Advertisement

ಸೊಲ್ಲಾಪುರ ಮೀಸಲು ಕ್ಷೇತ್ರ: ಶೇ.60 ಮತದಾನ

10:08 AM Apr 19, 2019 | Team Udayavani |

ಸೊಲ್ಲಾಪುರ: ಸೊಲ್ಲಾಪುರ ಮೀಸಲು ಲೋಕಸಭಾ ಮತಕ್ಷೇತ್ರದ ಚುನಾವಣೆಗಾಗಿ ಏಪ್ರಿಲ್‌ 18 ರಂದು ಶಾಂತಿಯುತವಾಗಿ ಮತದಾನ ನಡೆದಿದ್ದು, ಶೇ. 60ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.

Advertisement

ಮಹಾರಾಷ್ಟ್ರದ 10 ಲೋಕಸಭೆ ಕ್ಷೇತ್ರಗಳಲ್ಲಿ ನಡೆದ ಎರಡನೇ ಹಂತದ ಮತದಾನದಲ್ಲಿ ಗುರುವಾರ ಬೆಳಗ್ಗೆ 7 ಗಂಟೆಗೆ ಪ್ರಾರಂಭವಾದ ಮತದಾನ ಸಂಜೆ 7 ಗಂಟೆಗೆ ಕೊನೆಗೊಂಡಿದೆ. ಸೊಲ್ಲಾಪುರ ಲೋಕಸಭೆ ಮತಕ್ಷೇತ್ರದಲ್ಲಿ ಮೋಹೋಳ, ಉತ್ತರ ಸೊಲ್ಲಾಪುರ, ದಕ್ಷಿಣ ಸೊಲ್ಲಾಪುರ, ಅಕ್ಕಲಕೋಟ, ಸೊಲ್ಲಾಪುರ
ಮಧ್ಯ, ಪಂಢರಪುರ ಹೀಗೆ ಒಟ್ಟು ಆರು ವಿಧಾನಸಭೆ ಮತಕ್ಷೇತ್ರಗಳು ಬರುತ್ತವೆ. ಸೊಲ್ಲಾಪುರ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 18 ಲಕ್ಷ 30 ಸಾವಿರ ಮತದಾರರಲ್ಲಿ ಶೇ.60ರಷ್ಟು ಮತದಾರರು ಮತ ಚಲಾಯಿಸಿದ್ದಾರೆ ಎಂದು ಚುನಾವಣೆ ಅಧಿಕಾರಿಗಳು ತಿಳಿಸಿದ್ದಾರೆ.

ಸೊಲ್ಲಾಪುರ ಲೋಕಸಭಾ ಮತಕ್ಷೇತ್ರದ ಕೆಲವು ಮತಗಟ್ಟೆಗಳ ವಿದ್ಯುನ್ಮಾನ ಮತಯಂತ್ರಗಳಲ್ಲಿ ದೋಷ ಕಂಡು ಬಂದಿದ್ದು, ಯಂತ್ರಗಳಲ್ಲಿ ದೋಷ ಕಾಣಿಸಿಕೊಂಡ ಹಾಗೂ ಮತದಾರರ ಪಟ್ಟಿಯಲ್ಲಿ ಹೆಸರೇ ಇಲ್ಲದೆ ನಾಗರಿಕರು ಸಮಸ್ಯೆ ಅನುಭವಿಸಿದ ಘಟನೆಯೂ ನಡೆದಿದೆ. ಅಕ್ಕಲಕೋಟ ತಾಲೂಕಿನ ಸಲಗರ, ಕೀಣಿ, ಉಡಗಿ ಸೇರಿದಂತೆ ಕೆಲವು ಭಾಗದ ಮತಯಂತ್ರಗಳಲ್ಲಿ ದೋಷ ಕಂಡು ಬಂದಿತ್ತು. ಅಕ್ಕಲಕೋಟ ತಾಲೂಕಿನ ಕೂಡಲ ಗ್ರಾಮದ ಗ್ರಾಮಸ್ಥರು ನೀರಿಗಾಗಿ ಚುನಾವಣೆಗೆ ಬಹಿಷ್ಕಾರ ಹಾಕಿದ್ದರು. ಅಲ್ಲದೇ ಮೋಹೋಳ ತಾಲೂಕಿನ ಗ್ರಾಮೀಣ ಭಾಗದಲ್ಲಿ ನಡೆದ ಸಣ್ಣಪುಟ್ಟ ಸಮಸ್ಯೆಗಳನ್ನು ಬಿಟ್ಟರೆ ಜಿಲ್ಲಾದ್ಯಂತ ಶಂತಿಯುತವಾಗಿ ಮನದಾನ ನಡೆದಿದೆ. ಮತದಾನ ಕೇಂದ್ರದ ಸುತ್ತಲೂ ಪೊಲೀಸ್‌ ಬೀಗಿ ಭದ್ರತೆ ಕಲ್ಪಿಸಲಾಗಿತ್ತು ಎಂದು ಜಿಲ್ಲಾ ಚುನಾವಣೆ ಅಧಿಕಾರಿ ಡಾ| ರಾಜೇಂದ್ರ ಭೋಸಲೆ ತಿಳಿಸಿದರು.

ಸೊಲ್ಲಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ| ಜಯಸಿದ್ಧೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ ಬೆಳಗ್ಗೆ 8:30 ಗಂಟೆಗೆ ಗೌಡಗಾವ ಗ್ರಾಮದಲ್ಲಿ ಮತ ಚಲಾಯಿಸಿದರು. ಅಲ್ಲದೇ ವಿಶೇಷವಾಗಿ 106 ವರ್ಷದ ವಯೋವೃದ್ಧರೊಬ್ಬರು ಮತದಾನ ಮಾಡಿದ್ದಾರೆ. ಕಳೆದ ಅನೇಕ ವರ್ಷಗಳಿಂದ ಡಾ| ಜಯಸಿದ್ಧೇಶ್ವರ
ಶ್ರೀಗಳು ಪ್ರತಿ ಗುರುವಾರ ಮೌನವಾಗಿರುತ್ತಾರೆ. ಅಂದು ಯಾರ ಜೊತೆಗೂ ಮಾತನಾಡುವುದಿಲ್ಲ. ಏ.18 ರಂದೇ ಮತದಾನದ ದಿನ ಬಂದಿರುವುದರಿಂದ ಮೌನವಾಗಿಯೇ ಬಂದು ಮತದಾನ ಮಾಡಿದರು.

ಬಿಜೆಪಿ ಅಭ್ಯರ್ಥಿ ಡಾ| ಜಯಸಿದ್ಧೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ ಪರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ, ವಿರೂಪಾಕ್ಷಪ್ಪಾ ಶಿವಾಚಾರ್ಯ ಶ್ರೀಗಳು, ಮತದಾನ ಪ್ರತಿಯೊಬ್ಬ ಪ್ರಜೆಯ ಪವಿತ್ರ ನಾಗರಿಕ ಸೇವೆಯಾಗಿದ್ದು, ಪ್ರಜಾಪ್ರಭುತ್ವವನ್ನು ಬಲಿಷ್ಠಗೊಳಿಸಲು ಪ್ರತಿಯೊಬ್ಬರೂ ಕಡ್ಡಾಯವಾಗಿ ಮತ ಚಲಾಯಿಸಬೇಕು. ಅಲ್ಲದೇ ಈ ಚುನಾವಣೆಯಲ್ಲಿ ಎದುರಾಳಿಗಳು ಯಾರೇ ಇದ್ದರೂ ಗೆಲವು ಮಾತ್ರ ನಮ್ಮದಾಗಲಿದೆ ಎಂದು ಹೇಳಿದರು.

Advertisement

ಸೊಲ್ಲಾಪುರ ಲೋಕಸಭೆ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಕೇಂದ್ರದ ಮಾಜಿ ಗೃಹ ಸಚಿವ ಸುಶೀಲಕುಮಾರ ಶಿಂಧೆ, ಪತ್ನಿ ಉಜ್ವಲಾ ಶಿಂಧೆ, ಪುತ್ರಿ ಶಾಸಕಿ ಪ್ರಣಿತಿ ಶಿಂಧೆ ಹಾಗೂ ಕುಟುಂಬ ಸದಸ್ಯರೊಂದಿಗೆ ಆಗಮಿಸಿ ಮತ ಚಲಾಯಿಸಿದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಮತ್ತು ಸಂಸದನಾಗಿ ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆ. ಆದ್ದರಿಂದ
ಮತದಾರರು ನನ್ನ ಕೈ ಬಿಡುವುದಿಲ್ಲ. ಈ ಚುನಾವಣೆ ನನ್ನ ಕೊನೆ ಚುನಾವಣೆಯಾಗಿದೆ ಎಂದು ಹೇಳಿದರು.

ಸೊಲ್ಲಾಪುರ ಲೋಕಸಭೆ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಸುಶೀಲಕುಮಾರ ಶಿಂಧೆ, ಬಿಜೆಪಿ ಅಭ್ಯರ್ಥಿ ಡಾ| ಜಯಸಿದ್ಧೇಶ್ವರ ಶಿವಾಚಾರ್ಯರು, ವಂಚಿತ ಬಹುಜನ ಆಘಾಡಿ ಪಕ್ಷದ ಅಭ್ಯರ್ಥಿ ಡಾ| ಪ್ರಕಾಶ ಅಂಬೇಡಕರ್‌ ನಡುವೆ ಪೈಪೋಟಿ ಏರ್ಪಟ್ಟಿದೆ. ಇವರ ಭವಿಷ್ಯ ಮೇ 23ರಂದು ಗೊತ್ತಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next