ಸೊಲ್ಲಾಪುರ: ಕನ್ನಡಿಗರು ಮತ್ತು ಅಕ್ಕಲಕೋಟ ನಡುವೆ ಒಡಹುಟ್ಟಿದ ರಕ್ತ ಸಂಬಂಧವಿದ್ದಂತಿದೆ. ಕರ್ನಾಟಕ ಮತ್ತು ಮಹಾರಾಷ್ಟ್ರಗಳ ನಡುವೆ ಭಾಷೆ, ಸಾಂಸ್ಕೃತಿಕ ಬಾಂಧವ್ಯ ನಿರಂತರವಾಗಿ ಕನ್ನಡ ಮನಸ್ಸುಗಳೊಂದಿಗೆ ಮಾನವೀಯ ಮೌಲ್ಯಗಳೊಂದಿಗೆ ಬೆರೆತರೆ ಅದರಿಂದ ಸಿಗುವ ಆನಂದ ಬೇರೆ ಎಲ್ಲೂ ಸಿಗುವುದಿಲ್ಲ ಎಂದು ಭೈರನಟ್ಟಿ ದೊರೆಸ್ವಾಮಿ ಮಠದ ಶಾಂತಲಿಂಗ ಸ್ವಾಮೀಜಿ ನುಡಿದರು.
ಅಕ್ಕಲಕೋಟ ನಗರದ ಸ್ವಾಮಿ ಸಮರ್ಥ ಅನ್ನಛತ್ರ ಮಂಡಳದ ಆವರಣದಲ್ಲಿ ಆಯೋಜಿಸಿರುವ ಅಖೀಲ ಭಾರತ ಹೊರನಾಡ ಕನ್ನಡ ಸಂಘಗಳ 8ನೇ ಮಹಾಮೇಳದಲ್ಲಿ ಹಮ್ಮಿಕೊಂಡಿರುವ ವಿವಿಧ ಗೋಷ್ಠಿಗಳಿಗೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.
ಭಾಷೆ, ಸಮಾಜ ಯಾವತ್ತೂ ರಾಜಕಾರಣ ವಸ್ತುವಾಗಬಾರದು. ಅಕ್ಕಲಕೋಟದಲ್ಲಿ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮರಾಠಿಗರು ಮತ್ತು ಕನ್ನಡಿಗರು ಅನ್ಯೋನ್ಯ ಸಂಬಂಧ ಹೊಂದಿದ್ದಾರೆ. ಕನ್ನಡ ಮತ್ತು ಮರಾಠಿ ರಂಗಭೂಮಿ ಕಲೆಯು ಒಂದೇ ನಾಣ್ಯದ ಎರಡು ಮುಖ ಇದ್ದಂತಿದೆ. ಕನ್ನಡದ ಅಸ್ಮಿತೆ ಉಳಿಸಲು ಅನೇಕರು ಶ್ರಮಿಸುತ್ತಿದ್ದಾರೆ. ಕಲಿಯಲು ಕೋಟಿ ಭಾಷೆಯಿದ್ದರೂ ಮಾತನಾಡಲು ಕನ್ನಡವನ್ನೇ ಬಳಸುವ ಮೂಲಕ ಮಾತೃಭಾಷೆ ಉಳಿಸಲು ಶ್ರಮಿಸೋಣ ಎಂದು ಕರೆ ನೀಡಿದರು.
ಅತಿಥಿಯಾಗಿ ಮನೋಜ ಪಾಟೀಲ ಮಾತನಾಡಿ, ಕನ್ನಡ ಮತ್ತು ಮರಾಠಿಗರ ನಡುವೆ ಕೊಡುಕೊಳ್ಳುವ ಬಾಂಧವ್ಯ ಅನೂಚಾನವಾಗಿ ನಡೆದುಕೊಂಡು ಬಂದಿದೆ. ಯಾವುದೇ ಹೊಟ್ಟೆಯುರಿಯಿಲ್ಲದೇ ಇದು ನಿರಂತರವಾಗಿ ಸಾಗಿದೆ. ಇದಕ್ಕೆ ಎರಡೂ ಭಾಷೆಗಳ ನಡುವಿನ ಸಾಂಸ್ಕೃತಿಕತೆ, ಸಹೃದಯತೆಯೇ ಕಾರಣ ಎಂದರು.
ಮಹೇಶ ಚಟ್ನಳ್ಳಿ, ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಶಾಂತೇಶ ಗಾಮನಗಟ್ಟಿ ಆಶಯ ನುಡಿಯಾಡಿದರು. ಶಿವಣ್ಣ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಶದಾನಂದ ಶಿವಳ್ಳಿ ಸ್ವಾಗತಿಸಿದರು, ಪ್ರಭುದೇವ ಹೊಸಕೇರಿ ನಿರೂಪಿಸಿದರು. ಸಂಘದ ಪದಾ ಧಿಕಾರಿಗಳಾದ ಶಿವಣ್ಣ ಬೆಲ್ಲದ,
ನಿಂಗಣ್ಣ ಕುಂಟಿ, ಸದಾನಂದ ಶಿವಳ್ಳಿ, ಸತೀಶ ತುಮರಿ, ಶಾಂತೇಶ ಗಾಮನಗಟ್ಟಿ, ಶಂಕರ ಕುಂಬಿ, ಮನೋಜ ಪಾಟೀಲ, ಬಸವಪ್ರಭು ಹೊಸಕೇರಿ, ಶಿವಾನಂದ ಭಾವಿಕಟ್ಟಿ, ಮಾಜಿ ಶಾಸಕರಾದ ಚಂದ್ರಕಾಂತ ಬೆಲ್ಲದ, ಶಿವಾನಂದ ಅಂಬಡಗಟ್ಟಿ, ಗುರುರಾಜ ಹುಣಸಿಮರದ, ಡಾ| ಲಿಂಗರಾಜ ಅಂಗಡಿ, ಡಾ| ಐ.ಜಿ. ಸನದಿ, ಮಾರ್ತಾಂಡಪ್ಪ ಎಂ. ಕತ್ತಿ ಹಾಗೂ ಆದರ್ಶ ಕನ್ನಡ ಬಳಗದ ಪದಾಧಿಕಾರಿಗಳು ಸೇರಿದಂತೆ ಸಾವಿರಾರು ಕನ್ನಡಿಗರು ಇದ್ದರು.