Advertisement

ಕುಡಿವ ನೀರಿನ ಸಮಸ್ಯೆ ನಿವಾರಣೆ ಮಾಡಿ

02:49 PM Apr 10, 2020 | Suhan S |

ದೇವನಹಳ್ಳಿ: ಜಿಲ್ಲೆಯ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಕುಡಿವ ನೀರಿನ ಸಮಸ್ಯೆ ಉದ್ಭವಿಸದಂತೆ ಸಂಬಂಧಿಸಿದ ಅಧಿಕಾರಿಗಳು ಮುಂಜಾಗ್ರತೆ ವಹಿಸಬೇಕು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಕಾರ್ಯದರ್ಶಿ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪಿ.ಹೇಮಲತಾ ತಿಳಿಸಿದರು.

Advertisement

ತಾಲೂಕಿನ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಕೋವಿಡ್ 19 ಸೋಂಕು ತಡೆಯಲು ಜಿಲ್ಲೆಯಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗ್ರತೆ ಕ್ರಮಗಳ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೋವಿಡ್ 19  ತಡೆಗಟ್ಟುವ ಕ್ರಮಗಳ ನಡುವೆಯೂ ಆದ್ಯತೆ ಮೇರೆಗೆ ಕುಡಿಯುವ ನೀರಿನ ಸಮಸ್ಯೆಗಳಿಗೆ ಅಧಿಕಾರಿಗಳು ತ್ವರಿತವಾಗಿ ಸ್ಪಂದಿಸಬೇಕು. ಬೇಸಿಗೆ ಸಮಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸುವುದು ಸಾಮಾನ್ಯ. ನೀರಿನ ಸಮಸ್ಯೆಯಿರುವೆಡೆ ಟ್ಯಾಂಕರ್‌ಗಳಿಂದ ಅಥವಾ ಇತರೆ ಮೂಲಗಳ ಮುಖಾಂತರ ನೀರು ಸರಬರಾಜಿಗೆ ಕ್ರಮವಹಿಸಬೇಕು ಎಂದು ಹೇಳಿದರು. ಕೃಷಿ ಚಟುವಟಿಕೆಗಳಿಗೆ ರಸಗೊಬ್ಬರ ಹಾಗೂ ಬಿತ್ತನೆ ಬೀಜಗಳ ಕೊರತೆಯಾಗದಂತೆ ಕೃಷಿ ಇಲಾಖೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕು. ಕೋವಿಡ್ 19 ವೈರಾಣು ಸೋಂಕು ತಡೆಗಟ್ಟುವ ಹಿನ್ನೆಲೆ, ಲಾಕ್‌ ಡೌನ್‌ ಘೋಷಣೆಯಿಂದ ರೈತರು ಬೆಳೆದಿರುವ ಬೆಳೆಗಳ ಸಾಗಾಣಿಕೆಗೆ ಹಾಗೂ ಮಾರಾಟಕ್ಕೆ ಸಮಸ್ಯೆ ಎದುರಾಗಿತ್ತು. ಆದರೆ ಸರ್ಕಾರ ವಿನಾಯಿತಿ ನೀಡಿದ ಬಳಿಕ ಎಲ್ಲ ಸಮಸ್ಯೆಗಳು ಒಂದು ಹಂತದಲ್ಲಿ ಬಗೆಹರಿದಂತಾಗಿದೆ. ದ್ರಾಕ್ಷಿ ಹಾಗೂ ಹೂ ಬೆಳೆಗಾರರ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕ್ರಮವಹಿಸಬೇಕು ಎಂದು ಹೇಳಿದರು.

ಜಿಲ್ಲಾಧಿಕಾರಿ ಪಿ.ಎನ್‌.ರವೀಂದ್ರ ಮಾತನಾಡಿ, ಹೊಸಕೋಟೆ ತಾಲೂಕಿನ ನಂದಗುಡಿ ಹೋಬಳಿಯ ಬೈಲನರಸಾಪುರ ಗ್ರಾಮದ ಇಬ್ಬರು ವ್ಯಕ್ತಿಗಳಲ್ಲಿ ಕೋವಿಡ್ 19  ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಆ ಗ್ರಾಮದ ಎಲ್ಲಾ ಕುಟುಂಬಗಳನ್ನು ಹೋಂ ಕ್ವಾರಂಟೈನ್‌ನಲ್ಲಿಟ್ಟು, ಮನೆ ಮತ್ತು ಗ್ರಾಮದಿಂದ ಹೊರಗೆ ಹೋಗದಂತೆ ಹಾಗೂ ಗ್ರಾಮಕ್ಕೆ ಯಾರು ಪ್ರವೇಶಿಸದಂತೆ ತಿಳಿಸಲಾಗಿದೆ. ಅಹಿತಕರ ಘಟನೆಗಳ ನಿಯಂತ್ರಣಕ್ಕೆ ರಿಸರ್ವ್‌ ಪೊಲೀಸ್‌ ಪಡೆಯ ವಾಹನ ಗ್ರಾಮದಲ್ಲಿ ಗಸ್ತು ತಿರುಗಲಿದೆಎಂದು ತಿಳಿಸಿದರು.

ಎಸ್ಪಿ ರವಿ.ಡಿ.ಚನ್ನಣ್ಣನವರ್‌, ಜಿಪಂ ಸಿಇಒ ಎನ್‌.ಎಂ.ನಾಗರಾಜ, ಎಡೀಸಿ ಜಗದೀಶ್‌.ಕೆ.ನಾಯಕ್‌, ಡಿಎಚ್‌ಒ ಡಾ.ಮಂಜುಳಾದೇವಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next