Advertisement

ಚರ್ಚೆಗೆ ಗ್ರಾಸವಾದ ಘನತ್ಯಾಜ್ಯ ಘಟಕ

01:21 PM Oct 28, 2022 | Team Udayavani |

ಕುಂದಗೋಳ: ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಘನತ್ಯಾಜ್ಯ ವಿಲೇವಾರಿ ಘಟಕವನ್ನು ಗುರುವಿನಹಳ್ಳಿ ಗ್ರಾಮ ಪಂಚಾಯಿತಿಯವರು ರಸ್ತೆಯನ್ನೇ ಒತ್ತುವರಿ ಮಾಡಿ ನಿರ್ಮಿಸಿದ್ದು ಎಷ್ಟರ ಮಟ್ಟಿಗೆ ಸರಿ ಎಂಬುದು ಚರ್ಚೆಗೆ ಗ್ರಾಸವಾಗಿದೆ.

Advertisement

ಗ್ರಾಪಂ ಮಟ್ಟದಲ್ಲಿ ಘನತ್ಯಾಜ್ಯ ಘಟಕಗಳನ್ನು ನಿರ್ಮಿಸಿ ಅಲ್ಲಿನ ತ್ಯಾಜ್ಯದಿಂದ ಎರೆಹುಳು ಗೊಬ್ಬರ ತಯಾರಿಸಿ ಸ್ಥಳೀಯ ರೈತರಿಗೆ ಅನುಕೂಲವಾಗಲು ಹಾಗೂ ಗ್ರಾಪಂಗೆ ಆದಾಯ ಮೂಲವಾಗಿಸಲು ಸರ್ಕಾರ ಯೋಜನೆ ರೂಪಿಸಿದೆ. ಗುರುವಿನಹಳ್ಳಿ ಗ್ರಾಮದ ಘಟಕ ನಿರ್ಮಾಣಕ್ಕಾಗಿ ನರೇಗಾ ಯೋಜನೆಯಡಿ 12 ಲಕ್ಷ ರೂ. ಅನುದಾನ ಬಿಡುಗಡೆಗೊಳಿಸಲಾಗಿದ್ದು, ಘಟಕದ ಹೊರಗಿನ ಕೆಲ ಗೋಡೆಗಳು ಸಿಮೆಂಟ್‌ ಗಿಲಾವ್‌ ಪೂರ್ಣಗೊಂಡಿಲ್ಲ. ಒಳಭಾಗದಲ್ಲಿ ಎರಡು ಶೌಚಾಲಯ ಗಳನ್ನು ನಿರ್ಮಿಸಿದ್ದು ಅವುಗಳಿಗೆ ಬಾಗಿಲು ಹಾಗೂ ನೀರಿನ ವ್ಯವಸ್ಥೆ ಇಲ್ಲವಾಗಿದೆ. ಘಟಕಕ್ಕೆ ವಿದ್ಯುತ್‌ ಸಂಪರ್ಕ ಸಹ ಇದುವರೆಗೂ ಕಲ್ಪಿಸಿಲ್ಲ. ತರಾತುರಿಯಲ್ಲಿ ಸೆ. 23ರಂದು ಘಟಕದ ಉದ್ಘಾಟನೆ ಸಹ ನೆರವೇರಿದೆ!

ಸರ್ಕಾರದ ದೃಷ್ಟಿಯಲ್ಲಿ ಈ ಘಟಕವು ಕಾರ್ಯಪ್ರವೃತ್ತಗೊಂಡಿದ್ದು, ಸ್ಥಳಕ್ಕೆ ಭೇಟಿ ನೀಡಿದಾಗ ಘಟಕವು ಸದಾ ಬಾಗಿಲು ಮುಚ್ಚಿರುವುದು ಕಂಡುಬಂತು. ಪಿಡಿಒ ಕವಿತಾ ವಿ.ಕೊಡ್ಲಿಗವಾಡ ಅವರನ್ನು ಈ ಕುರಿತು ಪ್ರಶ್ನಿಸಿದಾಗ, ಇನ್ನೂ ಸ್ವಲ್ಪ ಕೆಲಸ ಉಳಿದಿದೆ. ಗುತ್ತಿಗೆದಾರರಿಗೆ ಪೂರ್ಣಗೊಳಿಸಲು ಹೇಳಲಾಗಿದೆ. ಆರಂಭದ ಹಂತವಾಗಿ ಒಂದು ದಿನ ಊರಿನ ಒಣ ಕಸ ತಂದು ಸಂಗ್ರಹ ಮಾಡಲಾಗಿದೆ. ಮುಂದೆ ಕಾರ್ಯ ಆರಂಭಿಸುತ್ತೇವೆ ಎಂದರು.

ರಸ್ತೆ ಮಧ್ಯೆ ಏಕೆ?: ಘಟಕವನ್ನು ರಸ್ತೆ ಮಧ್ಯದಲ್ಲಿಯೇ ಏಕೆ ನಿರ್ಮಿಸಿದ್ದೀರಿ ಎಂದು ಪಿಡಿಒ ಅವರನ್ನು ಪ್ರಶ್ನಿಸಿದಾಗ, ಗ್ರಾಪಂ ವ್ಯಾಪ್ತಿಯಲ್ಲಿ ಯಾವುದೇ ನಿವೇಶನ ಲಭ್ಯ ಇಲ್ಲದಿರುವುದರಿಂದ ಸ್ಥಳೀಯ ಕಮಿಟಿಯವರು ಕಾಲುವೆ ದಂಡೆ ಹಾಗೂ ರಸ್ತೆ ಬಳಸಿಕೊಂಡು ನಿರ್ಮಿಸಲು ಠರಾವು ಪಾಸ್‌ ಮಾಡಿದ್ದಾರೆ. ಸರ್ಕಾರದ ಯೋಜನೆ ಅನುಷ್ಠಾನಗೊಳಿಸಲು ಈ ಜಾಗದಲ್ಲಿ ನಿರ್ಮಿಸಿದ್ದೇವೆ ಎಂದು ಹೇಳಿದರು.

ಬೇಲಿಯೇ ಎದ್ದು ಹೊಲ ಮೇಯ್ದಂತೆ

Advertisement

ಯಾರಾದರೂ ರಸ್ತೆ ಜಾಗ ಒತ್ತುವರಿ ಮಾಡಿಕೊಂಡರೆ ಸ್ಥಳೀಯ ಆಡಳಿತ ತೆರವುಗೊಳಿಸಿ ಜನರ ಸಂಚಾರಕ್ಕೆ ಮುಕ್ತ ಮಾಡಿಕೊಡುತ್ತದೆ. ಆದರೆ ಇಲ್ಲಿ ಸ್ಥಳೀಯ ಆಡಳಿತವೇ ಸರ್ಕಾರದ ಯೋಜನೆ ಅನುಷ್ಠಾನಗೊಳಿಸುವ ನೆಪದಲ್ಲಿ ರಸ್ತೆ ಹಾಗೂ ಹಳ್ಳದ ದಂಡೆ ಒತ್ತುವರಿ ಮಾಡಿರುವುದು ಹುಬ್ಬೇರಿಸುವಂತೆ ಮಾಡಿದೆ. ಲಕ್ಷಾಂತರ ರೂ. ಖರ್ಚು ಮಾಡಿ ಘಟಕ ಉದ್ಘಾಟನೆ ಆದರೂ ಇದುವರೆಗೂ ಇಲ್ಲಿ ಯಾವ ಚಟುವಟಿಕೆಗಳು ಕಾರ್ಯರೂಪಕ್ಕೆ ಬಾರದೆ ಇರುವುದರಿಂದ ಕಾಟಾಚಾರಕ್ಕೆ ನಿರ್ಮಿಸಿದಂತೆ ಭಾಸವಾಗುತ್ತಿದೆ.

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ

ತಾಪಂ ಇಒ ಪರಮೇಶಕುಮಾರ ವಿ. ಅವರನ್ನು ಈ ಕುರಿತು ಮಾತನಾಡಿಸಿದಾಗ, ನಾನು ಈಗ ತಾನೆ ಬಂದಿದ್ದೇನೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತೇನೆ ಎಂದು ಹೇಳಿದರು. ತಾಪಂ ಎಂಜಿನಿಯರ್‌ ಲಿಂಗರಾಜ ದಾಡಿಬಾವಿ ಅವರನ್ನು ಮಾತನಾಡಿಸಿದಾಗ, ನಾನು ಸಹ ಈಗ ಬಂದಿದ್ದೇನೆ. ಪೂರ್ಣ ಮಾಹಿತಿಯಿಲ್ಲ ಎಂದು ಜಾರಿಕೊಂಡರು.

-ಶೀತಲ ಮುರಗಿ

Advertisement

Udayavani is now on Telegram. Click here to join our channel and stay updated with the latest news.

Next