ಬೆಂಗಳೂರು: ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಪ್ರಮಾಣವಚನ ಕಾರ್ಯಕ್ರಮದಲ್ಲಿ ಬಿಜೆಪಿಯೇತರ ವಿಪಕ್ಷಗಳ ಮುಖ್ಯಸ್ಥರು ಭಾಗಿಯಾಗಿ ಒಗ್ಗಟ್ಟು ಪ್ರದರ್ಶಿಸುವ ಮೂಲಕ ಮುಂದಿನ ಲೋಕಸಭೆ ಚುನಾವಣೆಗೆ ಜತೆಗೂಡಿ ಹೋರಾಡುವ ಸಂದೇಶ ರವಾನಿಸಿದರು.
ರಾಹುಲ್‌ಗಾಂಧಿ-ಪ್ರಿಯಾಂಕಾ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್, ಬಿಹಾರ ಸಿಎಂ ನಿತೀಶ್ ಕುಮಾರ್, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಎನ್‌ಸಿ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ, ಪಿಡಿಪಿ ಮುಖ್ಯಸ್ಥೆ ಮೆಹಬೂಬ ಮುಫ್ತಿ, ಮಕ್ಕಳ ನಿಧಿ ಮೈಮ್‌ನ ಕಮಲಹಾಸನ್ ಸಹಿತ ವಿಪಕ್ಷಗಳ ನಾಯಕರು ಭಾಗಿಯಾಗಿದ್ದು ರಾಜಕೀಯ ಸಂದೇಶ ಕಳುಹಿಸಿದಂತಾಗಿದೆ.
ಇದೇ ಉದ್ದೇಶದಿಂದ ಕಂಠೀರವ ಕ್ರೀಡಾಂಗಣದಲ್ಲಿ ಬೃಹತ್ ಸಮಾರಂಭ ಆಯೋಜಿಸಿದ್ದ ಕಾಂಗ್ರೆಸ್ ಎಲ್ಲ ನಾಯಕರನ್ನೂ ವೇದಿಕೆಯಲ್ಲಿ ಒಟ್ಟಿಗೆ ಸೇರಿಸಿ ಒಗ್ಗಟ್ಟು ಪ್ರದರ್ಶನ ಮಾಡಿಸುವಲ್ಲಿ ಯಶಸ್ವಿಯಾಯಿತು.
ದೇಶವ್ಯಾಪಿ ವಿಸ್ತರಣೆ
ಪ್ರಮಾಣ ವಚನದ ಅನಂತರ ಮಾತನಾಡಿದ ರಾಹುಲ್‌ಗಾಂಧಿ, ಕರ್ನಾಟಕದಲ್ಲಿ ಇಂದಿನಿಂದ ದ್ವೇಷದ ಸಂತೆಯಲ್ಲಿ ಪ್ರೀತಿಯ ಅಂಗಡಿ ತೆರೆದಿದ್ದೇವೆ. ಇದು ದೇಶವ್ಯಾಪಿ ವಿಸ್ತರಿಸಲಿದೆ. ಕರ್ನಾಟಕದಲ್ಲಿ ಕಾಂಗ್ರೆಸ್‌ನ ಗೆಲುವು ದೇಶದ ಬಡವರ ಗೆಲುವು. ಇದು ಮುಂದಿನ ಹೋರಾಟಕ್ಕೆ ಸ್ಫೂರ್ತಿ ತುಂಬಿದೆ ಎಂದು ತಿಳಿಸಿದರು.
ಕರ್ನಾಟಕದ ಬದಲಾವಣೆ ದೇಶದಲ್ಲೂ ವಿಸ್ತರಿಸಲಿದೆ. ಇಲ್ಲಿನ ಫಲಿತಾಂಶ ರಾಷ್ಟ್ರಕ್ಕೆ ಹೊಸ ಸಂದೇಶ ರವಾನಿಸಿದೆ. ಈ ಸಮಾರಂಭಕ್ಕೆ ದೇಶದ ಹಲವಾರು ವಿಪಕ್ಷ ನಾಯಕರು ಸಾಕ್ಷಿಯಾಗಿದ್ದು, ಹೋರಾಟ ಆರಂಭವಾಗಿದೆ ಎಂದು ಹೇಳಿದರು.
Related Articles
ಕಾಂಗ್ರೆಸ್ ಬಡವರು, ದೀನ ದಲಿತರು, ಯುವ ಸಮೂಹದ ಪರ ಸದಾ ಇರಲಿದೆ. ಭ್ರಷ್ಟಾಚಾರ ರಹಿತ, ದಕ್ಷ ಆಡಳಿತದ ವಾಗ್ಧಾನ ನಮ್ಮದು ಎಂದು ಪ್ರತಿಪಾದಿಸಿದರು. ರಾಜ್ಯದ ಜನತೆಗೆ ಮಾತು ಕೊಟ್ಟಂತೆ ನಾವು ನುಡಿದಂತೆ ನಡೆಯುತ್ತೇವೆ. ನಿಮ್ಮ ವಿಶ್ವಾಸ ಉಳಿಸಿಕೊಳ್ಳುತ್ತೇವೆ ಎಂದು ವಾಗ್ಧಾನ ನೀಡಿದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವು ರಾಜ್ಯದ ಬಡವರು-ಮಧ್ಯಮ ವರ್ಗದವರು ಸೇರಿ ಕನ್ನಡಿಗರ ಗೆಲುವು. ಇದಕ್ಕಾಗಿ ನಾನು ನಾಡಿನ ಜನತೆಗೆ ಧನ್ಯವಾದ ಸಮರ್ಪಿಸುತ್ತೇನೆ. ನೀವು ಕೊಟ್ಟ ಪ್ರೀತಿ, ಶಕ್ತಿಯನ್ನು ನಾವು ಎಂದೂ ಮರೆಯುವುದಿಲ್ಲ. ಪೊಳ್ಳು ಭರವಸೆ ನೀಡಿಲ್ಲ, ಕೊಟ್ಟ ಭರವಸೆ ಈಡೇರಿಸಿಯೇ ತೀರುತ್ತೇವೆ. ನಾವು ಕೊಟ್ಟ ಮಾತಿನಂತೆ ಮೊದಲ ಸಂಪುಟದಲ್ಲೇ ತೀರ್ಮಾನ ಹೊರಬೀಳಲಿದೆ ಎಂದು ಹೇಳಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಕರ್ನಾಟಕದ ಜನತೆ ರಾಜಕೀಯವಾಗಿ ಒಂದು ಸಂದೇಶ ರವಾನಿಸಿದ್ದು, ಇದು ಇಡೀ ದೇಶಕ್ಕೆ ತಲುಪಿದೆ ಎಂದು ಹೇಳಿದರು.
ರಾಜ್ಯದ ಜನತೆ ಕೊಟ್ಟ ಗೆಲುವಿಗೆ ನಾವು ಋಣಿಯಾಗಿರುತ್ತೇವೆ. ಭ್ರಷ್ಟಾಚಾರ ರಹಿತ, ದಕ್ಷ ಆಡಳಿತ ನೀಡುತ್ತೇವೆ. ಈ ಮೂಲಕ ದೇಶಕ್ಕೆ ಮಾದರಿಯಾಗುತ್ತೇವೆ ಎಂದು ತಿಳಿಸಿದರು.
ಹಾಜರಿದ್ದ ಗಣ್ಯರು
ಝಾರ್ಖಂಡ್ ಸಿಎಂ ಹೇಮಂತ್ ಸೊರೇನ್, ಛತ್ತೀಸ್‌ಗಢ ಸಿಎಂ ಭೂಪೇಶ್ ಬಗೇಲ್, ರಾಜಸ್ಥಾನ ಸಿಎಂ ಅಶೋಕ್ ಗೆಹೊÉàತ್, ಬಿಹಾರ ಡಿಸಿಎಂ ತೇಜಸ್ವಿ ಯಾದವ್, ಸಿಪಿಎಂ ಮುಖಂಡ ಸೀತಾರಾಂ ಯೆಚೂರಿ, ಸಿಪಿಐ ಮುಖಂಡ ಡಿ.ರಾಜಾ, ನಟ ಕಮಲಹಾಸನ್, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಲಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ, ಹಲವು ರಾಜ್ಯಗಳ ಪಿಸಿಸಿ ಅಧ್ಯಕ್ಷರು ಹಾಜರಿದ್ದರು.