ವಾಡಿ: ಜಿಲ್ಲೆಯಲ್ಲಿಯೇ ಅತಿ ಸೂಕ್ಷ್ಮವಲಯ ಎಂದು ಗುರುತಿಸಲಾಗಿರುವ ಪಟ್ಟಣದಲ್ಲಿ ಶಾಂತಿಯುತ ಮತದಾನಕ್ಕಾಗಿ ಸಶಸ್ತ್ರ ಸೀಮಾ ಬಲ (ಎಸ್‌ಎಸ್‌ಬಿ) ಸೈನಿಕರು ಶನಿವಾರ ಸಂಜೆ ಪಟ್ಟಣದಲ್ಲಿ ಪಥಸಂಚಲನ ನಡೆಸಿದರು.
ಪೊಲೀಸ್ ಠಾಣೆಯಿಂದ ಆರಂಭಗೊಂಡ ಪಥಸಂಚಲನದಲ್ಲಿ ನೂರಾರು ಜನ ಎಸ್‌ಎಸ್‌ಬಿ ಸೈನಿಕರು ಹಾಗೂ ಸ್ಥಳೀಯ ವಿವಿಧ ಠಾಣೆಗಳ ಪೊಲೀಸ್ ಸಿಬ್ಬಂದಿ, ಪಟ್ಟಣದ ಬಸವೇಶ್ವರ ವೃತ್ತದ ಮಾರ್ಗವಾಗಿ, ಅಂಬೇಡ್ಕರ್ ವೃತ್ತ, ರೈಲು ನಿಲ್ದಾಣ, ಮೌಲಾನಾ ಅಬ್ದುಲಕಲಾಂ ಆಜಾದ್ ವೃತ್ತ, ಇಂದಿರಾ ಕಾಲೋನಿ,
ಶಿವಾಜಿ ಚೌಕ್, ಕಾಮ್ರೇಡ್ ಶ್ರೀನಿವಾಸಗುಡಿ ವೃತ್ತದ ಮುಖ್ಯ ರಸ್ತೆಗಳಲ್ಲಿ ಸಂಚರಿಸಿ ಚುನಾವಣಾ ಮತದಾನದ ಭದ್ರತೆಯ ಜಾಗೃತಿ ಮೂಡಿಸಿದರು. ಚುನಾವಣೆ ಸಂದರ್ಭದಲ್ಲಿ ಸದಾ ಗದ್ದಲ, ಗಲಾಟೆ ಹಾಗೂ ಘರ್ಷಣೆಗಳ ಮೂಲಕ ಜಿಲ್ಲೆಯ ಗಮನ ಸೆಳೆಯುತ್ತಿರುವ ಚಿತ್ತಾಪುರ ಮೀಸಲು ಮತಕ್ಷೇತ್ರ ವ್ಯಾಪ್ತಿಯ ವಾಡಿ ಪಟ್ಟಣ ಅತ್ಯಂತ ಸೂಕ್ಷ್ಮವಲಯ ಎಂದು ಈಗಾಗಲೇ ಚುನಾವಣಾಧಿಕಾರಿಗಳು ಘೋಷಣೆ ಮಾಡಿದ್ದಾರೆ.
ಪಟ್ಟಣದಲ್ಲಿನ ಒಟ್ಟು 36 ಮತದಾನ ಕೇಂದ್ರಗಳಿಗೂ ಬಿಗಿ ಬಂದೋಬಸ್ತ್ ಒದಗಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಪ್ರಮುಖ ವೃತ್ತಗಳಲ್ಲಿ ಸಿಸಿ ಕ್ಯಾಮೆರಾಗಳ ನಿಗರಾಣಿ ಇಡಲಾಗಿದೆ. ಮತಗಟ್ಟೆಗಳ ಸುತ್ತಲೂ ವಿವಿಧ ಪಕ್ಷಗಳ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಬೀಡು ಬಿಡದಂತೆ ಕಟ್ಟೆಚ್ಚರ ವಹಿಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಡಿವೈಎಸ್‌ಪಿ ಕೆ.ಬಸವರಾಜ, ಸಿಪಿಐ ಮಹಾಂತೇಶ ಪಾಟೀಲ, ವಾಡಿ ಠಾಣೆ ಪಿಎಸ್‌ಐ ವಿಜಯಕುಮಾರ ಎನ್.ಭಾವಗಿ, ಚಿತ್ತಾಪುರ ಪಿಎಸ್‌ಐ ನಟರಾಜ ಲಾಡೆ, ಶಹಾಬಾದ ಪಿಎಸ್‌ಐ ಆನಂದರಾವ, ಮಾಡಬೂಳ ಠಾಣೆಯ ಹುಸೇನ ಬಾಷಾ ಪಥಸಂಚಲನದ ನೇತೃತ್ವ ವಹಿಸಿದ್ದರು.