ಬೆಳ್ತಂಗಡಿ: ಸೋಲೋ ಬೈಕ್‌ರೈಡ್ ಇಂದಿನ ಯುವ ಸಮು ದಾಯದಲ್ಲಿ ಕ್ರೇಝ್ ಹುಟ್ಟಿಸಿದ್ದು, ಯುವತಿಯರೂ ಸೋಲೋ ರೈಡ್‌ನತ್ತ ಆಕರ್ಷಿತಗೊಳ್ಳುತ್ತಿದ್ದಾರೆ. ಇದೀಗ ತಾಲೂಕಿನ ಪಿಲ್ಯ ಗ್ರಾಮದ ಸೂಳಬೆಟ್ಟಿನ ಆಶಾ ಮೆಹೆಂದಳೆ, ತನ್ನ ರಾಯಲ್ ಎನ್ ಫೀಲ್ಡ್ ಥಂಡರ್ ಬರ್ಡ್-359 ಬೈಕ್‌ನಲ್ಲಿ ನಾಲ್ಕು ದಿನದಲ್ಲಿ 1,900 ಕಿ.ಮೀ. ಸೋಲೋ ಪ್ರವಾಸ ಮಾಡುವ ಮೂಲಕ ಭಾರತ ಇಂದು ಮಹಿಳೆಯರಿಗೂ ಸುರಕ್ಷಿತ ಎಂಬ ಸಂದೇಶ ಸಾರಿದ್ದಾರೆ.
ಆಶಾ ಮೆಹೆಂದಳೆ ವೃತ್ತಿಯಲ್ಲಿ ಬಂಟ್ವಾಳ ತಾಲೂಕಿನಲ್ಲಿ ಗ್ರಾಮ ಕರಣಿಕೆ. ರಾಮೇಶ್ವರದ ಜ್ಯೋತಿರ್ಲಿಂಗದ ದರ್ಶನದ ಮೂಲಕ ಇನ್ನುಳಿದ 11 ಜ್ಯೋತಿರ್ಲಿಂಗಗಳ ದರ್ಶನವನ್ನು ಇದೇ ರೀತಿ ಏಕಾಂಗಿ ಪ್ರವಾಸದ ಮೂಲಕ ಮಾಡುವ ಉದ್ದೇಶವನ್ನಿಟ್ಟುಕೊಂಡಿದ್ದಾರೆ.
ಎ. 15ರಂದು ಸೂಳಬೆಟ್ಟಿನ ತನ್ನ ಮನೆಯಿಂದ ಹೊರಟ ಈಕೆ ಎ. 16ರಂದು ತಮಿಳುನಾಡನ್ನು ಪ್ರವೇಶಿಸಿ ಮಧುರೆ ಮೀನಾಕ್ಷಿ ದೇವಾಲಯ, ರಾಮೇಶ್ವರದ ಜ್ಯೋತಿರ್ಲಿಂಗದ ಜತೆಗೆ ಬೇರೆ ಬೇರೆ ದೇವಾಲಯಗಳನ್ನು ಸಂದರ್ಶಿಸಿ, ಪಂಬನ್ ಬ್ರಿಡ್ಜ್ ನೋಡಿ ಎ. 17ರಂದು ಧನುಷ್ಕೋಡಿಗೆ ತಲುಪಿದರು. ಅಲ್ಲಿ ಕೊದಂಡರಾಮ ದೇವಸ್ಥಾನ ಹಾಗೂ ಇನ್ನಿತರ ಪ್ರವಾಸಿತಾಣಗಳನ್ನು ಕಣ್ತುಂಬಿ ಎ. 18ರಂದು ಮೈಸೂರು ಮೂಲಕ ಮತ್ತೆ ಸೂಳಬೆಟ್ಟಿಗೆ ಮರಳಿದರು. ಮುಂಜಾನೆ 4.30ಕ್ಕೆ ಬೈಕ್ ಸ್ಟಾರ್ಟ್ ಮಾಡಿದರೆ ವಿವಿಧ ಸ್ಥಳಗಳನ್ನು ಸಂದರ್ಶಿಸಿ ಸಂಜೆ 6.30ಕ್ಕೆ ವಸತಿಗೃಹದ ಬಳಿ ಬೈಕ್ ಎಂಜಿನ್ ಆಫ್ ಮಾಡುತ್ತಿದ್ದರು. ಮಂಗಳೂರಿನ ‘ಬೈಕರ್ ನೀಸ್’ ಎಂಬ ಗ್ರೂಪ್ ಮೂಲಕ ಸುಮಾರು 20,000 ಕಿ.ಮೀ.ನಷ್ಟು ಕರ್ನಾಟಕದ ಹಲವಾರು ಪ್ರವಾಸಿ ತಾಣಗಳಿಗೆ ಭೇಟಿ ಕೊಟ್ಟ ಅನುಭವದ ಆಧಾರದ ಮೇಲೆ ಈ ಏಕಾಂಗಿ ಪ್ರವಾಸ ಮಾಡುವ ಯೋಜನೆ ರೂಪಿಸಿದ್ದರು ಆಶಾ ಮಹೆಂದಳೆ.