Advertisement

ಅಪ್ಪ-ಮಗನನ್ನು ಗೆಲ್ಲಿಸಲಾಗದ ಎಚ್‌ಡಿಕೆ ಅನರ್ಹರನ್ನು ಸೋಲಿಸ್ತಾರಾ?: ಈಶ್ವರಪ್ಪ

09:51 AM Nov 24, 2019 | Team Udayavani |

ಅಥಣಿ:ಲೋಕಸಭಾ ಚುನಾವಣೆಯಲ್ಲಿ ಸ್ವಂತ ಅಪ್ಪ ದೇವೇಗೌಡ ಹಾಗೂ ಮಗ ನಿಖೀಲ ಕುಮಾರಸ್ವಾಮಿ ಅವರನ್ನು ಗೆಲ್ಲಿಸಲಾಗದ ಎಚ್‌.ಡಿ. ಕುಮಾರಸ್ವಾಮಿ ಅವರು ಅನರ್ಹ ಶಾಸಕರನ್ನು ಹೇಗೆ ಸೋಲಿಸುತ್ತಾರೆ ಎಂದು ಸಚಿವ ಕೆ.ಎಸ್‌. ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.

Advertisement

ಸ್ಥಳೀಯ ಜೆ.ಎ. ಪಪೂ ಮಹಾವಿದ್ಯಾಲಯದ ಆವರಣದಲ್ಲಿ ನಡೆದ ಅಥಣಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸ್ತೀನಿ ಎಂದು ಶಪಥ ಮಾಡಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ನೊಬೆಲ್‌ ಪ್ರಶಸ್ತಿ ಕೊಡಲೇಬೇಕು. ಮಾಜಿ ಸಿಎಂ ಸಿದ್ದರಾಮಯ್ಯ ಹೇಳ್ಳೋದೆಲ್ಲ ಸುಳ್ಳು. ಅವರು ಹೇಳಿದ್ದು ಯಾವತ್ತೂ ನಿಜವಾಗಿಲ್ಲ.ಈ ಉಪಚುನಾವಣೆ ಮುಗಿದ ನಂತರ ಬಿಜೆಪಿ ಸರ್ಕಾರ ಬೀಳುತ್ತೆ ಎಂದು ಹೇಳುತ್ತಿದ್ದಾರೆ. ಅಂದರೆ ನೀವೆ ಅರ್ಥ ಮಾಡಿಕೊಳ್ಳಿ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಎರಡು ಸೀಟು ಗೆಲ್ಲುತ್ತೆ ಅಂದಿದ್ದರು. ಆದರೆ ಹಾಗೆಂದವರೇ ಕೇವಲ ಎರಡು ಸೀಟು ಗೆದ್ದರು. ಅವರಪ್ಪನಾಣೆ ಕುಮಾರಸ್ವಾಮಿ ಸಿಎಂ ಆಗಲ್ಲ ಅಂದಿದ್ದರು. ಆದರೆ ಕುಮಾರಸ್ವಾಮಿ ಪಾದ ಹಿಡಿದು ಮುಖ್ಯಮಂತ್ರಿ ಮಾಡಿದವರೇ ಸಿದ್ದರಾಮಯ್ಯ ಎಂದರು.

ಸಿದ್ದಾರಾಮಯ್ಯ ಅವರಿಗೆ ಬೇಕಾದ ಅಭ್ಯರ್ಥಿಗಳನ್ನು ಉಪಚುನಾವಣೆಗೆ ನಿಲ್ಲಿಸಿರುವುದರಿಂದ ಮೂಲ ಕಾಂಗ್ರೆಸ್‌ನವರಾದ ಪರಮೇಶ್ವರ, ಮಲ್ಲಿಕಾರ್ಜುನ ಖರ್ಗೆ, ಜಮೀರ ಅಹ್ಮದ್‌, ಎಚ್‌.ಮುನಿಯಪ್ಪ, ಡಿ.ಕೆ.ಶಿವಕುಮಾರ ಸೇರಿದಂತೆ ಅನೇಕರು ಮನೆ ಬಿಟ್ಟು ಹೊರಗಡೆ ಬರುತ್ತಿಲ್ಲ. ಕೇವಲ ಸಿದ್ದರಾಮಯ್ಯ ಒಬ್ಬರೇ ಉಪಚುನಾವಣೆ ಎದುರಿಸುತ್ತಾ ಒಬ್ಬಂಟಿ ಆಗಿದ್ದಾರೆ ಎಂದರು.

ಕಾಗವಾಡ, ಅಥಣಿ ಅಭ್ಯರ್ಥಿ ಗೆಲ್ಲಿಸಿ
ವಿಧಾನಸಭೆ ಮೆಟ್ಟಿಲೇರುತ್ತೇನೆ!
ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಮಾತನಾಡಿ, ಪಕ್ಷಕ್ಕಾಗಿ ನಾನು ಯಾವ ತ್ಯಾಗಕ್ಕಾದರೂ ಸಿದ್ಧನಿದ್ದೇನೆ. ಮಹೇಶ ಕುಮಟಳ್ಳಿ ಅಭ್ಯರ್ಥಿ ಆಗಿರುವುದು ಲಕ್ಷ್ಮಣ ಸವದಿ ಒಪ್ಪಿಗೆ ಮೇರೆಗೆ ಮಾತ್ರ. ಬೇರೆ ಪಕ್ಷದಲ್ಲಿ ಸೋತರೆ ಮೂಲೆ ಗುಂಪು ಮಾಡುತ್ತಾರೆ. ಆದರೆ ಬಿಜೆಪಿಯಲ್ಲಿ ನನಗೆ ಎಲ್ಲ ಸ್ಥಾನಮಾನ ಕೊಟ್ಟು ಗೌರವಿಸಿದ್ದಾರೆ. ಸೋತವನಿಗೆ ಉಪಮುಖ್ಯಮಂತ್ರಿ ಸ್ಥಾನ ಕೊಟ್ಟಿದ್ದು ಬಿಜೆಪಿ ಹಿರಿಮೆ. ಅಥಣಿ ಶಿವಯೋಗಿಗಳ ಆಣೆ ಮಾಡಿ ಹೇಳುತ್ತೇನೆ. ಕಾಗವಾಡ ಮತ್ತು ಅಥಣಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿ ನನ್ನ ಹೆಗಲ ಮೇಲೆ ಹೊತ್ತುಕೊಂಡು ವಿಧಾನಸಭೆ ಮೆಟ್ಟಿಲೇರುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next