ಚಂಡೀಗಡ : ಪಂಜಾಬ್ ನಲ್ಲಿ ನಡೆಯುತ್ತಿರುವ ರಾಜಕೀಯ ಹೈ ಡ್ರಾಮಾಗೆ ಮತ್ತೊಂದು ಹೊಸ ಟ್ವಿಸ್ಟ್ ಸಿಕ್ಕಿದ್ದು, ಸಚಿವೆಯಾಗಿ ಅಧಿಕಾರ ವಹಿಸಿಕೊಂಡ ಎರಡೇ ದಿನಕ್ಕೆ ರಜಿಯಾ ಸುಲ್ತಾನಾ ರಾಜೀನಾಮೆ ನೀಡಿದ್ದಾರೆ. ಪಂಜಾಬ್ ಘಟಕದ ಅಧ್ಯಕ್ಷ ಸ್ಥಾನಕ್ಕೆ ನವಜೋತ ಸಿಂಗ್ ಸಿಧು ರಾಜೀನಾಮೆ ನೀಡಿದ ಕೆಲವೇ ಹೊತ್ತಿನಲ್ಲಿ ರಜಿಯಾ ಕೂಡ ಸಚಿವೆ ಸ್ಥಾನ ತೊರೆದಿದ್ದು, ಇದು ಒಗ್ಗಟ್ಟು ಪ್ರದರ್ಶನ ಎಂದಿದ್ದಾರೆ.
ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಅವರಿಗೆ ಸಲ್ಲಿಸಿರುವ ರಾಜೀನಾಮೆ ಪತ್ರದಲ್ಲಿ ಸುಲ್ತಾನಾ, ನವಜೋತ್ ಸಿಂಗ್ ಸಿಧು ಅವರ ಜೊತೆಗೆ ಒಗ್ಗಟ್ಟು ಪ್ರದರ್ಶಿಸಲು ರಾಜೀನಾಮೆ ನೀಡುತ್ತಿರುವುದಾಗಿ ಹೇಳಿದ್ದಾರೆ.
ಕಳೆದ ಎರಡು ತಿಂಗಳ ಹಿಂದೆಯಷ್ಟೇ ಪಂಜಾಬ್ ಘಟಕದ ಕಾಂಗ್ರೆಸ್ ಅಧ್ಯಕ್ಷರಾಗಿ ಸಿಧು ಅಧಿಕಾರ ವಹಿಸಿಕೊಂಡಿದ್ದರು. ಆದರೆ, ಮಂಗಳವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಇವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ರಜಿಯಾ ಕೂಡ ರಾಜೀನಾಮೆ ಹಾದಿ ತುಳಿದಿದ್ದಾರೆ. ಸುಲ್ತಾನಾ ಅವರು ಸಿಧು ಆಪ್ತ ವಲಯದಲ್ಲಿ ಗುರುತಿಸಿಕೊಂಡವರು. ಇವರ ಪತಿ, ಮಾಜಿ ಐಪಿಎಸ್ ಅಧಿಕಾರಿ, ಮೊಹಮ್ಮದ್ ಮುಸ್ತಫಾ, ಸಿದ್ದು ಅವರ ಪ್ರಮುಖ ಕಾರ್ಯತಂತ್ರದ ಸಲಹೆಗಾರರಾಗಿದ್ದಾರೆ.
ಇಂದು ಬೆಳಿಗ್ಗೆಯಷ್ಟೇ, ಸುಲ್ತಾನಾ ಅವರಿಗೆ ನೀರು ಸರಬರಾಜು ಮತ್ತು ನೈರ್ಮಲ್ಯ, ಸಾಮಾಜಿಕ ಭದ್ರತೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಮುದ್ರಣ ಮತ್ತು ಲೇಖನ ಇಲಾಖೆಗಳ ಜವಾಬ್ದಾರಿ ನೀಡಲಾಗಿತ್ತು. ಅಮರಿಂದರ್ ಸಿಂಗ್ ನೇತೃತ್ವದ ಸರ್ಕಾರದಲ್ಲಿ ಅವರು ಸಾರಿಗೆ ಸಚಿವರಾಗಿದ್ದರು.
ರಾಜೀನಾಮೆ ಬಳಿಕ ಮಾಧ್ಯಮಗಳಿಗೆ ಮಾತನಾಡಿದ ರಜಿತಾ, ಸಿದು ಸಾಹಬ್ ಅವರು ತತ್ವಗಳಿಗೆ ಬೆಲೆ ಕೊಡುವ ಮನುಷ್ಯ. ಅವರು ಪಂಜಾಬ್ ಮತ್ತು ಪಂಜಾಬಿಯತ್‌ಗಾಗಿ ಹೋರಾಡುತ್ತಿದ್ದಾರೆ. ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಪಂಜಾಬ್‍ನ ಹಿತದೃಷ್ಠಿಯಿಂದ ಪಕ್ಷಕ್ಕಾಗಿ ಕೆಲಸ ಮಾಡುತ್ತೇನೆ ಎಂದಿದ್ದಾರೆ ರಜಿಯಾ.