ಬೆಂಗಳೂರು: ಕೋವಿಡ್ ಸಂಕಷ್ಟದ ಸಮಯದಲ್ಲಿ ರಾಜ್ಯ ಸರ್ಕಾರ ಆಯುಷ್ ವೈದ್ಯರ ವೇತನ ತಾರತಮ್ಯ ಸಮಸ್ಯೆ ಬಗೆಹರಿಸಿ, ಬಿಕ್ಕಟ್ಟು ಪರಿಹರಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ವೇತನ ತಾರತಮ್ಯ ಬಗೆಹರಿಸುವಂತೆ ಒತ್ತಾಯಿಸಿ ರಾಜ್ಯದ 2000 ಸರ್ಕಾರಿ ಗುತ್ತಿಗೆ ಆಯುಷ್ ವೈದ್ಯರು ಸಾಮೂಹಿಕ ರಾಜೀನಾಮೆ ಸಲ್ಲಿಸಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ತಕ್ಷಣವೇ ಅವರೊಂದಿಗೆ ಮಾತುಕತೆ ನಡೆಸಿ ಬಿಕ್ಕಟ್ಟು ಪರಿಹರಿಸುವಂತೆ ಒತ್ತಾಯಿಸುತ್ತೇನೆ ಎಂದಿದ್ದಾರೆ.
ಕೋವಿಡ್-19 ನಿಯಂತ್ರಣ ಮತ್ತು ಚಿಕಿತ್ಸೆಗೆ ಆಯುಷ್ ವೈದ್ಯರಿಗೆ ಮಾಸಿಕ 20,000 ರೂ., ಆಲೋಪತಿ ವೈದ್ಯರಿಗೆ ಮಾಸಿಕ 60,000 ರೂ. ವೇತನ ನೀಡುತ್ತಿರುವುದು ತಾರತಮ್ಯ ಎಂದು ಆಯುಷ್ ವೈದ್ಯರು ರಾಜೀನಾಮೆ ನೀಡಿದ್ದಾರೆ. ಈಗಾಗಲೇ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಯ ಕೊರತೆ ಎದುರಿಸುತ್ತಿರುವ ರಾಜ್ಯ ಸರ್ಕಾರ ಆಯುಷ್ ವೈದ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮನವೊಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ಯಾವುದೇ ಕಾರಣಕ್ಕೂ ಇಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿ ಸರ್ಕಾರ ಹೊಣೆ ಗೇಡಿತನ ಪ್ರದರ್ಶಿಸಬಾರದು. ಅಲೋಪತಿ ಮತ್ತು ಆಯುಷ್ ವೈದ್ಯರ ನಡುವಣ ಅಜಗಜಾಂತರ ವೇತನ ತಾರತಮ್ಯ ಸಹಜವಾಗಿಯೇ ಕಂದಕ ಸೃಷ್ಟಿಸಿದೆ. ಸರ್ಕಾರ ಕೂಡಲೇ ಈ ಬಗ್ಗೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡುವುದು ಬಲು ಕಷ್ಟವಾಗುತ್ತದೆ. ಸಮಸ್ಯೆ ಬಿಗಡಾಯಿಸುವ ಮುನ್ನ ಸರ್ಕಾರ ಎಚ್ಚರ ವಹಿಸಬೇಕು ಎಂದು ಎಚ್ ಡಿಕೆ ಸಲಹೆ ನೀಡಿದ್ದಾರೆ.