ಚನ್ನಪಟ್ಟಣ: ಸಾಹಿತ್ಯ ಭಾವನೆಗಳನ್ನು ಬೆಸೆಯುವ ಕೆಲಸ ಮಾಡುತ್ತದೆ. ಆ ಮೂಲಕ ಸಮಾಜವನ್ನು ಕಟ್ಟುತ್ತದೆ. ಭಾವಪೂರ್ಣವಾಗಿ ಗುರುಶಿಷ್ಯ ಸಂಬಂಧ ಬೆಳೆಸಿಕೊಳ್ಳುವ ಅವಕಾಶ ಭಾಷಾ ಶಿಕ್ಷಕರಿಗೆ ಮಾತ್ರ ಇದೆ ಎಂದು ಸಾಹಿತಿ ಸಿದ್ದಲಿಂಗಯ್ಯ ಹೇಳಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗ ಕೇಂದ್ರ ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪಂಪ ಮತ್ತು ಕುಮಾರವ್ಯಾಸನ ಕಾವ್ಯಗಳ ಕುರಿತು ಒಂದು ದಿನದ ವಿಚಾರ ಸಂಕಿರಣ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಮನುಷ್ಯ ಸಂಬಂಧಗಳೇ ಶಿಥಿಲಗೊಳ್ಳುತ್ತಿರುವ ಇಂದಿನ ಸಂದರ್ಭದಲ್ಲಿ ಮಾನವೀಯ ಸಂಬಂಧಗಳಿಗೆ ಮಹತ್ವ ನೀಡಿದ ಪಂಪ ಮತ್ತು ಕುಮಾರವ್ಯಾಸರ ಕಾವ್ಯಗಳ ಅಧ್ಯಯನ ಅತ್ಯಂತ ಪ್ರಸ್ತುತ ಹಾಗೂ ಸಮರ್ಥನೀಯವಾಗಿದೆ. ಪಂಪ ಕಲಿತವರ ಕಾಮಧೇನು. ಆದರೆ, ಕುಮಾರವ್ಯಾಸ ಕಲಿಯದವರ ಕಾಮಧೇನು. ಇಬ್ಬರು ಶಿಷ್ಟ ಹಾಗೂ ಜನಪದ ಪರಂಪರೆಯ ಶ್ರೇಷ್ಠ ಪ್ರತಿನಿಧಿಗಳಾಗಿ ಮಹಾಕಾವ್ಯಗಳನ್ನು ರಚಿಸಿದ್ದಾರೆ ಎಂದು ಹೇಳಿದರು.
ನಿವೃತ್ತ ಪ್ರಾಂಶುಪಾಲ ಡಾ.ಅಶ್ವತ್ಥ ನಾರಾಯಣ ಮಾತನಾಡಿ, ಕುಮಾರವ್ಯಾಸ ದೇಸಿ ಪರಂಪರೆಯನ್ನು ಎತ್ತಿ ಹಿಡಿದ ಕವಿಯಾಗಿ, ಮನೆ ಮನಗಳನ್ನು ಬೆಳಗಿ ಚೇತನವಾಗಿ ಹೆಸರಾಗಿದ್ದಾರೆ ಎಂದು ಬಣ್ಣಿಸಿದರು. ಕೇಂದ್ರ ಸಾಹಿತ್ಯ ಅಕಾಡೆಮಿಯ ಸಲಹಾ ಸಮಿತಿ ಸದಸ್ಯರಾದ ಡಾ ಪದ್ಮಿನಿ ನಾಗರಾಜು ಮಾತನಾಡಿ, ಕುಮಾರವ್ಯಾಸನ ಸ್ತ್ರೀಪರ ಹಾಗೂ ಯುದ್ಧ ವಿರೋಧಿ ನಿಲುವುಗಳು ಅನುಕರಣೀಯವಾಗಿವೆ ಎಂದರು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ವೆಂಕಟೇಶ್ ವಹಿಸಿದ್ದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ.ಮಧುಸೂದನ್ ಜೋಶಿ ವಂದಿಸಿದರು. ಕನ್ನಡ ಪ್ರಾಧ್ಯಾಪಕಿ ಕುಸುಮಾ ಬಿ.ಎಂ. ಕಾರ್ಯಕ್ರಮವನ್ನು ನಿರೂಪಿಸಿದರು.