Advertisement

Mangaluru; ಅಂಗವಿಕಲರ ವಿಶಿಷ್ಟ ಗುರುತಿನ ಚೀಟಿ ಸಮಸ್ಯೆ ಬಗೆಹರಿಸಿ: ಜಿಲ್ಲಾಧಿಕಾರಿ

11:27 PM Feb 13, 2024 | Team Udayavani |

ಮಂಗಳೂರು: ಅಂಗವಿಕಲರ ವಿಶಿಷ್ಟ ಗುರುತಿನ ಚೀಟಿ (ಯುಡಿಐಡಿ) ಕಾರ್ಡ್‌ಗಳಲ್ಲಿ ಆಗುತ್ತಿರುವ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಂಡುಕೊಳ್ಳುವಂತೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಎಂ.ಪಿ. ಅವರು ಸೂಚಿಸಿದ್ದಾರೆ.

Advertisement

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಅಂಗವಿಕಲರ ಕುಂದು ಕೊರತೆಗಳ ನಿವಾರಣೆ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಯುಡಿಐಡಿ ಕಾರ್ಡ್‌ಗಳಲ್ಲಿ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರ ಹುಡುಕ ಬೇಕು ಎಂದು ಅಧಿಕಾರಿಗಳಿಗೆ ಆದೇಶಿಸಿದರು.

ಬೆಳ್ತಂಗಡಿ ತಾಲೂಕು ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಯುಡಿಐಡಿ ಕಾರ್ಡ್‌ ವಿತರಣೆ ಪ್ರಗತಿ ಕುಂಠಿತವಾಗಿರುವ ಬಗ್ಗೆ ಮಾಹಿತಿ ಪಡೆದ ಅವರು, ಜಿಲ್ಲೆಯಲ್ಲಿರುವ ಒಟ್ಟು ವಿಕಲ ಚೇತನರ ಸಂಖ್ಯೆಗಳನ್ನು ಕ್ರೋಢೀಕರಿಸಿ 15 ದಿನಗಳೊಳಗೆ ಮಾಹಿತಿ ನೀಡುವಂತೆ ಸೂಚಿಸಿದರು.

ಅಂಗವಿಕಲರು ವಿದ್ಯಾರ್ಥಿ ವೇತನದ ಅರ್ಜಿಗಳನ್ನು ಆನ್‌ಲೈನ್‌ ಮೂಲಕ ಸಲ್ಲಿಸುವುದು ಕಷ್ಟ. ಹಾಗಾಗಿ ಆಯಾ ಶಾಲೆಗಳ ಮೂಲಕವೇ ಅರ್ಜಿಗಳನ್ನು ಸಲ್ಲಿಸಲು ಸೂಚಿಸಿದ ಅವರು, ವಿಕಲಚೇತನರಿಗೆ ಮಾಶಾಸನ ಸ್ಥಗಿತಗೊಂಡಿರುವ ಬಗ್ಗೆಯೂ ಕ್ರಮ ಕೈಗೊಳ್ಳಲು ಹೇಳಿದರು.

ಕೆಲವೊಂದು ಅಂಗವಿಕಲರ ಶಾಲೆಗಳಿಗೆ ಈ ಮೊದಲು ದೇವಾಲಯದಿಂದ ಇದ್ದ ಊಟದ ವ್ಯವಸ್ಥೆ ಸ್ಥಗಿತಗೊಡಿರುವ ಬಗ್ಗೆ ಸದಸ್ಯರು ಪ್ರಸ್ತಾವಿಸಿದರು. ಈ ಬಗ್ಗೆ ಜಿಲ್ಲಾಧಿಕಾರಿಗಳು, ಯಾವುದಾದರೂ ಒಂದು ಸಂಸ್ಥೆ ಮೂಲಕ ಅಥವಾ ಇತರೆ ವ್ಯವಸ್ಥೆ ಮೂಲಕ ಸರಿಪಡಿಸುವ ಭರವಸೆ ನೀಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ| ತಿಮ್ಮಯ್ಯ, ಜಿಲ್ಲಾ ವಿಕಲಚೇತನರ ಪುರ್ನವಸತಿ ಕೇಂದ್ರದ ಸದಸ್ಯರು, ಅಂಗವಿಕಲರ ಸಮಿತಿಯ ಅಧಿಕಾರಿಗಳು ವಿವಿಧ ಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next