Advertisement

ಕೃಷಿ ಕಾರ್ಮಿಕರ ಕೊರತೆಗೆ ಪರಿಹಾರ: ಕರೆ ಮಾಡಿದರೆ ಬಂದು ನಾಟಿ ಮಾಡುವ ಮಹಿಳಾ ತಂಡ !

03:11 PM Jul 30, 2020 | mahesh |

ಉಡುಪಿ: ಜಿಲ್ಲೆಯಲ್ಲಿ ಕೂಲಿ ಕಾರ್ಮಿಕರ ಕೊರತೆಯಿಂದ ಕೃಷಿ ದೂರವಾಗುತ್ತಿದೆ ಎನ್ನುವ ಕೂಗು ಕೇಳಿ ಬರುತ್ತಿರುವ ನಡುವೆ, ಮಹಿಳೆಯೊಬ್ಬರು ತಂಡ ಕಟ್ಟಿಕೊಂಡು ಜಿಲ್ಲೆಯ ವಿವಿಧ ಕಡೆಗಳಿಗೆ ತೆರಳಿ ನೇಜಿ ಹಾಗೂ ಕಟಾವು ಮಾಡುವ ಮೂಲಕ ಕೃಷಿ ಕೂಲಿ ಕೆಲಸಕ್ಕೆ ವೃತ್ತಿಪರತೆ ರೂಪವನ್ನು ನೀಡಿದ್ದಾರೆ.
ಉಡುಪಿ ಜಿಲ್ಲೆಯ ಪೆರ್ಡೂರು ಚೌಂಡಿ ನಗರದ ನಿವಾಸಿ ಪುಷ್ಪಾ 8ನೇ ತರಗತಿ ವಿದ್ಯಾಭ್ಯಾಸ ಪೂರೈಸಿದ್ದಾರೆ. ತಾನು ಆರ್ಥಿಕವಾಗಿ ಸದೃಢವಾಗುವ ಜತೆಗೆ ಇತರ ಮಹಿಳೆಯರನ್ನು ಬಲಪಡಿಸುವ ನಿಟ್ಟಿನಲ್ಲಿ ಸುಮಾರು 10-20 ಮಹಿಳೆಯರ ತಂಡ ಕಟ್ಟಿಕೊಂಡು ಕಳೆದ 12 ವರ್ಷಗಳಿಂದ ಕೃಷಿ ಕೆಲಸದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

Advertisement

ವೃತ್ತಿಪರತೆ ಲುಕ್‌
ಜಿಲ್ಲೆಯ ಯಾವುದೇ ಪ್ರದೇಶದಿಂದ ಒಂದು ದೂರವಾಣಿ ಕರೆ ಮಾಡಿದರೆ ಸಾಕು ನಿಮ್ಮ ವಿಳಾಸ ಹಾಗೂ ದೂರವಾಣಿ ಸಂಖ್ಯೆ ನೀಡಬೇಕು. ತಂಡದ ಮುಖ್ಯಸ್ಥೆ ಕೆಲಸಕ್ಕೆ ಬರುವ ದಿನ ನಿಗದಿ ಪಡಿಸುತ್ತಾರೆ. ಗದ್ದೆಯ ವಿಸ್ತೀರ್ಣಕ್ಕೆ ಅಗತ್ಯವಿರುವಷ್ಟು ಸದಸ್ಯರನ್ನು ಕೆಲಸದ ಪ್ರದೇಶಕ್ಕೆ ಕಳುಹಿಸುತ್ತಾರೆ. ಅವರು ನಿಗದಿತ ಸಮಯದೊಳಗೆ ತೆರಳಿ ನಾಟಿ ಮಾಡುತ್ತಾರೆ. ದೂರದ ಸ್ಥಳವಾದರೆ ಅವರ ವಾಹನ ವೆಚ್ಚವನ್ನು ಮಾಲಕರು ಭರಿಸಬೇಕು. ಈ ಬಾರಿ ಇದುವರೆಗೆ ಸುಮಾರು 60 ದಿನಗಳ ನೇಜಿ ನಾಟಿ ಕಾರ್ಯ ಪೂರ್ಣಗೊಳಿಸಿದ್ದಾರೆ.

ವರ್ಷಪೂರ್ತಿ ಕೆಲಸ!
ಜೂನ್‌-ಜುಲೈ ವರೆಗೆ ಸುಮಾರು 60 ದಿನಗಳ ಕಾಲ ನೇಜಿ ನಾಟಿ ಕಾರ್ಯಮಾಡುವ ತಂಡದ ಮಹಿಳೆಯರು, ಇತರ ಸಮಯದಲ್ಲಿ ತೋಟದ ಕೆಲಸ, ಸಹಿತ ಇತರ ಯಾವುದೇ ಕೆಲಸಗಳನ್ನು ಮಾಡುತ್ತಾರೆ ಎಂದು ಯೋಜನೆ ರೂವಾರಿ ಪುಷ್ಪಾ ಅವರು ತಿಳಿಸಿದ್ದಾರೆ.

ಜಿಲ್ಲೆಯಾದ್ಯಂತ ಕೆಲಸ!
10ರಿಂದ 20 ಮಹಿಳೆಯರು ಈ ಬಾರಿ ಜಿಲ್ಲೆಯ ಪೆರ್ಡೂರು, ಕಾಪು, ಉಡುಪಿ ಸಹಿತ ಜಿಲ್ಲೆಯ ವಿವಿಧ ಮೂಲೆಗಳಿಗೆ ತೆರಳಿ ನಾಟಿ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಅಗತ್ಯವಿರುವ ಕಡೆ ಕಳೆ, ತೋಟದ ಕೆಲಸ ಸಹಿತ ಇತರ ಕೆಲಸಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಾರೆ.

ಆರ್ಥಿಕ ಬಲ
ಪತಿಗೆ ಅಪಘಾತವಾದ ಸಂದರ್ಭದಲ್ಲಿ ಆರ್ಥಿಕವಾಗಿ ತುಂಬಾ ಸಂಕಷ್ಟಕ್ಕೆ ಸಿಲುಕಿದೆ. ಆ ಸಂದರ್ಭದಲ್ಲಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದೆ. ಒಂದು ದಿನ ಕೆಲಸವಿದ್ದರೆ ಇನ್ನೊಂದು ದಿನ ಇರುತ್ತಿರಲಿಲ್ಲ. ಅದಕ್ಕಾಗಿ ವರ್ಷ ಪೂರ್ತಿ ಕೆಲಸ ಮಾಡುವ ಉದ್ದೇಶದಿಂದ ಮಹಿಳೆಯರ ತಂಡ ಕಟ್ಟಿದ್ದೇನೆ. ಅವರೊಂದಿಗೆ ಜಿಲ್ಲೆಯ ವಿವಿಧ ಊರುಗಳಿಗೆ ತೆರಳಿ ಕೆಲಸಗಳನ್ನು ಮಾಡುತ್ತಾ ಬಂದಿದ್ದೇನೆ. ಇದರಿಂದ ನನ್ನ ಜತೆ ತಂಡವು ಸಹ ಆರ್ಥಿಕವಾಗಿ ಬಲಗೊಂಡಿದೆ. ಅಗತ್ಯವಿದ್ದವರು (ದೂ: 9632894122) ಸಂಪರ್ಕಿಸಬಹುದು.
-ಪುಷ್ಪಾ , ತಂಡದ ರೂವಾರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next