Advertisement
ಕೃತಕ ಬುದ್ಧಿಮತ್ತೆಯೊಂದಿಗೆ ಈಗಾಗಲೇ ಹಲವು ಉತ್ಪನ್ನಗಳನ್ನು ರೂಪಿಸಿರುವ ನವೋದ್ಯಮಿ ಅಜಯ ಕಬಾಡಿ ನೇತೃತ್ವದ ಯುವ ಉತ್ಸಾಹಿ ನವೋದ್ಯಮಿ ತಂಡ ಇದೀಗ ರೈತರಿಗೆ ಪ್ರಯೋಜನಕಾರಿ, ಮೆಕ್ಕೆಜೋಳ ಬೆಳೆ ರಕ್ಷಣೆಯ ರೋಬೊಟಿಕ್ ಯಂತ್ರದ ಅಭಿವೃದ್ಧಿಯಲ್ಲಿ ಯಶಸ್ವಿ ಹೆಜ್ಜೆಗಳನ್ನಿರಿಸಿದೆ.
Related Articles
Advertisement
2018ರ ಮೇ ವೇಳೆಗೆ ಭಾರತದಲ್ಲಿ ಸೈನಿಕ ಹುಳುವಿನ ಬಾಧೆ ಬಗ್ಗೆ ವರದಿಯಾಗಿತ್ತು. ತಮಿಳುನಾಡಿನಲ್ಲಿ ದೇಶದ ಮೊದಲ ಬಾರಿಗೆ ಈ ಹುಳು ಬಾಧೆ ಕಂಡು ಬಂದಿತ್ತು. ನಂತರದ ದಿನಗಳಲ್ಲಿ ಕರ್ನಾಟಕ, ಮಹಾರಾಷ್ಟ್ರ, ಆಂಧ್ರ ಸೇರಿದಂತೆ ವಿವಿಧ ರಾಜ್ಯಗಳಿಗೆ ಹರಡಿತು. 2018ರ ಡಿಸೆಂಬರ್ ಹಾಗೂ 2019ರ ಜನವರಿಯಲ್ಲಿ ಶ್ರೀಲಂಕಾದಲ್ಲೂ ಕಾರ್ನ್ ಬೆಳೆಗೆ ಸೈನಿಕ ಹುಳುವಿನ ಬಾಧೆ ಕಾಣಿಸಿಕೊಂಡಿದೆ. ಅಲ್ಲಿನ ಕೃಷಿ ಇಲಾಖೆ ದೇಶದ ಎಲ್ಲ ಕಡೆಗೂ ಸೈನಿಕ ಹುಳಿವಿನ ಬಾಧೆ ಕುರಿತಾಗಿ ಎಚ್ಚರಿಕೆ ಸಂದೇಶ ರವಾನಿಸಿದೆ. 2019ರಲ್ಲಿಯೇ ಚೀನಾದಲ್ಲೂ ಸೈನಿಕ ಹುಳುವಿನ ಕಾಟ ಕಂಡು ಬಂದಿದ್ದು, ಅಲ್ಲಿನ ಸುಮಾರು 3.33 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ಈ ಬಾಧೆ ತಗುಲಿದೆ ಎಂದು ಹೇಳಲಾಗುತ್ತಿದೆ. ಸೈನಿಕ ಹುಳುವಿನ ಬಾಧೆ ಕೇವಲ ಮೆಕ್ಕೆಜೋಳಕ್ಕೆ ಸೀಮಿತವಾಗಿಲ್ಲ. ಭತ್ತ, ಕಬ್ಬು ಇನ್ನಿತರ ಬೆಳೆಗಳಿಗೂ ವ್ಯಾಪಿಸಿದೆ.
ಹುಡುಕಿ ಕೊಲ್ಲಲಿದೆ ರೋಬೊಟಿಕ್: ಸೈನಿಕ ಹುಳುಗಳು ಹೊಲಕ್ಕೆ ದಾಳಿ ಇರಿಸಿದವೆಂದರೆ ಸಾಕು ಇದ್ದ ಬೆಳೆ ಬಹುತೇಕ ನಾಶ ಎನ್ನುವಂತಾಗಿದೆ. ಈ ಹುಳುಗಳು ಮೆಕ್ಕೆಜೋಳದ ಎಲೆ, ಕಾಂಡ ಹಾಗೂ ತೆನೆಯನ್ನು ತಿನ್ನುತ್ತವೆ. ಸೈನಿಕ ಹುಳು ತಡೆಗೆ ರೈತರು ವಿವಿಧ ಕ್ರಿಮಿನಾಶಕ ಸಿಂಪರಣೆ ಮಾಡುತ್ತಿದ್ದಾರೆಯಾದರು, ನಿಯಂತ್ರಣ ಕಷ್ಟ ಸಾಧ್ಯವಾಗುತ್ತಿದೆ.
ವಿಶೇಷವೆಂದರೆ ಸೈನಿಕ ಹುಳುಗಳು ಕ್ರಿಮಿನಾಶಕ ಸಿಂಪರಣೆ ಮಾಡುವ ಸಂದರ್ಭದಲ್ಲಿ ಮೆಕ್ಕೆಜೋಳದ ರವದೆ(ಎಲೆ)ಕೆಳಗೆ ಇಲ್ಲವೆ ಮಣ್ಣಿನಲ್ಲಿ ಅವಿತುಕೊಳ್ಳುತ್ತದೆ. ಇದರಿಂದ ಕ್ರಿಮಿನಾಶಕ ಸಿಂಪರಣೆಯಾದರೂ ಅದರ ಮೇಲೆ ಪರಿಣಾಮ ಬೀರುವುದಿಲ್ಲ. ಸಂಜೆಯಾಗುತ್ತಿದ್ದಂತೆಯೇ ಹೊರಬಂದು ಬೆಳೆ ತಿನ್ನಲು ಆರಂಭಿಸುತ್ತದೆ.
ಸೈನಿಕ ಹುಳುಗಳ ನಿಯಂತ್ರಣ ರೈತರಿಗಷ್ಟೇ ಅಲ್ಲ, ಕ್ರಿಮಿನಾಶಕ ತಯಾರಿಕೆ ಕಂಪನಿಗಳಿಗೂ ಸವಾಲಾಗಿ ಪರಿಣಮಿಸಿದೆ. ಇದರಿಂದ ಕ್ರಿಮಿನಾಶಕ ತಯಾರಿಕೆಯಲ್ಲಿ ವಿಶ್ವಮಟ್ಟದ ಖ್ಯಾತಿ ಪಡೆದ ಕಂಪನಿಯೊಂದು ಸೈನಿಕ ಹುಳು ನಿಯಂತ್ರಣ ಪರಿಹಾರ ಕ್ರಮಕ್ಕೆ ಮುಂದಾಗಿದೆ. ಇದಕ್ಕೆ ಸ್ಪಂದಿಸಿರುವ ಹುಬ್ಬಳ್ಳಿಯ ನವೋದ್ಯಮಿಗಳಾದ ಅಜಯ ಕಬಾಡಿ, ಚೇತನ ಕುಲಕರ್ಣಿ ಹಾಗೂ ಶ್ವೇತಾ ಶೆಟ್ಟರ ಅವರನ್ನೊಳಗೊಂಡ ತಂಡ ಪರಿಹಾರ ಸಾಧನ ರೂಪಣೆಗೆ ಮಹತ್ವದ ಹೆಜ್ಜೆ ಇರಿಸಿದೆ.
ಸೈನಿಕ ಹುಳುಗಳನ್ನು ಹುಡುಕಿ ಅವುಗಳನ್ನು ನಾಶಪಡಿಸುವ ನಿಟ್ಟಿನಲ್ಲಿ ಕೃತಕ ಬುದ್ಧಿಮತ್ತೆ ಬಳಸಿಕೊಂಡು ರೋಬೊಟಿಕ್ ರೂಪಿಸಲಾಗುತ್ತಿದೆ. ಅಂತರ್ಜಾಲ ಸಂಪರ್ಕ ಇಲ್ಲದೆಯೇ ಈ ಯಂತ್ರ ಕೀಟ, ರೋಗ ಹಾಗೂ ನಂಜು ಗುರುತಿಸಲಿದೆ. ರೋಬೊಟಿಕ್‌ಗೆ ಅಳವಡಿಸುವ ಸೂಕ್ಷ್ಮ ಕ್ಯಾಮೆರಾಗಳು ಸಸ್ಯದ ಯಾವುದೇ ಭಾಗದಲ್ಲಿ ಸೈನಿಕ ಹುಳು ಅಡಗಿದ್ದರೂ ಅದನ್ನು ಗುರುತಿಸುತ್ತದೆ. ಹುಳುಗಳು ಕಂಡ ಕೂಡಲೇ ಸ್ವಯಂ ಚಾಲಿತ ನಾಜಲ್ಗಳು ಚಾಲನೆ ಪಡೆದು ಕ್ರಿಮಿನಾಶಕ ಸಿಂಪಡಣೆಯಾಗಲಿದೆ. ಸಂಜೆ ಹಾಗೂ ರಾತ್ರಿ ವೇಳೆಯೂ ಇದು ಕೆಲಸ ನಿರ್ವಹಿಸಬಹುದು.
•ಅಮರೇಗೌಡ ಗೋನವಾರ