Advertisement

ನೈಋತ್ಯ ರೈಲ್ವೆ ವಲಯಕ್ಕೆ ಸೂರ್ಯ ಶಕ್ತಿಯೇ ಸೋಪಾನ!

10:02 AM May 09, 2022 | Team Udayavani |

ಹುಬ್ಬಳ್ಳಿ: ರೈಲುಗಳು ವಿದ್ಯುತೀಕರಣಕ್ಕೆ ಹೆಚ್ಚು ಆದ್ಯತೆ ನೀಡುವ ಜೊತೆಗೆ ಅಗತ್ಯ ಸ್ಥಳಗಳಲ್ಲಿ ವಿದ್ಯುತ್‌ ಬದಲಾಗಿ ಸೌರಶಕ್ತಿ ಬಳಕೆಗೆ ನೈಋತ್ಯ ರೈಲ್ವೆ ಮುಂದಾಗಿದೆ. ಗರಿಷ್ಠ ಪ್ರಮಾಣದಲ್ಲಿ ಸೌರಶಕ್ತಿ ಬಳಸಿಕೊಳ್ಳಲು ಯೋಜನೆ ರೂಪಿಸಿದ್ದು, ವಲಯದಾದ್ಯಂತ ನಿಲ್ದಾಣಗಳು, ಸೇವಾ ಕಟ್ಟಡಗಳು, ಲೆವಲ್‌ ಕ್ರಾಸಿಂಗ್‌ ಗೇಟ್‌ ಗಳು ಮತ್ತಿತರ ಕಡೆಗಳಲ್ಲಿ ಸೌರಫಲಕಗಳನ್ನು ಅಳವಡಿಸುತ್ತಿದೆ. ವಿದ್ಯುತ್‌ ಮೇಲಿನ ಅವಲಂಬನೆ ಕಡಿಮೆಗೊಳಿಸಿ, ಉಳಿತಾಯಕ್ಕೆ ಮುಂದಾಗಿದೆ.

Advertisement

ಕಳೆದ ಆರ್ಥಿಕ ವರ್ಷದಲ್ಲಿ ಸೌರಶಕ್ತಿಯ ಮೂಲಕ ಒಟ್ಟಾರೆ 46.11 ಲಕ್ಷ ಯುನಿಟ್‌ ವಿದ್ಯುತ್‌ ಉತ್ಪಾದನೆಯಾಗಿದ್ದು, ವಿದ್ಯುತ್‌ ಬಿಲ್‌ನಲ್ಲಿ 1.96 ಕೋಟಿ ರೂ. ಉಳಿತಾಯವಾಗಿದೆ. 2021-22ನೇ ಆರ್ಥಿಕ ವರ್ಷದಲ್ಲಿ ಹುಬ್ಬಳ್ಳಿ ನಿಲ್ದಾಣದ ಒಟ್ಟಾರೆ ವಿದ್ಯುತ್‌ ಅಗತ್ಯತೆಯ ಸುಮಾರು ಶೇ.70 ಸೌರಶಕ್ತಿಯಿಂದಲೇ ಪೂರೈಕೆಯಾಗಿದೆ. ಹುಬ್ಬಳ್ಳಿ ವರ್ಕ್‌ ಶಾಪ್‌ನ ಶೇ. 83 ವಿದ್ಯುತ್‌ ಅಗತ್ಯವನ್ನು (ಒಟ್ಟು ವಿದ್ಯುತ್‌ ಅಗತ್ಯ 13.51 ಲಕ್ಷ ಯುನಿಟ್‌) ಸೌರಶಕ್ತಿಯ ಮೂಲಕ ಪೂರೈಸಲಾಗಿದೆ. ಹುಬ್ಬಳ್ಳಿ ಇಎಂಡಿ ಶೆಡ್‌ ನ ವಾರ್ಷಿಕ 1.13 ಲಕ್ಷ ಯುನಿಟ್‌ಗಳ ವಿದ್ಯುತ್‌ ಬಳಕೆಯ ಪೈಕಿ ಶೇ. 60 ವಿದ್ಯುತ್ತನ್ನು ಸೌರಶಕ್ತಿ ಮೂಲಕ ಪಡೆದುಕೊಳ್ಳಲಾಗಿದೆ.

ಪ್ರಸಕ್ತ ಆರ್ಥಿಕ ವರ್ಷದಲ್ಲಿ ವಲಯ ವ್ಯಾಪ್ತಿಯ ಇನ್ನೂ 26 ನಿಲ್ದಾಣಗಳಲ್ಲಿ ಸೌರಫಲಕಗಳನ್ನು ಅಳವಡಿಸುವ ಯೋಜನೆ ಹೊಂದಲಾಗಿದೆ. ವಲಯವು ಪರಿಸರಸ್ನೇಹಿ ಸೌರಶಕ್ತಿ ಬಳಸಿಕೊಳ್ಳುತ್ತಿದ್ದು, 2030 ರೊಳಗೆ ನಿವ್ವಳ ಶೂನ್ಯ ಇಂಗಾಲ ಹೊರಸೂಸುವ ರೈಲ್ವೆಯಾಗಿ ಹೊರಹೊಮ್ಮುವ ರೈಲ್ವೆಯ ಗುರಿಗೆ ಇದು ಸಹಕಾರಿಯಾಗಲಿದೆ. –ಸಂಜೀವ ಕಿಶೋರ, ನೈಋತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ

ನಿಲ್ದಾಣಗಳ ಉಳಿತಾಯ ಬರೋಬ್ಬರಿ 21.42 ಲಕ್ಷ !

2021-22ನೇ ಆರ್ಥಿಕ ವರ್ಷದಲ್ಲಿ ಹುಬ್ಬಳ್ಳಿ ರೈಲ್ವೆ ನಿಲ್ದಾಣದ ಸೌರಫಲಕಗಳಿಂದ 3.38 ಲಕ್ಷ ಯುನಿಟ್‌ ವಿದ್ಯುತ್‌ ಉತ್ಪಾದನೆಯಾಗಿದೆ. ಯಶವಂತಪುರ ರೈಲು ನಿಲ್ದಾಣದ 80 ಕೆಡಬ್ಲ್ಯುಪಿ ಸೌರ ಫಲಕಗಳಿಂದ 0.95 ಲಕ್ಷ ಯುನಿಟ್‌, ಮೈಸೂರು ರೈಲ್ವೆ ನಿಲ್ದಾಣದ 110 ಕೆಡಬ್ಲ್ಯುಪಿ ಸೌರಫಲಕಗಳಿಂದ 1.42 ಲಕ್ಷ ಯುನಿಟ್‌ ವಿದ್ಯುತ್‌ ಉತ್ಪಾದನೆಯಾಗಿದೆ. ಈ ಎಲ್ಲ ನಿಲ್ದಾಣಗಳಿಂದ ಒಟ್ಟಾರೆ 21.42 ಲಕ್ಷ ರೂ. ಉಳಿತಾಯವಾಗಿದೆ.

Advertisement

ಯಾರ್ಯಾರ ನೇತೃತ್ವ? ಪ್ರಧಾನ ಮುಖ್ಯ ವಿದ್ಯುತ್‌ ಎಂಜಿನಿಯರ್‌ ಜೈಪಾಲ ಸಿಂಗ್‌ ನೇತೃತ್ವದಲ್ಲಿ ಹುಬ್ಬಳ್ಳಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅರವಿಂದ ಮಾಲಖೇಡೆ, ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಶ್ಯಾಮ್‌ ಸಿಂಗ್‌ ಮತ್ತು ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ರಾಹುಲ್‌ ಅಗರ್ವಾಲರ ಮಾರ್ಗದರ್ಶನದಲ್ಲಿ ಮೂರು ರೈಲ್ವೆ ವಿಭಾಗಗಳಲ್ಲಿ ಸೌರಶಕ್ತಿ ಬಳಕೆಯ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next