Advertisement
ತಾಲೂಕಿನ ಪಿಳ್ಳೆಕೆರನಹಳ್ಳಿಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ-13ರ ಅಗಲೀಕರಣ ಸಂದರ್ಭದಲ್ಲಿ ಹೆದ್ದಾರಿಯ ಎರಡುಬದಿಗಳಲ್ಲಿದ್ದ ಗ್ಯಾರೇಜ್, ಡಬ್ಬದ ಹೋಟೆಲ್ ಗಳನ್ನು ತೆರವುಗೊಳಿಸಲಾಗಿದೆ. ಇದಾಗಿ ಎರಡು ವರ್ಷಗಳಾಗಿದ್ದರೂ ಯಾವುದೇ ಪರಿಹಾರ ನೀಡಿಲ್ಲ. ಗ್ಯಾರೇಜ್ ಮತ್ತು ಡಬ್ಟಾ ಅಂಡಿಗಳನ್ನು ತೆರವುಗೊಳಿಸಿದರೆ ಪ್ರತ್ಯೇಕ ಜಾಗ ನೀಡುವಂತೆ ಗ್ಯಾರೇಜ್ ಹಾಗೂ ಡಬ್ಟಾ ಹೋಟೆಲ್‌ಗಳ ಬಡ ಕೂಲಿ ಕೆಲಸಗಾರರು ಅನೇಕ ಬಾರಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಸರ್ಕಾರಕ್ಕೆ
ಮನವಿ ಮಾಡಿದ್ದರು. ಹೆದ್ದಾರಿ ತೆರವಿನಿಂದ ಗ್ಯಾರೇಜ್, ಗೂಡಂಗಡಿ ಹಾಗೂ ಡಬ್ಬದಂಗಡಿಗಳನ್ನು ಕಳೆದುಕೊಂಡವರಿಗೆ ಪರಿಹಾರ ನೀಡಲು ಕೇಂದ್ರದಿಂದ ಹಣ ಮಂಜೂರಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಯನ್ನು ಭೇಟಿಯಾದಾಗ ಹಣ ಬಂದಿದ್ದು ಜಿಲ್ಲಾಧಿಕಾರಿ ಖಾತೆಗೆ ಜಮಾ ಮಾಡಲಾಗಿದೆ. ಹಾಗಾಗಿ ನಿಮ್ಮ ಪರಿಹಾರವನ್ನು ಜಿಲ್ಲಾಧಿಕಾರಿ ಬಳಿ ಪಡೆದುಕೊಳ್ಳಿ ಎಂದು ತಿಳಿಸಿ
ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು.
ಪರಿಹಾರ ನೀಡುವಂತೆ ನಾಲ್ಕೈದು ಬಾರಿ ಒತ್ತಾಯಿಸಿದರೂ ಜಿಲ್ಲಾ ಧಿಕಾರಿಗಳು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಪ್ರತಿ ಮಂಗಳವಾರ ನಡೆಯುವ ಜನಸ್ಪಂದನ ಸಭೆಯಲ್ಲಿಯೂ ಮನವಿ ಮಾಡಿದ್ದೇವೆ. ಜಿಲ್ಲಾ ಧಿಕಾರಿಗಳು ಬಡ, ಕೂಲಿ ಕಾರ್ಮಿಕರ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ಕೂಡಲೇ ಪರಿಹಾರದ ಮೊತ್ತ ನೀಡಬೇಕು ಎಂದು ಒತ್ತಾಯಿಸಿದರು. ಅಖೀಲ ಕರ್ನಾಟಕ ಜನಸೇವಾ ಸಂಘದ ಅಧ್ಯಕ್ಷ ಅಮ್ಜದ್ ಖಾನ್, ಉಪಾಧ್ಯಕ್ಷ ಉಮ್ಮರ್, ಅನ್ವರ್ ಭಾಷಾ, ಜಾಕೀರ್, ತನ್ವೀರ್ ಬಾಬು ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.