ಬೆಂಗಳೂರು: ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಶಾಲೆಗಳ 5, 8 ಮತ್ತು 9ನೇ ತರಗತಿ ಮೌಲ್ಯಾಂಕನ ಫಲಿತಾಂಶ ಪ್ರಕಟನೆಗೆ ಸುಪ್ರೀಂ ಕೋರ್ಟ್ ತಡೆ ನೀಡಿರುವ ಹಿನ್ನೆಲೆಯಲ್ಲಿ ಆ ತರಗತಿಗಳ ಹಿಂದಿನಪರೀಕ್ಷೆಗಳ ಆಧಾರದಲ್ಲಿ ಫಲಿತಾಂಶ ಪ್ರಕಟಿಸುವಂತೆ ಶಾಲಾ ಶಿಕ್ಷಣ ಇಲಾಖೆ ಎಲ್ಲ ಶಾಲೆಗಳಿಗೆ ಸೂಚಿಸಿದೆ.
ರೂಪಣಾತ್ಮಕ ಮೌಲ್ಯಾಂಕನ (ಎಫ್‌ಎ)-1, 2, 3, 4 ಮತ್ತು ಸಂಕಲನಾತ್ಮಕ ಮೌಲ್ಯಮಾಪನ (ಎಸ್‌ಎ)- 1ರ ಮೌಲ್ಯಾಂಕನವನ್ನು ಆಧರಿಸಿ ಫಲಿತಾಂಶ ಪ್ರಕಟಿಸಲು ಸೂಚಿಸಲಾಗಿದೆ.
2023-24ನೇ ಸಾಲಿನ 5, 8 ಮತ್ತು 9ನೇ ತರಗತಿ ಮೌಲ್ಯಾಂಕನದ ಫಲಿತಾಂಶವನ್ನು ಎ. 8ರಂದು ಶಾಲೆಗಳಲ್ಲಿ ಪ್ರಕಟಿಸುವಂತೆ ಸೂಚಿಸಲಾಗಿತ್ತು. ಆದರೆ ಫಲಿತಾಂಶ ಪ್ರಕಟಿಸದಂತೆ ಸರ್ವೋಚ್ಚ ನ್ಯಾಯಾಲಯವು ತಡೆ ಯಾಜ್ಞೆಯನ್ನು ನೀಡಿದ್ದು, ಪ್ರಕರಣದ ವಿಚಾರಣೆ ನಡೆಯುತ್ತಿದೆ.
ಮೇ 29ರಿಂದ 2024-25ನೇ ಸಾಲಿನ ಶೈಕ್ಷಣಿಕ ವರ್ಷಾರಂಭವಾಗು ತ್ತಿರುವ ಹಿನ್ನೆಲೆಯಲ್ಲಿ 5, 8ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ಫಲಿತಾಂಶ ನೀಡದಿದ್ದರೆ ಮಕ್ಕಳು ಮುಂದಿನ ತರಗತಿಗೆ ಪ್ರವೇಶ ಪಡೆಯಲು ಸಾಧ್ಯವಾಗುವುದಿಲ್ಲ. ಹಾಗೆಯೇ ಶುಲ್ಕ ಪಾವತಿ, ವರ್ಗಾವಣೆ ಪ್ರಮಾಣಪತ್ರ ಮತ್ತು ವ್ಯಾಸಂಗ ಪ್ರಮಾಣಪತ್ರವನ್ನು ಪಡೆಯುವುದು ಮುಂತಾದ ಶೈಕ್ಷಣಿಕ ಕೆಲಸಗಳಿಗೆ ಅಡ್ಡಿಯಾಗಿದೆ.
ಈ ಹಿನ್ನೆಲೆಯಲ್ಲಿ ಈಗಾಗಲೇ ಶಾಲೆಗಳಲ್ಲಿ ನಡೆದಿರುವಎಫ್‌ಎ-1, 2, 3, 4 ಮತ್ತು ಎಸ್‌ಎ-1ರ ಮೌಲ್ಯಾಂಕನದ ಆಧಾರದಲ್ಲಿ ಮಕ್ಕಳ ಮುಂದಿನ ಶೈಕ್ಷಣಿಕ ತರಗತಿಗೆ ಮುಂದುವರಿಸಲು ಅವಕಾಶ ಕಲ್ಪಿಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಸೂಚಿಸಿದ್ದಾರೆ.