Advertisement
ವಿದ್ಯುತ್ ಮೇಲಿನ ಅವಲಂಬನೆ ತಗ್ಗಬೇಕು, ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ಸೌರಶಕ್ತಿ ವಿದ್ಯುತ್ ಬಳಕೆ ಹೆಚ್ಚಬೇಕು ಎಂಬ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಆರಂಭಿಕವಾಗಿ ಸರಕಾರಿ ಹಾಗೂ ಪಾಲಿಕೆ ಒಡೆತನದ ಆರ್‌ಸಿಸಿ ಕಟ್ಟಡಗಳ ಮೇಲೆ ಸೌರಶಕ್ತಿ ವಿದ್ಯುತ್ ವ್ಯವಸ್ಥೆ ಅಳವಡಿಕೆಗೆ ಮುಂದಾಗಿದೆ. ಅಲ್ಲದೆ ಸರಕಾರಿ ಕಟ್ಟಡಗಳಲ್ಲಿ ಮಳೆ ನೀರು ಕೊಯ್ಲು ವ್ಯವಸ್ಥೆ ಅಳವಡಿಕೆ ಕಾರ್ಯ ಕೈಗೊಳ್ಳಲಾಗುತ್ತಿದೆ.
Related Articles
Advertisement
ರೂಫ್ ಟಾಪ್ ಸೋಲಾರ್ ಯೋಜನೆ ಕುರಿತಾಗಿ ಸ್ಮಾರ್ಟ್ ಸಿಟಿ ಯೋಜನೆ ಅನುಷ್ಠಾನದ ಸಲಹಾ ಏಜೆನ್ಸಿ ಪ್ರೈಸ್‌ವಾಟರ್ ಹೌಸ್‌ಕೂಪರ್ ಸಂಸ್ಥೆಯ ತಜ್ಞರು ಈಗಾಗಲೇ ಯೋಜನೆಯ ವಿಸ್ತೃತ ಯೋಜನಾ ವರದಿ(ಡಿಪಿಆರ್)ಸಿದ್ಧತೆಯಲ್ಲಿ ತೊಡಗಿದ್ದು, ಆಗಸ್ಟ್ 1ರೊಳಗೆ ಡಿಪಿಆರ್ ಸಿದ್ಧಗೊಳಿಸಲು ಯೋಜಿಸಲಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಸೋಲಾರ್ ಹಾಗೂ ರೂಫ್ ಟಾಪ್ ವಿದ್ಯುತ್ ಯೋಜನೆಗಾಗಿ ಸುಮಾರು 128.76 ಕೋಟಿ ರೂ. ಅನುದಾನ ನಿಗದಿಪಡಿಸಲಾಗಿದೆ.
ಬಳಕೆ ಹೇಗೆ?: ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಸುಮಾರು 100-135 ಸರಕಾರಿ ಹಾಗೂ ಅರೆ ಸರಕಾರಿ ಕಚೇರಿ-ಆಸ್ತಿಗಳ ಕಟ್ಟಡ ಮೇಲೆ ಸೌರಶಕ್ತಿ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪನೆ ಅನಂತರದಲ್ಲಿ ಉತ್ಪಾದನೆಯಾಗುವ ವಿದ್ಯುತ್ ಅನ್ನು ಆಯಾ ಕಚೇರಿಗಳು ಬಳಕೆ ಮಾಡಿಕೊಳ್ಳಬಹುದಾಗಿದೆ.
ಉತ್ಪಾದಿತ ಕಟ್ಟಡಗಳಲ್ಲಿ ಬಳಕೆ ಅನಂತರವೂ ಹೆಚ್ಚುವರಿಯಾಗಿ ಉಳಿಯುವ ಸೌರ ವಿದ್ಯುತ್‌ನ್ನು ಗ್ರಿಡ್‌ಗೆ ನೀಡುವ ಕುರಿತಾಗಿ ಹೆಸ್ಕಾಂನೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗುತ್ತದೆ. ಈ ವಿದ್ಯುತ್ ಮಾರಾಟದಿಂದ ಬರುವ ಹಣ ಸ್ಮಾರ್ಟ್ ಸಿಟಿಯ ವಿಶೇಷ ಉದ್ದೇಶದ ವಾಹನ(ಎಸ್‌ಪಿವಿ) ಖಾತೆಗೆ ಜಮಾ ಆಗಲಿದೆ.
ಸುಮಾರು 100-135 ಸರಕಾರಿ ಹಾಗೂ ಅರೆ ಸರಕಾರಿ ಕಚೇರಿ- ಆಸ್ತಿಗಳ ಕಟ್ಟಡಗಳ ಮೇಲೆ ಸೌರ ವಿದ್ಯುತ್ ಶಕ್ತಿ ಅಳವಡಿಕೆ ಜಾರಿಗೊಂಡರೆ ಈ ಎಲ್ಲ ಕಚೇರಿಗಳಲ್ಲಿ ವಿದ್ಯುತ್ ಮೇಲಿನ ಅವಲಂಬನೆ ಗಣನೀಯವಾಗಿ ಕಡಿಮೆ ಆಗಲಿದೆ. ಒಂದು ಕಡೆ ಕಚೇರಿಗಳು ಪ್ರತಿ ತಿಂಗಳು ಪಾವತಿಸಬೇಕಾದ ಸಾವಿರಾರು ರೂ.ಗಳ ವಿದ್ಯುತ್ ಶುಲ್ಕ ಉಳಿತಾಯವಾಗಲಿದೆ. ಈ ಕಚೇರಿಗಳಿಂದ ಉಳಿತಾಯ ರೂಪದಲ್ಲಿ ಸಿಗುವ ಹಾಗೂ ಹೆಚ್ಚುವರಿ ಸೌರಶಕ್ತಿ ವಿದ್ಯುತ್ ಅನ್ನು ಹೆಸ್ಕಾಂ ಇತರೆ ಬಳಕೆಗೆ ನೀಡಬಹುದಾಗಿದೆ.
ಮಳೆ ನೀರು ಕೊಯ್ಲು ಯೋಜನೆ: ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಸೌರಶಕ್ತಿ ವಿದ್ಯುತ್ ಉತ್ಪಾದನೆ ಜತೆಗೆ ಮಳೆ ನೀರು ಕೊಯ್ಲು ಯೋಜನೆಗೂ ಆದ್ಯತೆ ನೀಡಲಾಗಿದೆ. ಮಳೆ ನೀರು ಪೋಲಾಗಿ ಹಳ್ಳ-ಕೊಳ್ಳ, ನದಿಗಳ ಮೂಲಕ ಸಮುದ್ರ ಸೇರುತ್ತಿದೆ. ಜತೆಗೆ ಮಳೆಗಾಲದಲ್ಲಿ ನಗರಗಳಲ್ಲಿ ಈ ನೀರು ಹಲವು ಸಮಸ್ಯೆಗಳನ್ನು ಕೆಲವೊಮ್ಮೆ ಸಣ್ಣ-ಪುಟ್ಟ ಅನಾಹುತಗಳನ್ನು ಸೃಷ್ಟಿಸುತ್ತಿದೆ.
ಮತ್ತೂಂದು ಕಡೆ ನೀರಿನ ಕೊರತೆ ಹೆಚ್ಚುತ್ತ ಸಾಗುತ್ತಿದ್ದು, ಚಳಿಗಾಲದಲ್ಲಿಯೇ ನಗರ-ಹಳ್ಳಿಗಳೆನ್ನದೆ ಅನೇಕ ಕಡೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಸ್ಥಿತಿ ಹೆಚ್ಚುತ್ತ ಸಾಗುತ್ತಿದೆ. ನೀರು ಸಂರಕ್ಷಣೆ, ಮಿತ ಹಾಗೂ ಸದ್ಬಳಕೆ ಜಾಗೃತಿ ನಿಟ್ಟಿನಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಮಳೆನೀರು ಕೊಯ್ಲು ಅಳವಡಿಕೆಗೆ ಮುಂದಾಗಿದೆ.
ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಮಳೆ ನೀರು ಕೊಯ್ಲು, ಸಾರ್ವಜನಿಕ ಶೌಚಾಲಯ ಇತರೆ ಯೋಜನೆಗಳಿಗೆ ಸುಮಾರು 193.85 ಕೋಟಿ ರೂ. ಅನುದಾನ ನಿಗದಿಪಡಿಸಲಾಗಿದೆ. ಮಳೆ ನೀರು ಕೊಯ್ಲು ಕುರಿತಾಗಿ ಅಕ್ಟೋಬರ್ 1ರೊಳಗೆ ವಿಸ್ತೃತ ಯೋಜನಾ ವರದಿ(ಡಿಪಿಆರ್)ಸಿದ್ಧಗೊಳ್ಳಲಿದೆ.
ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಉದ್ದೇಶಿತ ಸೌರಶಕ್ತಿ ಹಾಗೂ ಮಳೆನೀರು ಕೊಯ್ಲು ವ್ಯವಸ್ಥೆ ಅಳವಡಿಕೆ ಸಮರ್ಪಕವಾಗಿ ಜಾರಿಗೊಂಡಿದ್ದೇ ಆದಲ್ಲಿ ವಿವಿಧ ಸರಕಾರಿ ಹಾಗೂ ಅರೆ ಸರಕಾರಿ ಕಚೇರಿಗಳಲ್ಲಿ ವಿದ್ಯುತ್, ನೀರಿಗಾಗಿ ಹೆಸ್ಕಾಂ ಹಾಗೂ ಜಲಮಂಡಳಿ ಮೇಲಿನ ಅವಲಂಬನೆ ಗಣನೀಯವಾಗಿ ಕಡಿಮೆಯಾಗಲಿದೆ, ಅಷ್ಟೇ ಅಲ್ಲ ಈ ವ್ಯವಸ್ಥೆ ಸಾರ್ವಜನಿಕರಿಗೂ ಮಾದರಿ ಆಗಲಿದೆ.
* ಅಮರೇಗೌಡ ಗೋನವಾರ