ಲಕ್ನೋ : ಜಮ್ಮು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕ್ ಸೈನಿಕರು ಹತ್ಯೆಗೈದು ದೇಹವನ್ನು ಛಿದ್ರ ವಿಛಿದ್ರಗೊಳಿಸಿದ ಇಬ್ಬರು ಯೋಧರ ಪೈಕಿ ಒಬ್ಬರಾಗಿರುವ ಬಿಎಸ್‌ಎಫ್ ಹೆಡ್ ಕಾನ್‌ಸ್ಟೆಬಲ್ ಪ್ರೇಮ್ ಸಾಗರ್ ಅವರ ಅಂತ್ಯ ಸಂಸ್ಕಾರವನ್ನು ಇಂದು ಬುಧವಾರ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಮಧ್ಯಪ್ರವೇಶದಿಂದ ನಡೆಯಿತು.
ಸಾಗರ್ ಅವರ ವಿರೂಪಗೊಂಡ ಮೃತ ಶರೀರವನ್ನು ಅವರ ಹುಟ್ಟೂರಾದ ಉತ್ತರ ಪ್ರದೇಶದ ದೇವರಿಯಾ ಜಿಲ್ಲೆಯಲ್ಲಿನ ಗ್ರಾಮಕ್ಕೆ ತರಲಾದ 11 ತಾಸುಗಳ ಬಳಿಕ ಇಂದು ಅಂತ್ಯಕ್ರಿಯೆ ನಡೆಸಲಾಯಿತು. 45ರ ಹರೆಯದ ಸಾಗರ್ ಅವರು ಪತ್ನಿ ಶಾಂತಿ ಅವರನ್ನು ಅಗಲಿದ್ದಾರೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಮ್ಮ ಹಳ್ಳಿಗೆ ಬರುವ ತನಕವೂ ಹತ ಪ್ರೇಮ್ ಸಾಗರ್ ಅವರ ಅಂತ್ಯಕ್ರಿಯೆಯನ್ನು ನಾವು ನಡೆಸುವುದಿಲ್ಲ ಎಂದು ಅವರ ಕುಟುಂದವರು ಹಟಕ್ಕೆ ಕುಳಿತಿದ್ದರು.
ಮುಖ್ಯಮಂತ್ರಿ ಯೋಗಿ ಅವರು ಮಧ್ಯರಾತ್ರಿ ಕಳೆದು ಸ್ವಲ್ಪ ಹೊತ್ತಿನ ಬಳಿಕ ದೇವರಿಯಾ ಜಿಲ್ಲೆಯ ಸಾಗರ್ ಅವರ ಹುಟ್ಟೂರ ಗ್ರಾಮಕ್ಕೆ ಆಗಮಿಸಿದ ಬಳಿಕ ಸಾಗರ್ ಅವರ ಅಂತ್ಯಕ್ರಿಯೆ ನಡೆಸುವುದಕ್ಕೆ ಅವರು ಮನೆಯವರು ಒಪ್ಪಿದರು.
13ನೇ ದಿನದ ಶ್ರಾದ್ಧ ಕಾರ್ಯಕ್ರಮಕ್ಕೂ ಬರುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ. ನಮ್ಮ ತಂದೆಯ ಹೆಸರಿನಲ್ಲಿ ಸ್ಮಾರಕ ನಿರ್ಮಾಣ ಹಾಗೂ ಗ್ರಾಮಕ್ಕೆ ಒಂದು ಶಾಲೆಯನ್ನೂ ನಿರ್ಮಿಸಿಕೊಡುವುದಾಗಿ ಅವರು ಭರವಸೆ ಕೊಟ್ಟಿದ್ದಾರೆ ಎಂದು ಸಾಗರ್ ಅವರ ಪುತ್ರ ಮಾಧ್ಯಮಕ್ಕೆ ತಿಳಿಸಿದರು.