Advertisement

ಪಡಿತರ ವಿತರಣೆ ಸಮಸ್ಯೆ ನಿವಾರಿಸಿ

06:46 PM Apr 10, 2020 | Suhan S |

ತಿಪಟೂರು: ಕೋವಿಡ್ 19 ಹಾವಳಿ ಹೆಚ್ಚಾಗಿರುವುದರಿಂದ ಮತ್ತು ಲಾಕ್‌ಡೌನ್‌ ಇರುವುದರಿಂದ ಸರ್ಕಾರ ಪಡಿತದಾರರಿಗೆ ಯಾವುದೇ ಕಾರಣಕ್ಕೂ ಆಹಾರಕ್ಕಾಗಿ ಹಾಹಾಕಾರ ಉಂಟಾಗಬಾರದೆಂದು ಗ್ರಾಹಕರ ಮತ್ತು ಜನರ ತೊಂದರೆ ತಪ್ಪಿಸಲು ಆದೇಶ ಹೊರಡಿಸಿ ಏಪ್ರಿಲ್‌ ಮಾಹೆಯಲ್ಲಿ ಪಡಿತರ ಆಹಾರ ಧಾನ್ಯಗಳನ್ನು ನ್ಯಾಯಬೆಲೆ ಅಂಗಡಿಯವರು ಒಟಿಪಿ ಸೇರಿದಂತೆ ಯಾವುದೇ ಬಯೋ ಮೆಟ್ರಿಕ್‌ ಕಾರಣಗಳನ್ನು ಹೇಳದೇ ಗ್ರಾಹಕರ ಸಹಿ ಪಡೆದು ಕೂಡಲೇ ಆಹಾರ ವಿತರಣೆ ಮಾಡಬೇಕೆಂದು ತಿಳಿಸಿದೆ.

Advertisement

ಆದರೆ ನಗರ ಹಾಗೂ ಗ್ರಾಮಾಂತರ ಪ್ರದೇಶ ಗಳಲ್ಲಿರುವ ಕೆಲ ನ್ಯಾಯಬೆಲೆ ಅಂಗಡಿಯವರು ಸರ್ಕಾರಿ ಆದೇಶವನ್ನು ಕಡೆಗಣಿಸಿ, ಒಟಿಪಿ ಹಾಗೂ ಬಯೋಮೆಟ್ರಿಕ್‌ ಕಾರಣಗಳನ್ನು ಹೇಳಿ ಗ್ರಾಹಕರಿಗೆ ಒಂದು ರೀತಿಯ ಹಿಂಸೆ ಕೊಡುತ್ತಿದ್ದಾರೆಂಬುದು ಪಡಿತರದಾರರ ಆಕ್ರೋಶ ವಾಗಿದೆ. ಪಡಿತರ ದಾರರು ಆಹಾರ ಪಡೆಯಲು ಬೆಳಗ್ಗೆ 6 ಗಂಟೆ ಯಿಂದಲೇ ತಿಂಡಿ-ಊಟ ಬಿಟ್ಟು ಕಾಯುತ್ತಿರುತ್ತಾರೆ. ಆದರೆ ಯಾವಾಗಲೋ ಬಂದು ಅಂಗಡಿ ಮಾಲೀಕ ಬೀಗ ತೆಗೆದು ನಿಮ್ಮ ಕಾರ್ಡ್‌ ಸರಿಯಿಲ್ಲ. ಬಯೋಮೆಟ್ರಿಕ್‌ ತಾಳೆಯಾಗಲ್ಲ. ಹಾಗೆ ಹೀಗೆ ಎಂದು ಜನರು ಹೆದರಿಕೊಳ್ಳುವತನಕ ಮಾತನಾಡಿ ನಂತರ ಬೇಕಾದವರಿಗೆ ಮಾತ್ರ ರೇಷನ್‌ ನೀಡಿ ಬೀಗ ಜಡಿಯುತ್ತಿದ್ದಾರೆ. ಆದರೆ ಜನರು ಮಧ್ಯಾಹ್ನದ ವರೆಗೂ ಬೆಂಕಿಯಂತ ಬಿಸಿಲಿನಲ್ಲಿ ನೀರು, ನೆರಳಿಲ್ಲದೆ ಉಪವಾಸವಿದ್ದು ಅಸಹಾ ಯಕರಾಗಿ ಹಿಂತಿರು ಗುತ್ತಿದ್ದರೂ ಈ ಬಗ್ಗೆ ತಾಲೂಕು ಆಹಾರ ಇಲಾಖೆ ಮಾತ್ರ ಪಡಿತರ ಅಂಗಡಿಯವರ ಹಿತಕಾಯುತ್ತಿದ್ದು ಬಡವರು, ನೊಂದವರು ಅಲೆದಾಡುವುದು ಮಾತ್ರ ನಿಂತಿಲ್ಲ. ಈ ಬಗ್ಗೆ ಕೂಡಲೇ ಜಿಲ್ಲಾಧಿಕಾರಿಗಳು ಗಮನಿಸಿ ಮಾಲೀಕರ ವಿರುದ್ಧ ಕ್ರಮ ಕೈಗೊಂಡು ಪಡಿತರ ವಿತರಣೆಯಾಗುವಂತೆ ಮಾಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next