Advertisement
2012-13ರಲ್ಲಿ ಸಮಗ್ರ ಗ್ರಾಮೀಣ ಇಂಧನ ಶಕ್ತಿ ಕಾರ್ಯಕ್ರಮದಡಿ ರೂ. 13.57 ಲಕ್ಷ ಅನುದಾನದಲ್ಲಿ ಎಲ್.ಇ.ಡಿ. ಮಾದರಿಯಲ್ಲಿ ಸೌರಶಕ್ತಿ ಬೀದಿ ದೀಪಗಳನ್ನು ಅಳವಡಿಸಲಾಗಿತ್ತು. ಬೆಂಗಳೂರಿನ ಕಂಪೆನಿಯೊಂದಕ್ಕೆ ಅದರ ನಿರ್ವಹಣೆಯ ಜವಾಬ್ದಾರಿಯನ್ನು ನೀಡಲಾಗಿತ್ತು. ಗ್ರಾ.ಪಂ. ನ ಸನಿಹದಲ್ಲೇ ಸೋಲಾರ್ ಯಂತ್ರದ ಘಟಕ ಸಮೇತ ಎಲ್.ಇ.ಡಿ. ಮಾದರಿಯ ಸುಮಾರು 65 ಬೀದಿ ದೀಪಗಳನ್ನು 2012 ರ ಸಾಲಿನಲ್ಲಿ ಅಳವಡಿಸಲಾಗಿತ್ತು. ಅಂದಿನ ಇಂಧನ ಸಚಿವ ಕೆ.ಎಸ್. ಈಶ್ವರಪ್ಪ ಅವರು ಈ ವ್ಯವಸ್ಥೆಯನ್ನು ಉದ್ಘಾಟಿಸಿದ್ದರು. ಇಷ್ಟೆಲ್ಲಾ ಖರ್ಚು ವೆಚ್ಚ ಮಾಡಿ ಸೋಲಾರ್ ದೀಪದ ವ್ಯವಸ್ಥೆ ಅಳವಡಿಸಲಾಗಿದ್ದರೂ ಅದು ನಿಷ್ಕ್ರಿಯಗೊಂಡು ಬಳಕೆಗೆ ಬಾರದಿರುವುದು ಅಲ್ಲಿನ ನಿವಾಸಿಗಳ ನಿರೀಕ್ಷೆ ಹುಸಿ ಮಾಡಿತು. ಸೋಲಾರ್ ದೀಪ ಬಳಕೆಯ ಪ್ರಕ್ರಿಯೆ ಆರಂಭಗೊಂಡಂತೆ ರೂ. 300 ಬಿಲ್ ಬರುತ್ತಿದ್ದ ಪಂಚಾಯತ್‌ಗೆ ರೂ. 4,000 ದಷ್ಟು ಸೋಲಾರ್ ದೀಪ ಬಿಲ್ ಪಾವತಿ ಮಾಡಬೇಕಾದ ಪ್ರಸಂಗ ಬಂದೊದಗಿದಾಗ ಸೋಲಾರ್ ಬ್ಯಾಟರಿ ಚಾರ್ಜ್‌ಗೆ ಪಂಚಾಯತ್‌ನ ವಿದ್ಯುತ್ ಬಳಕೆ ಮಾಡುತ್ತಿರುವ ವಿಚಾರ ಕಂಡುಬಂತು. ಹಾಗಾಗಿ ಸೋಲಾರ್ ಘಟಕ ನಿಷ್ಕ್ರಿಯವಾಯಿತು. ಎಂಬುದು ಖಾತ್ರಿಗೊಂಡ ಕೊಲ್ಲೂರು ಗ್ರಾ.ಪಂ. ಅವರು ಆ ಯೋಜನೆಯ ಅಧಿಕಾರಿಗಳ ಗಮನಕ್ಕೆ ತಂದು ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದರು.
ಖಾಸಗಿ ಸ್ವಾಯತ್ತೆಯ ಕಂಪೆನಿಯೊಂದಕ್ಕೆ ಸೋಲಾರ್ ದೀಪ ಬೆಳಗಿಸುವ ಜವಾಬ್ದಾರಿ ವಹಿಸಿ ಕೊಡಲಾಗಿದ್ದರೂ ಅದು ಬೆಳಗದೇ ತಾಂತ್ರಿಕ ದೋಷದಿಂದ ಬದಿ ಸೇರಿರುವುದು ಸ್ಥಳೀಯವಾಗಿ ಚರ್ಚೆಗೆ ಗ್ರಾಸವಾಗಿದೆ. ಸೋಲಾರ್ ಬೆಳಕು ಕಾಣಬಹುದೆಂಬ ನಿರೀಕ್ಷೆಯಲ್ಲಿದ್ದ ಕೊಲ್ಲೂರು ನಿವಾಸಿಗಳಿಗೆ ರಾತ್ರಿ ಬೆಳದಿಂಗಳ ಬೆಳಕನ್ನು ಕಂಡು ಖುಷಿ ಪಡಬೇಕಾದ ಸಂದಿಗ್ಧ ಪರಿಸ್ಥಿತಿಯಿಂದ ಸಂಬಂಧಪಟ್ಟ ಗುತ್ತಿಗೆದಾರರಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಕಳೆದ 3, 4 ವರ್ಷಗಳಿಂದ ನಿಷ್ಕ್ರಿಯವಾಗಿರುವ ಬೆಳಗದ ಸೋಲಾರ್ ದೀಪದ ಅಳವಡಿಕೆಯ ಘಟಕವನ್ನು ಗ್ರಾ.ಪಂ. ಕಟ್ಟಡದ ಸಮೀಪದಿಂದ ತೆರವುಗೊಳಿಸಬೇಕು. ಸಂಪೂರ್ಣವಾಗಿ ವಿಫಲವಾಗಿರುವ ಈ ವ್ಯವಸ್ಥೆಯು ಪಾದಚಾರಿಗಳಿಗೆ ಸಂಚಾರಕ್ಕೆ ತೊಡಕುಂಟಾಗುತ್ತಿದೆ ಎಂದು ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ನೀಡಿದ್ದು ಅವರು ಸಮಸ್ಯೆ ಪರಿಹಾರದ ಭರವಸೆ ನೀಡಿದ್ದಾರೆ. ಇವೆಲ್ಲ ಸಮಸ್ಯೆಗಳ ನಡುವೆ ಕೊಲ್ಲೂರು ಗ್ರಾ.ಪಂ. ಮುಖ್ಯ ರಸ್ತೆಗೆ ಟ್ಯೂಬ್‌ಲೈಟ್ ಬೆಳಗಿಸುವುದರ ಮೂಲಕ ಬೆಳಕನ್ನು ನೀಡುತ್ತಿದೆ.
– ಜಯಪ್ರಕಾಶ ಶೆಟ್ಟಿ, ಕೊಲ್ಲೂರು ಗ್ರಾ.ಪಂ. ಅಧ್ಯಕ್ಷ
Related Articles
Advertisement