Advertisement
ಹೌದು, ಇತಿಹಾಸದಲ್ಲೇ ಮೊದಲ ಬಾರಿಗೆ ಆರು ಲಕ್ಷ ಕ್ಯೂಸೆಕ್ ನೀರು ಕೃಷ್ಣೆಗೆ ಹರಿದು ಬಂದಿತ್ತು. ಇನ್ನು ಕೇವಲ 40 ಸಾವಿರ ಕ್ಯೂಸೆಕ್ ನೀರು ಹರಿಯುವ ಸಾಮರ್ಥ್ಯ ಹೊಂದಿರುವ ಮಲಪ್ರಭಾ ನದಿಗೆ ಬರೋಬ್ಬರಿ 1.17 ಲಕ್ಷ ಕ್ಯೂಸೆಕ್ ನೀರು ಹರಿದು ಬಂದಿದ್ದರೆ, ಘಟಪ್ರಭಾ ನದಿಗೆ ಆ. 7ರಂದು 2.27 ಲಕ್ಷ ಕ್ಯೂಸೆಕ್ ನೀರು ಹರಿಯಿತು. ಭಾರಿ ಪ್ರಮಾಣದಲ್ಲಿ ಬಂದ ನೀರನ್ನು ತಮ್ಮ ಒಡಲಿನಲ್ಲಿಟ್ಟುಕೊಳ್ಳದೇ ಮೂರು ನದಿಗಳು ಮನಬಂದಂತೆ ಹರಿದವು. ಹೀಗಾಗಿ ಜಿಲ್ಲೆಯ 191 ಗ್ರಾಮಗಳ ಜನರು ತತ್ತರಿಸಿ ಹೋದರು. ಸಾವಿರಾರು ಜನರು, ತಮ್ಮ ಜಾನುವಾರು ಉಳಿಸಿಕೊಳ್ಳಲೆಂದೇ ಪುನಃ ನೀರೊಳಗೆ ಹೋಗಿ ಸಂಕಷ್ಟಕ್ಕೆ ಸಿಲುಕಿದ್ದವು. ಎರಡು ದಿನಗಳ ಕಾಲ ಮರ, ಮನೆ, ದೇವಾಲಯ ಏರಿ ಪ್ರಾಣಭಿಕ್ಷೆಗಾಗಿ ಕೂಗಾಡುತ್ತಿದ್ದರು. ಇಂತಹ ದಯನೀಯ ಸ್ಥಿತಿಯಲ್ಲಿದ್ದ ನಿರಾಶ್ರಿತರ ನೆರವಿಗೆ ಧಾವಿಸಿ, ತಮ್ಮ ಪ್ರಾಣವನ್ನೂ ಒತ್ತೆ ಇಟ್ಟು ಜನರ ರಕ್ಷಣೆ ಮಾಡಲಾಯಿತು.
Related Articles
Advertisement
ಸಮರ್ಪಕ ನಿಭಾಯಿಸಿದ ಜಿಲ್ಲಾಡಳಿತ: ಇತಿಹಾಸದಲ್ಲೇ ಕಂಡರಿಯದ ಇಂತಹ ಪ್ರವಾಹದಿಂದ ಜಿಲ್ಲೆಯಲ್ಲಿ ಸಾವು- ನೋವು ಹೆಚ್ಚಾಗುತ್ತವೆ ಎಂಬ ಆತಂಕ ತೀವ್ರವಾಗಿತ್ತು. ಕೊಂಚ ನಿರ್ಲಕ್ಷ್ಯ ಅಥವಾ ಅಸಡ್ಡೆ ತೋರಿದ್ದರೆ ಕನಿಷ್ಠ 50ಕ್ಕೂ ಹೆಚ್ಚು ಜನರು ನೀರು ಪಾಲಾಗುತ್ತಾರೆ ಎಂಬ ಭಯ ಎಲ್ಲರನ್ನೂ ಕಾಡಿತ್ತು. ಆದರೆ, ಜಿಲ್ಲಾಡಳಿತ ಪರಿಸ್ಥಿತಿ ಕಂಡು (ನೀರು ಬಿಡುವುದನ್ನು ಮೊದಲೇ ಅರಿತು) ಹೆಚ್ಚಿನ ಸೇನಾ ಸಿಬ್ಬಂದಿ, ನದಿ ಪಾತ್ರದ ಗ್ರಾಮಗಳ ಜನರ ಸ್ಥಳಾಂತರ ಕಾರ್ಯ ಮಾಡಿತು. 191 ಗ್ರಾಮಗಳ 1,29,443 ಜನರ್ನು ಕೇವಲ ಮೂರು ದಿನಗಳಲ್ಲಿ ಸುರಕ್ಷಿತ ಸ್ಥಳಕ್ಕೆ, ಅದು ಪರಿಹಾರ ಕೇಂದ್ರ ಆರಂಭಿಸಿ ಆ ಕೇಂದ್ರಕ್ಕೆ ಸಾಗಿಸುವುದು ಸಣ್ಣ ಮಾತಲ್ಲ. ಆದರೆ, ಕೇಂದ್ರ- ರಾಜ್ಯದಿಂದ ಬಂದ ಎಲ್ಲ ಹಂತದ ಸಿಬ್ಬಂದಿ, ಜಿಲ್ಲೆಯ ಕಂದಾಯ, ಜಿ.ಪಂ.ಇಲಾಖೆಗಳ ಎಲ್ಲ ಅಧಿಕಾರಿ-ಸಿಬ್ಬಂದಿ ಒಂದೊಂದು ಗ್ರಾಮಗಳಿಗೆ ನಿಯೋಜನೆಗೊಂಡು ಪ್ರವಾಹ ಪರಿಸ್ಥಿತಿ ನಿಭಾಯಿಸುವಲ್ಲಿ ಕೆಲಸ ಮಾಡಿದ್ದಾರೆ.
ಹೆತ್ತವರ ಕಾಳಜಿ ತೋರಿದರು: ಸಂಕಷ್ಟದಲ್ಲಿ ಸಿಲುಕಿದವರನ್ನು ಹೊರ ತರಲು ಬಂದ ಸೈನಿಕರು, ನಮ್ಮ ಪಾಲಿಗೆ ಪುನರ್‌ಜನ್ಮ ನೀಡಿದ ದೇವರೆಂದೇ ಪಟ್ಟದಕಲ್ಲನ ನಿರಾಶ್ರಿತರು ಹೇಳುತ್ತಾರೆ. ಇಲ್ಲಿ 272 ಜನರು, ಐತಿಹಾಸಿಕ ಸ್ಮಾರಕಗಳ ಆಸರೆ ಪಡೆದು, 36 ಗಂಟೆಗಳ ಜೀವನ್ಮರಣದಲ್ಲಿದ್ದರು. ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ತಂಡದವರು ಎರಡು ಬೋಟ್‌ಗಳ ಮೂಲಕ ಹೋಗಿ, ಸಂಕಷ್ಟಕ್ಕೆ ಸಿಲುಕಿದ್ದ 272 ಜನರನ್ನೂ ಪರಿಹಾರ ಕೇಂದ್ರಕ್ಕೆ ಸಾಗಿಸಿದರು. ಇಲ್ಲಿ ಸಿಲುಕಿಕೊಂಡವರಿಗೆಲ್ಲ ನೀರು ಬರುವ ಮುನ್ಸೂಚನೆ ಕೊಟ್ಟಿದ್ದರೂ, ಅವರೆಲ್ಲ ನಿರ್ಲಕ್ಷ್ಯ ಮಾಡಿ, ನೀರು ಬಂದಾಗ ನೋಡೋಣ ಎಂದು ಹಾಗೆಯೇ ಮನೆಯಲ್ಲಿದ್ದರು. ಆದರೆ, ಮನೆಗೆ ನೀರು ಹೊಕ್ಕಾಗ, ಅನಿವಾರ್ಯವಾಗಿ ದೇವಾಲಯ ಮೇಲೇರಿದ್ದರು. ಕಾರ್ಯಾಚರಣೆ ವೇಳೆ ಯಾವುದೇ ಸಿಬ್ಬಂದಿ, ಅಧಿಕಾರಿಗಳು ಸಿಡುಕುಗೊಳ್ಳದೇ ಹೆತ್ತವರ ಪ್ರೀತಿ ತೋರಿದಂತೆ ನೆರವಿಗೆ ಬಂದಿದ್ದರು.
ಒಟ್ಟಾರೆ, ಜಿಲ್ಲೆಯಲ್ಲಿ ಆ. 2ರಿಂದ ಆರಂಭಗೊಂಡ ಪ್ರವಾಹದಲ್ಲಿ ಸಿಲುಕಿದವರ ರಕ್ಷಣಾ ಕಾರ್ಯಾಚಣೆಗೆ, ನಿರಾಶ್ರಿತರು ಮತ್ತೆ ಹುಟ್ಟಿ ಬಂದೇವು ಎಂಬ ಆನಂದದ ಕಣ್ಣೀರು ಸುರಿಸಿದರು.
ಪ್ರವಾಹದಲ್ಲಿ ಸಿಲುಕಿದವರ ರಕ್ಷಣೆಗೆ ಬಂದಿದ್ದ ಸೇನೆ ಹಾಗೂ ಎಸ್‌ಡಿಆರ್‌ಎಫ್ ಸಹಿತ ಎಲ್ಲ ರಕ್ಷಣಾ ಸಿಬ್ಬಂದಿಗೆ ತಾಲೂಕುವಾರು ವಾಸ್ತವ್ಯ, ಊಟದ ವ್ಯವಸ್ಥೆ ಮಾಡಲಾಗಿತ್ತು. ಅದಕ್ಕಾಗಿಯೇ ಸ್ಥಳೀಯ ಕೆಲ ಅಧಿಕಾರಿಗಳನ್ನು ನೇಮಕ ಮಾಡಲಾಗಿತ್ತು. ಕೇವಲ ಮೂರು ದಿನಗಳಲ್ಲಿ 1.29 ಲಕ್ಷ ಜನರನ್ನು ಜಲಾವೃತಗೊಂಡ ಗ್ರಾಮಗಳಿಂದ ಸುರಕ್ಷಿತವಾಗಿ ಹೊರಗೆ ತಂದಿದ್ದೇವೆ. ಈ ಕಾರ್ಯಕ್ಕೆ ಎಲ್ಲ ಹಂತದ ಸಿಬ್ಬಂದಿ, ಅಧಿಕಾರಿಗಳು, ಜನಪ್ರತಿನಿಧಿಗಳು ನೆರವಾಗಿದ್ದಾರೆ. ಜಿಲ್ಲಾಧಿಕಾರಿಯಾಗಿ ಅವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ.• ಆರ್. ರಾಮಚಂದ್ರನ್,ಜಿಲ್ಲಾಧಿಕಾರಿ
ಇಂತಹ ವಿಪತ್ತು ಸಂದರ್ಭದಲ್ಲಿ ಜನರ ರಕ್ಷಣೆ ಮಾಡುವುದೇ ನಮ್ಮ ಕೆಲಸ. ನಾವು ದೊಡ್ಡ ಸೇವೆಯನ್ನೇನೂ ಮಾಡಿಲ್ಲ. ಸಂಕಷ್ಟದಲ್ಲಿದ್ದ ಜನರನ್ನು ರಕ್ಷಣೆ ಮಾಡಿದ ಖುಷಿ-ಜವಾಬ್ದಾರಿ ನಿಭಾಯಿಸಿದ್ದೇವೆ. ನದಿ ಪಾತ್ರಗಳಲ್ಲಿ ವಾಸಿಸುವ ಜನರೂ ಜಾಗೃತಗೊಳ್ಳಬೇಕು. ಮಳೆಗಾಲದ ಸಂದರ್ಭದಲ್ಲಿ ಎಚ್ಚರಿಕೆ ಬದುಕು ನಡೆಸಬೇಕು.• ಹರೀಶ ಡಿ.ವಿ,ಎಸ್‌ಡಿಆರ್‌ಎಫ್‌ತಂಡದ ಪಿಎಸ್‌ಐ, ಬೆಂಗಳೂರ
•ಶ್ರೀಶೈಲ ಕೆ. ಬಿರಾದಾರ