ್ಯಕ್ಕೆ ಸಮಸ್ಯೆಯನ್ನು ಉಂಟು ಮಾಡುವ ಸಾಧ್ಯತೆಗಳಿವೆ. ಹಾಲು ಹಲ್ಲುಗಳು ಬೇಗನೆ ಬಿದ್ದುಹೋದರೆ ಖಾಯಂ ಹಲ್ಲು ಗಳು ಓರೆಕೋರೆಯಾಗಿ ಬೆಳೆಯುವ ಸಾಧ್ಯತೆಗಳಿರುತ್ತವೆ, ಅವು ಸರಿಯಾಗಿ ಜೋಡಣೆ ಯಾಗುವುದಿಲ್ಲ. ಆದ್ದರಿಂದ ಹಾಲು ಹಲ್ಲು ಗಳಿಗೂ ಪ್ರಾಮುಖ್ಯ ನೀಡಬೇಕಾದ್ದು ಅಗತ್ಯ.
8. ಶಿಶುಗಳು ಮತ್ತು ಪುಟ್ಟ ಮಕ್ಕಳ ಹಲ್ಲುಗಳನ್ನು ಶುಚಿಗೊಳಿಸಬೇಕಾಗಿಲ್ಲ: ನಿಜಾಂಶವೆಂದರೆ, ಪ್ರತೀ ಬಾರಿ ಹಾಲು ಅಥವಾ ಆಹಾರ ಉಣ್ಣಿಸಿದ ಬಳಿಕ ಶಿಶುಗಳು ಮತ್ತು ಹಸುಳೆಗಳ ಹಲ್ಲು ಮೂಡದ ವಸಡುಗಳನ್ನು ಮೃದುವಾದ ಹತ್ತಿಯನ್ನು ಉಪಯೋಗಿಸಿ ಶುಚಿಗೊಳಿಸಬೇಕು. ಮೊದಲ ಹಾಲು ಹಲ್ಲು ಮೂಡುವುದಕ್ಕೆ ಮೊದಲೇ ಮಗುವನ್ನು ಮೊದಲ ಬಾರಿಗೆ ದಂತ ವೈದ್ಯರ ತಪಾಸಣೆಗೆ ಒಳಪಡಿಸಬೇಕು. ಬಾಯಿಯಲ್ಲಿ ಮೊದಲ ಹಾಲು ಹಲ್ಲು ಮೂಡಿದ ಬಳಿಕ ಮೃದುವಾದ ಬ್ರಶ್‌ ಉಪಯೋಗಿಸಿ ಹಲ್ಲು ತೊಳೆಯುವುದನ್ನು ಆರಂಭಿಸಬೇಕು.

ದಂತ ಚಿಕಿತ್ಸೆಗೆ ಸಂಬಂಧಿಸಿ ಓದುಗರಲ್ಲಿ ಇರಬಹುದಾದ ಕೆಲವು ಸಾಮಾನ್ಯ ತಪ್ಪು ಕಲ್ಪನೆಗಳನ್ನು ಈ ಲೇಖನವು ನಿವಾರಿಸಿದರೆ ಮತ್ತು ದಂತ ಆರೋಗ್ಯದ ಬಗ್ಗೆ ಎಚ್ಚರವನ್ನು ಉಂಟು ಮಾಡಿ ಸರಿಯಾದ ಸಮಯದಲ್ಲಿ ವೈದ್ಯರನ್ನು ಸಂಪರ್ಕಿಸುವಂತೆ ಮಾಡಿದರೆ ನಮ್ಮ ಪ್ರಯತ್ನ ಸಾರ್ಥಕ. ನಮ್ಮ ಬಾಯಿ ನಮ್ಮ ದೇಹದ ಹೆಬ್ಟಾಗಿಲು ಎಂಬುದನ್ನು ಸದಾ ನೆನಪಿಡಿ; ಆದ್ದರಿಂದ ಅದರ ಆರೋಗ್ಯ, ಆರೈಕೆ ಅತ್ಯಂತ ಮುಖ್ಯ ಎಂಬುದೂ ನಮ್ಮ ಗಮನದಲ್ಲಿರಲಿ.

ಡಾ| ಆನಂದ್‌ ದೀಪ್‌ ಶುಕ್ಲಾ,
ಅಸೋಸಿಯೇಟ್‌ ಪ್ರೊಫೆಸರ್‌,
ಓರಲ್‌ ಮತ್ತು ಮ್ಯಾಕ್ಸಿಲೊಫೇಶಿಯಲ್‌ ಸರ್ಜರಿ ವಿಭಾಗ, ಮಣಿಪಾಲ ದಂತ ವೈದ್ಯಕೀಯ ಕಾಲೇಜು, ಮಣಿಪಾಲ

Advertisement

Udayavani is now on Telegram. Click here to join our channel and stay updated with the latest news.

Next