Advertisement

ಜಲ ಗ್ರಾಮವಾಗಿ ಕಂಗೊಳಿಸಲಿದೆ ಸೋಮದೇವರಹಟ್ಟಿ

08:15 AM Feb 16, 2019 | |

ವಿಜಯಪುರ: ಊರಿಗೊಂದು ವನ, ಗ್ರಾಮಕ್ಕೊಂದು ಕೆರೆ ಎಂಬುದು ಘೋಷಣೆಯಾಗಿತ್ತು. ಗ್ರಾಮಕ್ಕೊಂದು ಕೆರೆ ನಿರ್ಮಾಣ ಕಷ್ಟಸಾಧ್ಯ. ಅದಕ್ಕೆ ನೂರಾರು ಅಡಚಣೆಗಳು. ಕೆರೆ ನಿರ್ಮಾಣಕ್ಕೆ ಸೂಕ್ತ ನಿವೇಶನ ಇಲ್ಲದಿರುವದು. ನಿವೇಶನ ಇದ್ದರೆ, ಭೂಸ್ವಾಧೀನ ಸಮಸ್ಯೆ. ರೈತರು ಭೂಮಿ ನೀಡಿದರೂ ಯೋಗ್ಯ ಪರಿಹಾರದ ತೊಂದರೆಗಳು. ಇಷ್ಟಾಗಿ ಹಣಕಾಸಿನ, ತಾಂತ್ರಿಕ ಅನುಮೋದನೆಗಳು. ಮೇಲಾಗಿ ರಾಜಕೀಯ ಇಚ್ಛಾಶಕ್ತಿ ಕೊರತೆ. ಇಂತಹ ಹಲವು ಅಡೆತಡೆ ನಿವಾರಿಸಿ, ಸಣ್ಣ ಗ್ರಾಮದಲ್ಲಿ 3ನೇ ಕೆರೆ ನಿರ್ಮಾಣಗೊಳ್ಳುತ್ತಿದೆ.

Advertisement

ತಿಕೋಟಾ ಸಮೀಪದ ಸೋಮದೇವರಹಟ್ಟಿ ಒಂದಲ್ಲ, ಎರಡಲ್ಲ ಮೂರು ಕೆರೆಗಳನ್ನು ಹೊಂದಿದ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಬರದ ಜಿಲ್ಲೆ ಎಂದೇ ಈ ಹಿಂದೆ ಖ್ಯಾತವಾಗಿದ್ದ ವಿಜಯಪುರ ಜಿಲ್ಲೆ ಅದರಲ್ಲೂ ಗೃಹ ಸಚಿವ ಎಂ.ಬಿ. ಪಾಟೀಲ ಪ್ರತಿನಿಧಿಸುವ ಬಬಲೇಶ್ವರ ವಿಧಾನಸಭಾ ಕ್ಷೇತ್ರ ಕೆರೆಗಳ ತವರೂರು. ಇಲ್ಲಿ ಎಲ್ಲಿ ನೋಡಿದರಲ್ಲಿ ಕೆರೆಗಳು. ಆ ಕೆರೆಗಳಿಗೆ ದೂರದ ಕೃಷ್ಣಾ ನದಿಯಿಂದ ನೀರೆತ್ತಿ ತುಂಬಿಸಲಾಗುತ್ತಿದ್ದು, ಬೇಸಿಗೆಯಲ್ಲಿಯೂ ಈ ಕೆರೆಗಳು ನೀರಿನಿಂದ ನಳ-ನಳಿಸುತ್ತಿವೆ. 

ತಿಕೋಟಾ ತಾಲೂಕಿನ ಸೋಮದೇವರಹಟ್ಟಿ ಗ್ರಾಮದಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಕೆರೆ ನಿರ್ಮಾಣಕ್ಕೆ ಗೃಹ ಸಚಿವ ಎಂ.ಬಿ. ಪಾಟೀಲ ಫೆ. 18 ರಂದು ಸಂಜೆ ಭೂಮಿಪೂಜೆ ನೆರೆವೇರಿಸಲಿದ್ದು, ಈ ಕೆರೆ ನಿರ್ಮಾಣದಿಂದ ಒಂದೇ ಗ್ರಾಮದಲ್ಲಿ ಮೂರು ಕೆರೆ ಹೊಂದಿದ ಹೆಮ್ಮೆ ಸೋಮದೇವರಹಟ್ಟಿಗೆ ದೊರೆಯಲಿದೆ. 

ಜಿಲ್ಲೆಯ ಅತ್ಯಂತ ಎತ್ತರದ ಪ್ರದೇಶವಾದ ತಿಕೋಟಾ ಹೋಬಳಿಯಲ್ಲಿಯೇ ಇನ್ನು ಎತ್ತರವಾಗಿರುವ ಒಣಭೂಮಿ ಹೊಂದಿರುವ ಗುಡ್ಡಗಾಡು ಪ್ರದೇಶವೇ ಸೋಮದೇವರಹಟ್ಟಿ ಗ್ರಾಮ. ಇಲ್ಲಿ ಪ್ರಥಮವಾಗಿ ಕೆರೆ ನಿರ್ಮಾಣವಾಗಿದ್ದು, ಕಾಖಂಡಕಿಯ ಜಿ.ಎನ್‌. ಪಾಟೀಲರು 1974ರಲ್ಲಿ ತಿಕೋಟಾ
ಶಾಸಕರಾಗಿದ್ದ ಸಂದರ್ಭದಲ್ಲಿ, 2.88 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಈ ಕೆರೆ ಇಂದಿಗೂ ಎರಡನೂರು ಎಕರೆಗೂ ಹೆಚ್ಚು ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರಕಿಸುತ್ತದೆ. 2007ರಲ್ಲಿ ಈ ಗ್ರಾಮದಲ್ಲಿ ಅಂದು ತಿಕೋಟಾ ಶಾಸಕರಾಗಿದ್ದ ಎಂ.ಬಿ. ಪಾಟೀಲರು 30 ಲಕ್ಷ ವೆಚ್ಚದಲ್ಲಿ ಕೆರೆ ನಿರ್ಮಿಸಿದ್ದು, ಇದು ನೂರು ಎಕರೆ ಪ್ರದೇಶಕ್ಕೆ ನೀರಾವರಿ ಒದಗಿಸುತ್ತದೆ. ಇದೀಗ ಸೋಮದೇವರಹಟ್ಟಿಯಲ್ಲಿ ನಿರ್ಮಿಸುತ್ತಿರುವ ಸೈಟ್‌-3 ಕೆರೆ 91 ಲಕ್ಷ ರೂ. ವೆಚ್ಚದಲ್ಲಿ 9 ತಿಂಗಳು ಅವಧಿಯಲ್ಲಿ ನಿರ್ಮಾಣವಾಗಲಿರುವ ಈ ಕೆರೆ ಉದ್ದ 130 ಮೀಟರ್‌ ಆಗಿದ್ದು, 8.18 ಮೀಟರ್‌ ಎತ್ತರವಿದ್ದು, 2ಎಂ.ಸಿ.ಎಫ್‌.ಟಿ ನೀರು ಶೇಖರಣಾ ಸಾಮರ್ಥಯ ಹೊಂದಿದ್ದು, 35 ಮೀಟರ್‌ ಕೋಡಿ ಇದೆ. ಈ ಎಲ್ಲ ಕೆರೆಗಳಿಗೂ ಕೆರೆ ತುಂಬುವ ಯೋಜನೆಯಡಿ ಪೈಪ್‌ಲೈನ್‌ ಅಳವಡಿಸಿ, ನೀರು ತುಂಬಿಸಲಾಗುತ್ತಿದ್ದು, ಇದೀಗ ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆಯ ಕಾಲುವೆ ಜಾಲದ ಮುಖಾಂತರ ಕೂಡ ಈ ಕೆರೆ ತುಂಬಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಒಂದೇ ಗ್ರಾಮದಲ್ಲಿ ಮೂರು ಕೆರೆಗಳನ್ನು ಹೊಂದುವ ಮೂಲಕ ಸೋಮದೇವರಹಟ್ಟಿ ಜಲಗ್ರಾಮವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next