Advertisement
“ಕಾಲಿದ್ದರೆ ಹಂಪಿ ನೋಡು, ಕಣ್ಣಿದ್ದರೆ ಕನಕಗಿರಿ ನೋಡು, ಪುಣ್ಯ ಮಾಡಿದ್ದರೆ ಪುರ ನೋಡು’ ಎಂಬ ನಾಣ್ಣುಡಿಯೇ ಇದೆ. ಭಾರತದಲ್ಲಿನ ಅಪರೂಪದ, ಪುರಾತನ ಶೈವ ದೇಗುಲದ ಖ್ಯಾತಿ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಪುರ ಗ್ರಾಮದ ಸೋಮನಾಥ ದೇಗುಲದ್ದು. ಇದು ಒಂದು ಕೋಟಿ ಶಿವಲಿಂಗಗಳ ಸಂಗಮ! ಪ್ರತಿವರ್ಷ ಶಿವರಾತ್ರಿಯಂದು ನಡೆಯುವ ವಿಶೇಷ ಪೂಜೆ ಮತ್ತು ಸೋಮನಾಥನ ರಥೋತ್ಸವಕ್ಕೆ ಕನ್ನಡಿಗರಲ್ಲದೇ, ಆಂಧ್ರ ಹಾಗೂ ಮಹಾರಾಷ್ಟ್ರಗಳ ಭಕ್ತರೂ ಇಲ್ಲಿ ಸಾಮರಸ್ಯದ ಭಕ್ತಿ ಮೆರೆಯುವರು.
ವಿಜಯನಗರದ ಅರಸರ ಕಾಲದ ದೇಗುಲವಿದು. ಇಲ್ಲಿರುವ ಪಂಚಲಿಂಗ, ಅಷ್ಟಲಿಂಗ, ನವಗ್ರಹಲಿಂಗ, ಮತ್ಸಲಿಂಗ, ಚೋಳುಲಿಂಗ, ಮುನಿಸುಲಿಂಗ , ತಿರುಗಣಿ ಲಿಂಗ… ಹೀಗೆ ವಿವಿಧ ಹೆಸರುಗಳಿಂದ ಕೂಡಿರುವ ಶಿವಲಿಂಗಗಳು ತಮ್ಮ ತಲೆಯ ಮೇಲೆ ನೂರಾರು ಲಿಂಗಗಳನ್ನು ಹೊತ್ತು ನಿಂತಿವೆ. ಎಲ್ಲವೂ ಕಾಡುಗಲ್ಲಿನ ಸೃಷ್ಟಿಗಳು. ದೇಗುಲದ ಒಳ- ಹೊರಗೆಲ್ಲ ಶಿವಲಿಂಗಗಳೇ ಆಕ್ರಮಿಸಿಕೊಂಡಿವೆ. ಕಡಲೆಕಾಳಿನ ಗಾತ್ರದಿಂದ ಹಿಡಿದು ಆನೆ ಗಾತ್ರದವರೆಗೂ ಲಿಂಗಗಳಿವೆ! ಕೋಟಿ ಲಿಂಗಕ್ಕೆ ಮುಟ್ಟುವ ತೀರ್ಥ!
ಗರ್ಭಗುಡಿಯ ಮುಂದೆ, ಒಂದು “ಹರಿವಾಣ ಲಿಂಗ’ ಎಂಬುದಿದೆ. ಇದರ ಒಂದು ಕಡೆ ಹರಿಯ ಚಿತ್ರವಿದೆ. ಹಿಂದೆ ಈ ಕೋಟಿ ಲಿಂಗಗಳಿಗೆ ಪ್ರತಿದಿನ ತೀರ್ಥ ಹಾಗೂ ನೈವೇದ್ಯ ಮುಟ್ಟಿಸುವುದು ಅಸಾಧ್ಯವಾಗಿದ್ದಾಗ, ಲಿಂಗದ ಮೇಲೆ ತೀರ್ಥ ಹಾಕಿ, ಇದನ್ನು ಒಂದು ಸುತ್ತು ತಿರುಗಿಸಿದರೆ, ಸುತ್ತಲಿರುವ ಕೋಟಿ ಶಿವಲಿಂಗಗಳಿಗೆ ಅದು ಏಕಕಾಲಕ್ಕೆ ಮುಟ್ಟುತ್ತಿತ್ತಂತೆ. ಇದಕ್ಕೆ ಪೂರಕವಾಗಿ ಕಲ್ಲಿನ ಕೊಳವೆಯ ವ್ಯವಸ್ಥೆ ಇತ್ತಂತೆ. ಈಗಲೂ ಈ ಲಿಂಗ ತಿರುಗುತ್ತದೆ. ಆದರೆ, ಕಲ್ಲಿನ ಕೊಳವೆಗಳು ಮಾತ್ರ ಕಾಣಿಸುತ್ತಿಲ್ಲ.
Related Articles
ಭಕ್ತನೊಬ್ಬ, ಭಕ್ತಿ- ಭಾವದಿಂದ ಒಂದು ಚೀಲ ಗುಗ್ಗರಿಯನ್ನು ತಂದು ಶಿವಲಿಂಗವೊಂದಕ್ಕೆ ಒಂದೊಂದು ಗುಗ್ಗರಿ ಕಾಳಿನ ನೈವೇದ್ಯ ಮಾಡುತ್ತಾ ಹೋದಾಗ, ಕೊನೆಯ ಲಿಂಗಕ್ಕೆ ನೈವೇದ್ಯ ಮಾಡಲು ಕಾಳುಗಳೇ ಉಳಿಯಲಿಲ್ಲವಂತೆ. ಆಗ ಸಿಟ್ಟಿಗೆದ್ದ ಶಿವಲಿಂಗ, ದೂರ ಹೋಗಿ ಕುಳಿತನಂತೆ. ಎಷ್ಟೊಂದು ಬೇಡಿಕೊಂಡರೂ ಸಿಟ್ಟು ಇಳಿಯಲಿಲ್ಲವಂತೆ. ಕೋಟಿ ಲಿಂಗಗಳ ಕೂಟದಿಂದ ದೂರ ಉಳಿದ ಲಿಂಗದ ಬಗ್ಗೆ, ಈ ಕತೆ ಇದೆ.
Advertisement
ಲಿಂಗ ವಿರೂಪ ಭೀತಿಇಲ್ಲಿನ ನೂರಾರು ಲಿಂಗಗಳು, ಭಕ್ತರು ಹಾಕಿದ ಎಣ್ಣೆ ಬತ್ತಿ ನುಂಗಿ, ಮೇಣ ಮುತ್ತಿದ ಲಿಂಗಗಳಾದರೆ, ಸಹಸ್ರಾರು ಲಿಂಗಗಳು ಭಕ್ತರು ಬಳಿಯುವ ವಿಭೂತಿ, ಕುಂಕುಮಗಳಿಂದ ಕಂದು ಬಣ್ಣಕ್ಕೆ ರೂಪಾಂತರಗೊಳ್ಳುತ್ತಿವೆ. ಅಮಾವಾಸ್ಯೆ, ಹುಣ್ಣಿಮೆಗಳಂದು ಲಿಂಗಗಳು ನೈವೇದ್ಯ ರೂಪದಲ್ಲಿ ಸಕ್ಕರೆ, ಮಂಡಕ್ಕಿ, ಪಂಚಪಳಾರ ಪಡೆಯುತ್ತವೆ. ಹುಗ್ಗಿ, ಹೋಳಿಗೆ ಸವಿಯುತ್ತವೆ. ಯುಗಾದಿಗೆ ಬೇವು ಕುಡಿಸುತ್ತಾರೆ, ನಾಗರ ಪಂಚಮಿಗೆ ಹಾಲಿನ ಹೊಳೆ ಹರಿಸುತ್ತಾರೆ. ಎಣ್ಣೆ- ತುಪ್ಪ, ಜೇನನ್ನು ಸುರಿದು, ಲಿಂಗದ ಮೇಲೆ ಭಕ್ತಿ ತೋರುವುದರಿಂದ, ಇದರ ನೈಸರ್ಗಿಕತೆಗೆ ದಕ್ಕೆ ಆಗುತ್ತಿದೆ ಎನ್ನುವುದೇ ವಿಷಾದದ ಸಂಗತಿ. – ಚಿತ್ರ-ಲೇಖನ: ಡಾ. ಕರವೀರಪ್ರಭು ಕ್ಯಾಲಕೊಂಡ