Advertisement

ಹಾವೇರಿಯ ರೈತ ಬೆಳೆದ ನೋಡಿ ವಿದ್ಯುತ್‌ ಬೆಳೇನ!

06:15 AM Apr 30, 2018 | |

ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಮಾಸಣಗಿ ಗ್ರಾಮದ ಹತ್ತಿ ಬೆಳೆಯುವ ರೈತ ಶ್ರೀನಿವಾಸ ಕುಲಕರ್ಣಿ ಒಂದರ್ಥದಲ್ಲಿ ಬೇಸರದಲ್ಲಿದ್ದರು. ಅವತ್ತು ಅಂದರೆ 2015ರ ಏಪ್ರಿಲ್‌ನಲ್ಲಿ ರಾಜ್ಯದಲ್ಲಿಯೇ ಸೋಲಾರ್‌ ರೂಫ್ಟಾಪ್‌ ವಿದ್ಯುತ್‌ ಉತ್ಪಾದನೆಯ ಕೃಷಿ ಆರಂಭಿಸಿದ ಮೊತ್ತಮೊದಲ ರೈತ ಎನ್ನಿಸಿಕೊಂಡಿದ್ದರೂ ಕರ್ನಾಟಕ ಸರ್ಕಾರ ಇತ್ತೀಚಿಗೆ ಘೋಸಿದ್ದ ಸೋಲಾರ್‌ ವಿದ್ಯುತ್‌ ಉತ್ಪಾದಕರ ಪ್ರೋತ್ಸಾಹ ಪ್ರಶಸ್ತಿಗೆ ಭಾಜನರಾಗಿರಲಿಲ್ಲ. ಹೆಸ್ಕಾಂನಲ್ಲಂತೂ ಇಂತಹ ಯೋಜನೆಯನ್ನು ಅಳವಡಿಸಿಕೊಂಡ ಪ್ರಪ್ರಥಮ ಗ್ರಾಹಕ. ಅವತ್ತು ಅವರ ಮನೆಯಲ್ಲಿ ಸೂರ್ಯಶಕ್ತಿಯ ವಿದ್ಯುತ್‌ ಉತ್ಪಾದನೆಯ ಘಟಕದ ಉದ್ಘಾಟನೆಯ ದಿನ ಹಾವೇರಿಯ ಹೆಸ್ಕಾಂನ ಎಲ್ಲ ಹಿರಿಕಿರಿಯ ಅಧಿಕಾರಿಗಳು ಹಾಜರಿದ್ದರು ಎಂಬುದನ್ನು ಹೇಳುವಾಗ ಪ್ರಶಸ್ತಿ ವಂಚಿತ ದುಃಖ ಮಾಯವಾಗಿ ಮತ್ತೂಮ್ಮೆ ಹೆಮ್ಮೆ ಇಣುಕಿತ್ತು.

Advertisement

ವಿದ್ಯುತ್‌ ಸ್ವಾವಲಂಬನೆಗೆ ರೈತ ಬಲ ನಿಜ, ಓರ್ವ ರೈತ ವಿದ್ಯುತ್‌ ಕೃಷಿ ಮಾಡಿ ಯಶಸ್ವಿಯಾಗಿರುವುದು ಸಾಮಾನ್ಯದ ಮಾತಲ್ಲ. ಬ್ಯಾಡಗಿಯಿಂದ ಆರು ಕಿಮೀ ದೂರದ ಹಾಸಣಗಿಯ ಶ್ರೀನಿವಾಸ್‌ರದ್ದು 32 ಎಕರೆ ಹೊಲ. ಮುಖ್ಯ ಬೆಳೆ ಹತ್ತಿ. ಊರಿನಲ್ಲಿ ಅವತ್ತು ಸುಮಾರು 4 ಲಕ್ಷ ರೂ. ಖರ್ಚು ಮಾಡಿ ಸೋಲಾರ್‌ ವಿದ್ಯುತ್‌ ಘಟಕ ಹಾಕಿಸಿಕೊಂಡ ನಂತರದಲ್ಲಿ ತೀರಾ ಸಮಸ್ಯೆ ಎಂಬುದು ಕಾಡಿಲ್ಲ. ಊರಿನಲ್ಲಿ ಹಾದುಹೋಗಿರುವ ನಿರಂತರ ವಿದ್ಯುತ್‌ ಸರಬರಾಜು ಲೈನ್‌ ತಲೆಭಾರವನ್ನು ಕಡಿಮೆ ಮಾಡಿದೆ. ಪವರ್‌ಕಟ್‌ ಕಾರಣದಿಂದ ಉತ್ಪಾದನೆಯಾಗುವ ಒಂದೇ ಒಂದು ಯೂನಿಟ್‌ ಕೂಡ ನಷ್ಟವಾಗಿಲ್ಲ ಎಂದು ಅವರು ಖುಷಿಯಿಂದ ಹೇಳುತ್ತಾರೆ. ಇಂತದೊಂದು ವ್ಯವಸ್ಥೆಯನ್ನು ಪ್ರತಿ ಗ್ರಾಮಗಳಲ್ಲೂ ಹಂಚಿಕೆ ಕಂಪನಿಗಳು ರೂಪಿಸಿಕೊಂಡರೆ ಮಾತ್ರ ವಿದ್ಯುತ್‌ ಸ್ವಾವಲಂಬನೆ.

ರಾಜ್ಯ ಸರ್ಕಾರದ ಪ್ರಾಯೋಜನೆಯಲ್ಲಿ ಚೀನಾಕ್ಕೆ ಕೃಷಿ ಪ್ರವಾಸ ಹೋಗಿದ್ದಾಗ ಕಾಣಿಸಿದ ಸೋಲಾರ್‌ ಪಾರ್ಕ್‌ “ನಮ್ಮಲ್ಲೂ ಒಂದು ಕೈ ನೋಡುವ’ ಅಭಿಲಾಷೆ ತಂದಿದ್ದು ನಿಜ. ಎಲೆಕ್ಟ್ರಿಕಲ್‌ ಡಿಪ್ಲೊಮೊ ಎಂಜಿನಿಯರಿಂಗ್‌ ಮಾಡಿದ ಹಿನ್ನೆಲೆ, ಕೆಲ ಕಾಲ ವಿದ್ಯುತ್‌ ಗುತ್ತಿಗೆದಾರರಾಗಿದ್ದ ಅನುಭವ, ಗ್ರಾಮ ವಿದ್ಯುತ್‌ ಪ್ರತಿನಿಧಿಯಾಗಿ ಕಾರ್ಯ ನಿರ್ವಸಿದ ಹೆಜ್ಜೆ ಕುಲಕರ್ಣಿಯವರಿಗೆ ಮಾರ್ಗದರ್ಶಕವಾಗಿತ್ತು. ಇದಕ್ಕೆ ಪೂರಕವಾಗಿ ದೊಡ್ಡ ಅಕ್ಕನ ಮಗ ಸೋಲಾರ್‌ ಪ್ಯಾನೆಲ್‌ ಕ್ಷೇತ್ರದಲ್ಲಿಯೇ ತೊಡಗಿಸಿಕೊಂಡಿರುವುದು ಆ ಕಾಲದಲ್ಲಿ ಸ್ಪರ್ಧಾತ್ಮಕ ದರದಲ್ಲಿ ಪ್ಯಾನೆಲ್‌ ಖರೀದಿಸಿ ಅಳವಡಿಕೆಗೆ ತಳಪಾಯವಾಗಿತ್ತು!

ಯಾವ ದರ ಲಾಭಕರ?
ಲೆಕ್ಕಾಚಾರಕ್ಕಿಳಿಯೋಣ, ಶ್ರೀನಿವಾಸ್‌ರ ಸ್ಥಾವರದಲ್ಲಿ ದಿನವೊಂದಕ್ಕೆ ಪರಮಾವಧಿ ಎನ್ನಬಹುದಾದ 28 ಯೂನಿಟ್‌ ಪಡೆದ ದಾಖಲೆ ಇದೆ. ಮೋಡ ಮುಸುಕಿದ ಸಂದರ್ಭದಲ್ಲಿ 18ಕ್ಕೆ ಇಳಿದೀತು. ಮನೆ ಖರ್ಚಿಗೆ ಪ್ರತಿದಿನಕ್ಕೆ ಒಂದು ಯೂನಿಟ್‌ ಸಾಕು. ಹೆಸ್ಕಾಂ ಜೊತೆಗಿನ ಒಪ್ಪಂದದಂತೆ ಯೂನಿಟ್‌ ಒಂದಕ್ಕೆ 9.56 ರೂ. ದಿನವೊಂದಕ್ಕೆ ಸರಾಸರಿ 20 ಯೂನಿಟ್‌ಗಳನ್ನು ಮಾರಾಟ ಮಾಡಿದರೂ ಸುಮಾರು 200 ರೂ. ಆದಾಯ. ಅದೇ ನಾಲ್ಕು ಲಕ್ಷವನ್ನು ಶೇ. 9ರಂತೆ ಬ್ಯಾಂಕ್‌ನಲ್ಲಿ ಇರಿಸಿದ್ದರೆ ವಾರ್ಷಿಕ 36,000 ರೂ. ಚಕ್ರಬಡ್ಡಿ ಕೂಡ ಸೇರಿಸಿದರೂ ಹೆಚ್ಚೆಂದರೆ 37,522 ರೂ. ವಿದ್ಯುತ್‌ ಮಾರಾಟದಿಂದ ಬರಬಹುದಾದ ಮೊತ್ತ ತಿಂಗಳಿಗೆ 6 ಸಾವಿರ ರೂ. ನಂತೆ ಹೆಚ್ಚು ಕಡಿಮೆ 72 ಸಾವಿರ. ಈ ಮೊತ್ತಕ್ಕೆ ಮನೆ ಬಳಕೆ ವಿದ್ಯುತ್‌ನಲ್ಲಾದ ಉಳಿತಾಯವನ್ನೂ ಸೇರಿಸಬೇಕು ಮತ್ತೂ ಮೂರು ಸಾವಿರ ರೂ. ಆದಾಯಕ್ಕೆ ಸೇರ್ಪಡೆಯಾದಂತಾಗುತ್ತದೆ.

ಆರಂಭಿಕ ದಿನಗಳ ಒಪ್ಪಂದದಿಂದಾಗಿ ಈ ಮೊತ್ತ ಸಿಗುತ್ತದೆ ಎಂಬ ವಾದ ಕೇಳೀತು. ಹಾಗಿದ್ದರೆ ಯಾವ ಬಡ್ಡಿದರದಲ್ಲಿ ವಿದ್ಯುತ್‌ ಮಾರಾಟ ಮಾಡಿದರೂ ಬ್ಯಾಂಕ್‌ನಿಂದ ಸಿಗುವ ಬಡ್ಡಿದರಕ್ಕಿಂತ ಹೆಚ್ಚು ಸಿಕ್ಕಂತಾಗುತ್ತದೆ ಎಂಬ ಪ್ರಶ್ನೆ ಮೂಡಬಹುದು. ಲೆಕ್ಕ ಸುಲಭ, ಯೂನಿಟ್‌ ಬೆಲೆ ಅರ್ಧಕ್ಕರ್ಧ ಇಳಿದರೂ 36 ಸಾವಿರ ರೂ. ಆದಾಯ ಲಭ್ಯ. ವಿದ್ಯುತ್‌ ಬಳಕೆಯ ಮನೆ ಬಿಲ್ಲನ್ನೂ ಪರಿಗಣಿಸುವುದಾದರೆ 5 ರೂ.ಗಳನ್ನಷ್ಟೇ ಪ್ರತಿ ಯೂನಿಟ್‌ ದರ ಇರಿಸಿದರೂ ಈಗಿನ ಜನ ರೂಫ್ಟಾಪ್‌ನಲ್ಲಿಯೇ ಲಾಭದಾಯಕವಾಗಿ ಬಂಡವಾಳ ತೊಡಗಿಸಬಹುದು! ಇಂದಿನ ರೂಫ್ಟಾಪ್‌ ಯೂನಿಟ್‌ ದರ 7.08 ರೂ.

Advertisement

ಸರ್ಕಾರ ಸಹಕಾರಿಯಾದರೆ?
ಹೆಸ್ಕಾಂ ವ್ಯಾಪ್ತಿಯಲ್ಲಿ ಸುಮಾರು 35 ಸೋಲಾರ್‌ ರೂಫ್ಟಾಪ್‌ ಶ್ರೀನಿವಾಸ್‌ ಸಾಧನೆಯನ್ನು ಗಮನಿಸಿದ ನಂತರ ಚಾಲೂ ಆಗಿವೆ. ಆದರೆ ಇವುಗಳಲ್ಲಿ ಒಂದೂ ರೈತರದಿಲ್ಲ.  ಶ್ರೀನಿವಾಸ್‌ ಇನ್ನೊಂದು ಅಂಶದತ್ತ ಗಮನ ಸೆಳೆಯುತ್ತಾರೆ. ಅವರು 5 ಕಿ.ವ್ಯಾ ಸಾಮರ್ಥ್ಯದ ಸ್ಥಾವರ ಹಾಕುವಾಗ ನಾಲ್ಕು ಲಕ್ಷ ಖರ್ಚಾದರೆ ಈಗ ಮೂರು ಲಕ್ಷ ರೂ. ಅಷ್ಟೇ ಸಾಕಾಗುತ್ತದೆ. ಹಾಗಾಗಿ ಯೂನಿಟ್‌ ಬೆಲೆ ಇನ್ನಷ್ಟು ಕಡಿಮೆ ಬೆಲೆ ಇದ್ದರೂ ಸಮಸ್ಯೆಇಲ್ಲ. ಅವರ ಭಾಗದಲ್ಲಿ ರೈತ ಲಾಭ ಕಾಣಬೇಕೆನ್ನುವ ಕಾರಣಕ್ಕಾಗಿಯಷ್ಟೇ ಜನ ಬಿಟಿ ಹತ್ತಿಯನ್ನು ಬೆಳೆದರು. ಅವರಿಗೂ ಇದು ಮಣ್ಣಿಗೆ, ವಾತಾವರಣಕ್ಕೆ ಸಮಸ್ಯೆ ಎನ್ನುವುದು ಗೊತ್ತಿದೆ. ರೊಕ್ಕ ಎಂಬುದು ಬದುಕು ಸಾಗಿಸಲು ಅನಿವಾರ್ಯ ಎನ್ನುವಾಗ ಸರ್ಕಾರ ಸಾವಯವ ಮಾದರಿಯಲ್ಲಿ ಕಡಿಮೆ ಇಳುವರಿ ಬರುವ ಬೆಳೆಗೆ ಬೆಂಬಲ ಬೆಲೆ ಸೇರಿಸಿ ಕೊಡಬಹುದಲ್ಲವೇ? ರೂಫ್ಟಾಪ್‌ ಸೋಲಾರ್‌ ಅಳವಡಿಕೆಗೆ ದೊಡ್ಡ ಮಟ್ಟದ ಪ್ರೋತ್ಸಾಹ ನೀಡಿ ರೈತರಿಗೆ ಹೊಸ ಹೊಸ ಆದಾಯ ಮೂಲಗಳನ್ನು ಹುಡುಕಿಕೊಡಬಹುದಲ್ಲವೇ?

ಮಾಹಿತಿಗೆ 9731698385

– ಗುರು ಸಾಗರ

Advertisement

Udayavani is now on Telegram. Click here to join our channel and stay updated with the latest news.

Next