ಧಾರವಾಡ: ಅತಿವೃಷ್ಟಿಯಿಂದ ಹಾನಿಗೆ ಒಳಗಾದ ಮನೆಗಳಿಗೆ ಪರಿಹಾರ ನೀಡುವಲ್ಲಿ ತಾರತಮ್ಯ ಆಗಿದ್ದು, ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಮನೆ ಕಳೆದುಕೊಂಡ ಹೆಬ್ಬಳ್ಳಿ ಗ್ರಾಮದ ನಿರಾಶ್ರಿತರು ಡಿಸಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
2019ರ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಸುರಿದ ಭಾರೀ ಮಳೆಯಿಂದ ಅತಿವೃಷ್ಟಿ ಉಂಟಾಗಿ ಹೆಬ್ಬಳ್ಳಿ ಗ್ರಾಮದಲ್ಲಿ ಸಾಕಷ್ಟು ಮನೆಗಳು ಬಿದ್ದುಹೋಗಿದ್ದವು. ಪ್ರಕೃತಿ ವಿಕೋಪ ನಿಧಿಯಿಂದ ಮನೆ ಕಳೆದುಕೊಂಡ ನಿರಾಶ್ರಿತರಿಗೆ ಪರಿಹಾರ ನೀಡುವಲ್ಲಿ ನೋಡಲ್ ಅಧಿಕಾರಿಗಳು ಜಂಟಿಯಾಗಿ ಸಮೀಕ್ಷೆ ನಡೆಸಿದ್ದಾರೆ. ಈ ವೇಳೆ ಎ, ಬಿ, ಸಿ ಗ್ರೇಡ್ ನೀಡುವಲ್ಲಿ ಸಾಕಷ್ಟು ಅವ್ಯವಹಾರ ನಡೆಸಿದ್ದಾರೆ ಎಂದು ಗ್ರಾಮಸ್ಥರು ದೂರಿದರು.
ನಾಲ್ಕು ವರ್ಷಗಳ ಹಿಂದೆ ಬಿದ್ದ ಮನೆಗಳ ಫೋಟೋಗಳನ್ನು ಅಂಟಿಸಿದವರಿಗೂ ಮನೆ ಪರಿಹಾರ ನೀಡಲಾಗಿದೆ. ಇಲ್ಲಿ ಸ್ವಜನ ಪಕ್ಷಪಾತ ಮತ್ತು ಜಾತಿಯಾಧಾರಿತ ಅವ್ಯವಹಾರಗಳು ನಡೆದಿದ್ದು, ಕೂಡಲೇ ಈ ಅಕ್ರಮವನ್ನು ಸರಿಪಡಿಸುವಂತೆ ಗ್ರಾಮಸ್ಥರು ಆಗ್ರಹಿಸಿದರು.
ಅರ್ಹ ನಿರಾಶ್ರಿತರನ್ನು ಗುರುತಿಸಿ ಪರಿಹಾರ ನೀಡುವಲ್ಲಿ ಪಿಡಿಒ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ತಾರತಮ್ಯ ಎಸಗಿದ್ದು, ಜಿಪಿಎಸ್ನಲ್ಲಿ ಗುರುತಿಸಿದ ಮನೆಗಳು ಹಾಗೂ ಪರಿಹಾರ ನೀಡಿದ ಮನೆಗಳು ಬೇರೆ ಬೇರೆ ಆಗಿವೆ. ಹೀಗಾಗಿ ಈ ಬಗ್ಗೆ ಪರಿಶೀಲಿಸಬೇಕು ಎಂದು ಆಗ್ರಹಿಸಿದರು. ಈ ಬಗ್ಗೆ ಮರು ಸಮೀಕ್ಷೆ ನಡೆಸಿ, ಮನೆ ಕಳೆದುಕೊಂಡ ಅರ್ಹ ನಿರಾಶ್ರಿತರಿಗೆ ಪರಿಹಾರ ವಿತರಿಸಲು ಹಾಗೂ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗೆ ಸಲ್ಲಿಸಿರುವ ಮನವಿಯಲ್ಲಿ ಒತ್ತಾಯಿಸಲಾಗಿದೆ. ಜಿಪಂ ಸದಸ್ಯ ಚೆನ್ನಬಸಪ್ಪ ಮಟ್ಟಿ, ರುದ್ರಪ್ಪ ವಾಲಿ, ಬಸಪ್ಪ ಸಾಲಿ, ಹೇಮಂತ ಕನಕಿಕೊಪ್ಪ, ನಿಂಗಪ್ಪ ಧಾರವಾಡ, ಸಂಗಪ್ಪ ಮೊರಬದ, ಈರಣ್ಣ ಉಮ್ಮನ್ನವರ, ಗ್ರಾಪಂ ಅಧ್ಯಕ್ಷೆ ರತ್ನವ್ವ ಸುಣಗಾರ, ಸಿದ್ದವ್ವ ಮುರಗಿ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.