ಸೊಲ್ಲಾಪುರ: ಅವಧೂತ್ ಚಿಂತನ, ಗುರುದೇವ ದತ್ತ…! ಸದ್ಗುರು ಸ್ವಾಮಿ ಸಮರ್ಥ ಮಹಾರಾಜಕಿ ಜಯ..!! ಎಂಬ ಸಮರ್ಥರ ನಾಮಘೋಷಣೆಗಳೊಂದಿಗೆ ತೀರ್ಥಕ್ಷೇತ್ರ ಅಕ್ಕಲಕೋಟ ನಗರದ ಸ್ವಾಮಿ ಸಮರ್ಥರ ದರ್ಶನ ಪಡೆದ ಲಕ್ಷಾಂತ ಭಕ್ತರು ಸ್ವಾಮಿ ಸಮರ್ಥ ಅನ್ನಛತ್ರ ಮಂಡಳದಲ್ಲಿ ಮಹಾಪ್ರಸಾದ ಸ್ವೀಕರಿಸಿದರು.
ಮಂಗಳವಾರ ತ್ರಿಪುರಾರಿ ಪೂರ್ಣಿಮೆ ಅಂಗವಾಗಿ ಅನ್ನಛತ್ರ ಮಂಡಳದ ಸಂಸ್ಥಾಪಕ ಅಧ್ಯಕ್ಷ ಜನ್ಮೇಜಯರಾಜೆ ಭೋಸಲೆ ಅವರ ಮಾರ್ಗದರ್ಶನದಿಂದ ಬೆಳಗ್ಗೆ ಸಮರ್ಥರಿಗೆ ಮಹಾನೈವೇದ್ಯ
ಅರ್ಪಿಸಲಾಯಿತು. ತದನಂತರ ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಯಿತು. ಅನ್ನಛತ್ರ ಆವರಣದಲ್ಲಿ ಬಣ್ಣಬಣ್ಣದ ಹೂಗಳಿಂದ ಅಲಂಕಾರಗೊಳಿಸಲಾಗಿತ್ತು.
ಸ್ವಾಮಿ ಸಮರ್ಥರು ಮಹಾರಾಷ್ಟ್ರ ಸೇರಿದಂತೆ ದೇಶದ ಮೂಲೆ-ಮೂಲೆಯಲ್ಲಿ ಪ್ರಸಿದ್ಧಿ ಪಡೆದಿದ್ದಾರೆ. ಸ್ವಾಮಿ ಸಮರ್ಥರೆಂದಾಕ್ಷಣ ಭೀವು ನಕೋಸ್ ಮೀತುಜ್ಯಾ ಪಾಠಿಶಿ ಆಹೇ ಎಂಬ ವಾಕ್ಯ ಸ್ವಾಮಿ ಸಮರ್ಥರ ಭಕ್ತರಲ್ಲಿ ಅಚ್ಚಳಿಯದೆ ಉಳಿದಿದೆ. ಸ್ವಾಮಿ ಸಮರ್ಥರ ಜೊತೆ ಅನ್ನಛತ್ರ ಮಂಡಳವೂ ಅಷ್ಟೆ ಮಹತ್ವದ್ದು. ಅನ್ನದಾನದ ಮುಂದೆ ಯಾವ ದಾನವಿಲ್ಲ ಎಂಬಂತೆ ಅನ್ನಂ ಪರಿಸ್ರಹಂ ಎಂಬ ಮಾತು ಸಾಕಾರಗೊಳಿಸಿದ ಕೀರ್ತಿ ಇಲ್ಲಿನ ಅನ್ನಛತ್ರ ಮಂಡಳಕ್ಕೆ ಸಲ್ಲುತ್ತದೆ.
ಹಿಂದೆ ಸ್ವಾಮಿ ಸಮರ್ಥರು ಒಪ್ಪತ್ತಿನ ಊಟ ಸಿಗದವರಿಗೆ ಅನ್ನಪ್ರಸಾದ ಕಲ್ಪಿಸಿದರು. ಅನ್ನದಾನವು ನಿರಂತರ ನಡೆಯಬೇಕೆಂಬ ಆಸೆ ಸ್ವಾಮಿ ಸಮರ್ಥರದ್ದಾಗಿತ್ತು. ಅವರ ಅಪೇಕ್ಷೆಯಂತೆ ಸ್ವಾಮಿ ಸಮರ್ಥರ ದರ್ಶನಕ್ಕೆ ಬರುವ ಲಕ್ಷಾಂತರ ಜನ ಭಕ್ತರು ನಿತ್ಯ ಪ್ರಸಾದ ಸ್ವೀಕರಿಸುತ್ತಾರೆ. ಅನ್ನಛತ್ರದಲ್ಲಿ ಶಿಸ್ತು ಮತ್ತು ಸ್ವಚ್ಛತೆಗೆ ಮೊದಲ ಪ್ರಾಮುಖ್ಯತೆ ನೀಡಲಾಗಿದೆ. ವಿಶೇಷವಾಗಿ ಅನ್ನದಾಸೋಹದ ಜತೆಗೆ ಅನೇಕ ಸಾಮಾಜಿಕ ಕಾರ್ಯಗಳನ್ನು ಅನ್ನಛತ್ರ ಮಂಡಳ ಮಾಡುತ್ತ ಬಂದಿದೆ.