ಚಿಂಚೋಳಿ: ತಾಲೂಕಿನ ವಿವಿಧ ಗ್ರಾಮಗಳಲ್ಲಿನ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ ತಾಡಪಳ್ಳಿ, ಗಂಜಗಿರಿ, ಪಸ್ತಪುರ, ಸಾಸರಗಾಂವ ಗ್ರಾಮಸ್ಥರು ಶುಕ್ರವಾರ ಪಟ್ಟಣದ ಬಸ್ ನಿಲ್ದಾಣದ ಎದುರು ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಭಾರತ ಮುಕ್ತಿ ಮೋರ್ಚಾ ಮುಖಂಡ ಮಾರುತಿ ಗಂಜಗಿರಿ, ತಾಲೂಕಿನ ರುಸ್ತಂಪುರ, ಪಸ್ತಪುರ, ಹೂವಿನಬಾವಿ, ತಾಡಪಳ್ಳಿ, ಸಾಸರಗಾಂವ, ರುಮ್ಮನಗೂಡ ಗ್ರಾಮಗಳಲ್ಲಿ ಕಳೆದೊಂದು ತಿಂಗಳಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಆದರೂ ಈ ಗ್ರಾಪಂಗಳ ಪಿಡಿಒಗಳು ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಮಹಿಳೆಯರು ಒಂದೆರಡು ಕಿ.ಮೀ ದೂರದಿಂದ ನೀರು ತರುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ಕುಂಚಾವರಂ ವನ್ಯಜೀವಿ ಧಾಮ ಅರಣ್ಯಪ್ರದೇಶದಲ್ಲಿನ ಕಾಡು ಪ್ರಾಣಿಗಳಿಗೆ ನೀರು, ಆಹಾರ ದೊರಕುತ್ತಿಲ್ಲ. ಇದರಿಂದ ಕಾಡು ಪ್ರಾಣಿಗಳ ಸ್ಥಿತಿ ಗಂಭೀರವಾಗಿದೆ. ನೀರು, ಆಹಾರ ಇಲ್ಲದೇ ಕೆಂಪು ಕೋತಿಗಳು ಸಾಯುತ್ತಿವೆ. ಆದರೂ ವನ್ಯಜೀವಿ ವಲಯ ಅರಣ್ಯ ಇಲಾಖೆ ಅಧಿಕಾರಿಗಳು ಮಾನವೀಯತೆ ತೋರಿಸುತ್ತಿಲ್ಲ ಎಂದು ದೂರಿದರು.
ಮಚೇಂದ್ರ ಸೇರಿಕಾರ, ಪ್ರಕಾಶ ರುಮ್ಮನಗೂಡ, ಕಾಶಿರಾಮ ದೇಗಲಮಡಿ, ಉಮೇಶ ದೋಟಿಕೊಳ, ಜಾಫರಖಾನ್ ಮಿರಿಯಾಣ, ಮಲ್ಲಪ್ಪ ಗಂಜಗಿರಿ, ಚಂದ್ರಕಾಂತ ರುಮ್ಮನಗೂಡ, ಪ್ರಕಾಶ ಬಕ್ತಂಪಳ್ಳಿ, ರುಮ್ಮನಗೂಡ ಗ್ರಾಪಂ ಸದಸ್ಯರಾದ ರವೀಂದ್ರರೆಡ್ಡಿ, ಸೂರ್ಯಕಾಂತ ಪೂಜಾರಿ ಹಾಗೂ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಮಡಿದ್ದರು.
ಪ್ರತಿಭಟನೆ ಸ್ಥಳಕ್ಕೆ ತಾಪಂ ಅಧಿಕಾರಿ ಮಹ್ಮದ ಮೈನೊದ್ದೀನ ಪಟಲಿಕರ, ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಬಸವರಾಜ ನೇಕಾರ, ಗ್ರೇಡ್ 2 ತಹಶೀಲಾರ್ ಮಾಣಿಕರಾವ್ ಭೇಟಿ ನೀಡಿ ಮನವಿ ಪತ್ರ ಸ್ವೀಕರಿಸಿ, ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಬಿಡುವುದಾಗಿ ಭರವಸೆ ನೀಡಿದರು.