Advertisement

ಸ್ವೀಪ್‌ ಸಮಿತಿಯಿಂದ ಸೋಲಿಗರಿಗೆ ಮತದಾನ ಜಾಗೃತಿ

01:19 PM Mar 25, 2019 | Lakshmi GovindaRaju |

ಸಂತೆಮರಹಳ್ಳಿ: ರಾಜ್ಯದಲ್ಲೇ ಅತೀ ಹೆಚ್ಚು ಸೋಲಿಗ ಹಾಗೂ ಬುಡಕಟ್ಟು ಜನಾಂಗವನ್ನು ಹೊಂದಿರುವ ಪ್ರದೇಶ ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನಾಥಸ್ವಾಮಿ ಹುಲಿ ಸಂರಕ್ಷಿತ ಪ್ರದೇಶವಾಗಿದೆ. ಇಲ್ಲಿ ಸ್ವೀಪ್‌ ಸಮಿತಿಯ ವತಿಯಿಂದ ಬುಡಕ್ಟಟು ಜನಾಂಗವಾದ ಸೋಲಿಗ ಜನಾಂಗದವರಿಗೆ ಮತದಾನ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯಿತು.

Advertisement

ಯಳಂದೂರು ತಾಲೂಕಿನ ಬಿಆರ್‌ಟಿ ವ್ಯಾಪ್ತಿಯಲ್ಲೂ ಕಂಡು ಬರುವ ಈ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸ್ಥಾಪಿಸಿರುವ ಮತಗಟ್ಟೆಗಳಲ್ಲಿ ಪ್ರತಿ ಬಾರಿ ನಡೆಯುವ ಲೋಕಸಭೆ ಹಾಗೂ ವಿಧಾನಸಭಾ ಚುನಾವ ಣೆಯಲ್ಲಿ ಶೇಕಡವಾರು ಮತದಾನ ಕಡಿಮೆ ಇರುತ್ತದೆ.

ಈ ಹಿನ್ನೆಲೆಯಲ್ಲಿ ಕಳೆದ ಬಾರಿಯ ಲೋಕಸಭಾ ಚುನಾವಣೆಗಿಂತ ಈ ಬಾರಿಯ ಚುನಾವಣೆಯಲ್ಲಿ ದಟ್ಟ ಕಾನನದಲ್ಲಿ ವಾಸಿಸುವ ಗಿರಿಜನರು ಕಡ್ಡಾಯವಾಗಿ ಮತ ಚಲಾಯಿಸುವಂತೆ ಪ್ರೇರೇಪಿಸಲು ಚಾಮರಾಜನಗರದ ಜಿಲ್ಲಾಡಳಿತದ ಚುನಾವಣಾ ಆಯೋಗದ ಸ್ವೀಪ್‌ ಜಾಗೃತಿ ಸಮಿತಿ ಮತದಾನ ಜಾಗೃತಿ ಅಭಿಯಾನ ಹಮ್ಮಿಕೊಂಡಿತ್ತು.

ಈ ಅಭಿಯಾನದಲ್ಲಿ ಮತದಾನವನ್ನು ಪ್ರತಿಯೊಬ್ಬ ಗಿರಿಜನರು ಕಡ್ಡಾಯವಾಗಿ ಚಲಾಯಿಸುವಂತೆ ಮಾಡಲು ಗಿರಿಜನರ ನೃತ್ಯ, ಹಾಡುಗಾರಿಕೆ, ಜಾನಪದ ಹಾಡು, ಬೀದಿ ನಾಟಕ, ಚಿತ್ರಕಲೆ ವಸ್ತು ಪ್ರದರ್ಶನದ ಮೂಲಕ ಅವರಿಗೆ ಅರಿವು ಮೂಡಿಸಲಾಯಿತು.

ಜಿಪಂ ಸಿಇಒ ಲತಾಕುಮಾರಿ ಮಾತನಾಡಿ, ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ವಾಸಿಸುವ ಪ್ರತಿಯೊಂದು ಪೋಡಿನ ಬುಡಕಟ್ಟು ಜನಾಂಗದವರು ಈ ಬಾರಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಶೇ.100ರಷ್ಟು ಮತ ಚಲಾಯಿಸಬೇಕು.

Advertisement

ಇದಕ್ಕಾಗಿ ಇಂತಹ ಸ್ಥಳಗಳಲ್ಲಿ ಜಿಲ್ಲಾ ಸ್ವೀಪ್‌ ಜಾಗೃತಿ ಸಮಿತಿ ವತಿಯಿಂದ ಅವರಿಗೆ ಅವರದೇ ಸಾಂಸ್ಕೃತಿಕ ಶೈಲಿಯ ಗೊರುಕನ ನೃತ್ಯ, ಜಾನಪದ ಹಾಡು, ಬೀದಿ ನಾಟಕಗಳ ಮೂಲಕ ಅರಿವು ಮೂಡಿಸಲಾಗುತ್ತಿದೆ. ಆ ಮೂಲಕ ಈ ಬಾರಿಯ ಲೋಕ ಸಭಾ ಚುನಾವಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನದಲ್ಲಿ ಗಿರಿಜನರು ಇದರಲ್ಲಿ ಪಾಲ್ಗುಳ್ಳುವಂತೆ ಮಾಡುವುದು ಮತದಾನ ಜಾಗೃತಿಯ ಮುಖ್ಯ ಉದ್ದೇಶವಾಗಿದೆ ಎಂದರು.

ಯಳಂದೂರು ತಾಪಂ ಕಾರ್ಯನಿರ್ವಾಹಕಾಧಿಕಾರಿ ಬಿ.ಎಸ್‌.ರಾಜು ಮಾತನಾಡಿ, ಕಳೆದ ಬಾರಿಯ ಚುನಾವಣೆಯಲ್ಲಿ ಬಿಳಿಗಿರಿರಂಗನಾಥಸ್ವಾಮಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ವಾಸಿಸುವ ಗಿರಿಜನರು ಶೇ. 60 ರಷ್ಟು ಮತದಾನದ ಹಕ್ಕು ಚಲಾಯಿಸಿದ್ದಾರೆ. ಈ ಬಾರಿ ಶೇ.100ರಷ್ಟು ಮತದಾನದ ಹಕ್ಕನ್ನು ಅವರು ಚಲಾಯಿಸುವಂತೆ ಪ್ರೇರೇಪಿಸಲು ತಾಲೂಕು ಸ್ವೀಪ್‌ ಸಮಿತಿ ವತಿಯಿಂದಲೂ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಗುಂಬಳ್ಳಿ ಸರ್ಕಾರಿ ಪ್ರೌಢಶಾಲೆಯ ನಾಟಕ ಶಿಕ್ಷಕ ಮಧುಕರ್‌ ಮಳವಳ್ಳಿ ನಿರ್ದೇಶಿರುವ ಮತದಾನ ಜಾಗೃತಿಯ ವಿಶೇಷ ನಾಟಕದಲ್ಲಿ ಈ ಶಾಲೆಯ ಮಕ್ಕಳು ಪ್ರದರ್ಶಿಸಿದ ನಾಟಕ ಗಮನ ಸೆಳೆಯಿತು.
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಮೇಘಾ, ಕ್ಷೇತ್ರ ಶಿಕ್ಷಣಾಧಿಕಾರಿ ತಿರುಮಲಾಚಾರಿ, ಸೇರಿದಂತೆ ವಿವಿಧ ಇಲಾಖೆ ನೌಕರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next