Advertisement

ಅಕ್ಕಲಕೋಟದಲ್ಲಿ ಕನ್ನಡ ಕಲರವ

05:36 PM Dec 22, 2019 | Naveen |

ಸೊಲ್ಲಾಪುರ: ಪ್ರತಿಯೊಬ್ಬರೂ ಮಾತೃಭಾಷೆ ಜತೆ ಅನ್ಯಭಾಷೆಯನ್ನೂ ಕಲಿತರೆ ಉತ್ತುಂಗದ ಜೀವನ ಸಾಗಿಸಲು ಸಾಧ್ಯವಾಗುತ್ತದೆ ಎಂದು ವಿಜಯಪುರ ಜ್ಞಾನಯೋಗಾಶ್ರಮದ ಪೂಜ್ಯ ಸಿದ್ದೇಶ್ವರ ಸ್ವಾಮೀಜಿ ನುಡಿದರು.

Advertisement

ಮಹಾರಾಷ್ಟ್ರದ ಆದರ್ಶ ಕನ್ನಡ ಬಳಗ, ಅಕ್ಕಲಕೋಟದ ಸ್ವಾಮಿ ಸಮರ್ಥ ಅನ್ನಛತ್ರ ಮಂಡಳ, ಕನ್ನಡ ಸಂಘಗಳ ಸಹಕಾರದೊಂದಿಗೆ ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘವು ನಾಡೋಜ ಪಾಟೀಲ ಪುಟ್ಟಪ್ಪ ನೇತೃತ್ವದಲ್ಲಿ ಅಕ್ಕಲಕೋಟದ ಅನ್ನಛತ್ರ ಮಂಡಳ ಆವರಣದಲ್ಲಿ ಹಮ್ಮಿಕೊಂಡಿದ್ದ ಅಖೀಲ ಭಾರತ ಹೊರನಾಡು ಕನ್ನಡ ಸಂಘಗಳ ಎಂಟನೇ ಮಹಾಮೇಳದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಬೇರೆ-ಬೇರೆ ರಾಜ್ಯದ ಜನರು ಮಾತೃಭಾಷೆಗಳಿಗೆ ಮಾತ್ರ ಸೀಮಿತವಾಗಿದ್ದರೆ, ಕನ್ನಡಿಗರು ಹಲವಾರು ಭಾಷೆಗಳನ್ನು ಸಮರ್ಥವಾಗಿ ಮಾತನಾಡುವುದರೊಂದಿಗೆ ಎಲ್ಲೆಡೆ-ಎಲ್ಲದರಲ್ಲೂ ಜಯಶಾಲಿಗಳಾಗಿ ಬರುತ್ತಾರೆ. ಅಕ್ಕಲಕೋಟ ಜನರು ಮರಾಠಿ ಜತೆಯಲ್ಲಿ ಕನ್ನಡವನ್ನು ಪೂಜಿಸುತ್ತ, ರಕ್ಷಿಸಿ-ಪೋಷಿಸುವ ಕಾರ್ಯ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ನಾಡೋಜ ಡಾ|ಪಾಟೀಲ ಪುಟ್ಟಪ್ಪ ಮಾತನಾಡಿ, ಕನ್ನಡ ಮಾತನಾಡಬೇಕಾದರೆ ಅಕ್ಕಲಕೋಟಕ್ಕೆ ಬರಬೇಕು. ಬಂದವರು ಯಾರೂ ಹಾಗೆ ಹೋಗಲ್ಲ. ಕನ್ನಡದೊಂದಿಗೆ ಕನ್ನಡಿಗರಾಗಿ ಹೋಗುತ್ತಾರೆ. ಇಂತಹ ಅಕ್ಕಲಕೋಟದಲ್ಲಿ ಮಹಾಮೇಳ ನಡೆಯುತ್ತಿರುವುದು ತುಂಬಾ ಸಂತೋಷ ತಂದಿದೆ ಎಂದರು.

ನರಗುಂದದ ಭೈರನಹಟ್ಟಿ ದೊರೆಸ್ವಾಮಿ ಮಠದ ಶ್ರೀ ಶಾಂತಲಿಂಗ ಸ್ವಾಮೀಜಿ, ಅಕ್ಕಲಕೋಟದ ಬಸವಲಿಂಗ ಸ್ವಾಮೀಜಿ, ನಾಗಣಸೂರಿನ ಅಭಿನವ ಬಸವಲಿಂಗ ಸ್ವಾಮೀಜಿ, ತೋಳನೂರಿನ ಚೆನ್ನಮಲ್ಲ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸ್ವಾಮಿ ಸಮರ್ಥ ಅನ್ನಛತ್ರ ಮಂಡಳದ ಮುಖ್ಯ ಕಾರ್ಯಕಾರಿ ವಿಶ್ವಸ್ಥ ಅಮೋಲರಾಜೆ ಭೋಸಲೆ ಸಮಾರಂಭ ಉದ್ಘಾಟಿಸಿದರು.

Advertisement

ನಗರಸೇವಕ ಮಿಲನ ಕಲ್ಯಾಣಶೆಟ್ಟಿ, ರಾಜಕುಮಾರ ಜಿಂಗಾಡೆ, ಗಿರೀಶ ಪಟ್ಟೇದ ಹಾಜರಿದ್ದರು. ನಾಡು ನುಡಿಗಾಗಿ ಶ್ರಮಿಸಿದ ಶಿವಶರಣ ಮಾಡ್ಯಾಳ, ಡಾ|ಮಧುಮಾಲಾ ಲಿಗಾಡೆ, ಧರ್ಮರಾಜ ಕಾಡಾದಿ, ಸುಭಾಸ ಬೆಳ್ಳುಬ್ಬಿ, ಎಸ್‌.ಕೆ. ಬಿರಾದಾರ, ಮಲ್ಲಿಕಾರ್ಜುನ ಮಡ್ಡೆ, ಆರ್‌.ಕೆ. ಪಾಟೀಲ, ಡಾ| ಮಹಮ್ಮದ್‌ ಆಜಂ, ಪ್ರಕಾಶ ವಿಭೂತಿ, ಸಿದ್ರಾಮಪ್ಪ ಮುಂಡೋಡಗಿ ಅವರಿಗೆ ಗೌರವ ಸಮರ್ಪಣೆ ಸಲ್ಲಿಸಲಾಯಿತು.

ಅನೀಲ ಮೇತ್ರಿ, ಮಹಾನಂದಾ ಗೋಸಾವಿ ತಂಡದವರು ವಂದೇಮಾತರಂ, ನಾಡಗೀತೆ, ಉದಯವಾಗಲಿ ಚೆಲುವ ಕನ್ನಡನಾಡು ಗೀತೆ ಪ್ರಸ್ತುತಪಡಿಸಿದರು. ಕಾರ್ಯಕಾರಿ ಸಮಿತಿ ಸದಸ್ಯೆ ವಿಶ್ವೇಶ್ವರಿ ಹಿರೇಮಠ ನಿರೂಪಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ ಎಸ್‌. ಉಡಕೇರಿ ಪ್ರಾಸ್ತಾವಿಕ ಮಾತನಾಡಿದರು.

ಬಸವರಾಜ ಧನಶೆಟ್ಟಿ ವಂದಿಸಿದರು. ಸಂಘದ ಪದಾಧಿಕಾರಿಗಳಾದ ಶಿವಣ್ಣ ಬೆಲ್ಲದ, ನಿಂಗಣ್ಣ ಕುಂಟಿ, ಸದಾನಂದ ಶಿವಳ್ಳಿ, ಸತೀಶ ತುಮರಿ, ಶಾಂತೇಶ ಗಾಮನಗಟ್ಟಿ, ಶಂಕರ ಕುಂಬಿ, ಮನೋಜ ಪಾಟೀಲ, ಬಸವಪ್ರಭು ಹೊಸಕೇರಿ, ಶಿವಾನಂದ ಭಾವಿಕಟ್ಟಿ, ಮಾಜಿ ಶಾಸಕರಾದ ಚಂದ್ರಕಾಂತ ಬೆಲ್ಲದ, ಶಿವಾನಂದ ಅಂಬಡಗಟ್ಟಿ, ಗುರುರಾಜ ಹುಣಸಿಮರದ, ಡಾ|ಲಿಂಗರಾಜ ಅಂಗಡಿ, ಮಾಜಿ ಸಂಸದ ಡಾ|ಐ.ಜಿ. ಸನದಿ, ಮಲಿಕಜಾನ್‌ ಶೇಖ್‌, ಗಿರೀಶ ಜಕಾಪುರೆ, ಸೋಮಶೇಖರ ಜಮಶೆಟ್ಟಿ, ಚಿದಾನಂದ ಮಠಪತಿ, ಅಪ್ಪು ಉಮರಾಣಿಕರ್‌, ಬಸವರಾಜ ಗುರವ, ಭೀಮಾಶಂಕರ ಪಾಟೀಲ, ಶರಣು ಕೋಳಿ, ಬಸವರಾಜ ಮಸೂತಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next