Advertisement

ಡಾ|ಜಯಸಿದ್ಧೇಶ್ವರಗೆ ನಮೋ

11:18 AM May 24, 2019 | Team Udayavani |

ಸೊಲ್ಲಾಪುರ: ಕಾಂಗ್ರೆಸ್‌ ಅಭ್ಯರ್ಥಿಯಾದ ಮಾಜಿ ಕೇಂದ್ರ ಗೃಹ ಸಚಿವ ಸುಶೀಲಕುಮಾರ ಶಿಂಧೆ ಅವರ ವಿರುದ್ಧ ಬಿಜೆಪಿ ಅಭ್ಯರ್ಥಿ ಡಾ| ಜಯಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಜಿ ಅವರು (1,50,138 ಮತಗಳ ಅಂತರ) ಗೆಲುವು ಸಾಧಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.

Advertisement

ಸೊಲ್ಲಾಪುರ ಲೋಕಸಭೆ ಕ್ಷೇತ್ರದಲ್ಲಿ ಸುಶೀಲಕುಮಾರ ಶಿಂಧೆ, ಡಾ| ಜಯಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ಹಾಗೂ ಡಾ| ಪ್ರಕಾಶ ಅಂಬೇಡಕರ್‌ ಸೇರಿದಂತೆ ಒಟ್ಟು 13 ಅಭ್ಯರ್ಥಿಗಳು ಚುನಾವಣೆ ಕಣದಲ್ಲಿದ್ದರು. ಸುಮಾರು ಒಂದು ತಿಂಗಳಿಂದಲೂ ಜಿಲ್ಲೆಯಲ್ಲಿ ಕಾಂಗ್ರೆಸ್‌-ಬಿಜೆಪಿ ನಡುವೆ ಸೋಲು-ಗೆಲುವಿನ ಲೆಕ್ಕಾಚಾರ ನಡೆದಿತ್ತು.

ಗುರುವಾರ ನಡೆದ ಮತ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ| ಜಯಸಿದ್ಧೇಶ್ವರ ಸ್ವಾಮಿಜಿ ಅವರು ಮೊದಲನೇ ಸುತ್ತಿನಿಂದಲೂ ಮುನ್ನಡೆ ಸಾಧಿಸಿದರು. ಕೊನೆಯ ಸುತ್ತಿನವರೆಗೂ ಹಿನ್ನೆಡೆ ಅನುಭವಿಸಿದ ಸುಶೀಲಕುಮಾರ ಶಿಂಧೆ ಅವರು 3,54,994 ಮತಗಳನ್ನು ಮಾತ್ರ ಪಡೆದರು. ಬಿಜೆಪಿಯ ಡಾ| ಜಯಸಿದ್ಧೇಶ್ವರ ಸ್ವಾಮಿಜಿ 5,05,132 ಮತಗಳನ್ನು ಪಡೆದು 1,50,138 ಮತಗಳ ಅಂತರದಿಂದ ಗೆಲುವು ಸಾಧಿಸಿದರು. ವಂಚಿತ ಬಹುಜನ ಆಘಾಡಿ ಪಕ್ಷದ ಅಭ್ಯರ್ಥಿ ಪ್ರಕಾಶ ಅಂಬೇಡಕರ್‌ 1,63,870 ಮತಗಳನ್ನು ಪಡೆದುಕೊಂಡಿದ್ದೇ ಸುಶೀಲಕುಮಾರ ಶಿಂಧೆ ಸೋಲು ಅನುಭವಿಸಲು ಕಾರಣ ಎಂದು ಹೇಳಲಾಗುತ್ತಿದೆ.

ಎರಡನೇ ಬಾರಿಯೂ ಮಾಜಿ ಕೇಂದ್ರ ಗೃಹ ಸಚಿವ ಸುಶೀಲಕುಮಾರ ಶಿಂಧೆ ಹೀನಾಯ ಸೋಲು ಅನುಭವಿಸುವ ಮೂಲಕ ಸೊಲ್ಲಾಪುರ ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಭಾರಿ ಮುಖಭಂಗವಾಗಿದೆ. ಇನ್ನು ಬಿಜೆಪಿಯ ಡಾ| ಜಯಸಿದ್ಧೇಶ್ವರ ಸ್ವಾಮಿಜಿ ಗೆಲುವು ಸಾಧಿಸುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಜಿಲ್ಲಾದ್ಯಂತ ಸಿಹಿ ಹಂಚಿ, ಪಟಾಕಿ ಸಿಡಿಸುವ ಮೂಲಕ ಹರ್ಷ ವ್ಯಕ್ತಪಡಿಸಿದರು.

ಕಳೆದ 2014ರ ಲೋಕಸಭೆ ಚುನಾವಣೆಯಲ್ಲಿ ಸುಶೀಲಕುಮಾರ ಶಿಂಧೆ ಮತ್ತು ಬಿಜೆಪಿಯ ಶರದ ಬನಸೋಡೆ ನಡುವೆ ಪೈಪೋಟಿ ನಡೆದಿತ್ತು. ನರೇಂದ್ರ ಮೋದಿ ಅವರ ಅಲೆಯಿಂದ ಬಿಜೆಪಿ ಅಭ್ಯರ್ಥಿ ಶರದ ಬನಸೋಡೆ ಅವರು ಶಿಂಧೆಯವರನ್ನು ಸುಮಾರು 1.54 ಲಕ್ಷ ಮತಗಳ ಅಂತರದಿಂದ ಪರಾಭವಗೊಳಿಸಿದ್ದರು.

Advertisement

ಈ ಬಾರಿ ಹಾಲಿ ಸಂಸದ ಶರದ ಬನಸೋಡೆ ಅವರನ್ನು ಕೈಬಿಟ್ಟು ಗೌಡಗಾಂವ ಮಠದ ಡಾ| ಜಯಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಜಿಗೆ ಬಿಜೆಪಿ ಟಿಕೆಟ್ ನೀಡಿತ್ತು. ಬಿಜೆಪಿ, ಕಾಂಗ್ರೆಸ್‌ ಮತ್ತು ವಂಚಿತ ಬಹುಜನ ಆಘಾಡಿ ಪಕ್ಷದ ಮೂರು ಅಭ್ಯರ್ಥಿಗಳ ಮಧ್ಯೆ ಪೈಪೋಟಿ ಏರ್ಪಟ್ಟಿತ್ತು. ಜಾತಿ ಲೇಕ್ಕಾಚಾರದ ಮೇಲೆ ಚುನಾವಣೆ ರಂಗೇರಿತ್ತು. ಅಲ್ಲದೆ ಇದೇ ಮೊದಲ ಬಾರಿಗೆ ಸೊಲ್ಲಾಪುರ ಮತಕ್ಷೇತ್ರದಲ್ಲಿ ಬಿಜೆಯಿಂದ ಡಾ| ಜಯಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ಹಾಗೂ ವಂಚಿತ ಬಹುಜನ ಆಘಾಡಿ ಪಕ್ಷದಿಂದ ಡಾ| ಪ್ರಕಾಶ ಅಂಬೇಡಕರ್‌ ಅವರು ಚುನಾವಣೆ ಸ್ಪರ್ಧಿಸಿದ್ದರಿಂದ ಕಾಂಗ್ರೆಸ್‌ ಅಭ್ಯರ್ಥಿ ಸುಶೀಲಕುಮಾರ ಶಿಂಧೆ ಅವರಿಗೆ ಭಾರಿ ತಲೆನೋವಾಗಿತ್ತು.

ದೇಶದಲ್ಲಿ ನರೇಂದ್ರ ಮೋದಿ ಅಲೆ ಇರುವುದರಿಂದ ಬಿಜೆಪಿಯ ಗೆಲುವು ನಿಶ್ಚಿತವೆಂದು ಹೇಳಲಾಗುತ್ತಿತ್ತು. ಅಂತೆಯೇ ನಮೋ ಬಿರುಗಾಳಿಗೆ ಕಾಂಗ್ರೆಸ್‌ ಧೂಳಿಪಟವಾಗಿದೆ.

ಸೋಮಶೇಖರ ಜಮಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next