ಬೆಂಗಳೂರು: ರಾಜ್ಯದ “ಸೌರ ದೀಪ ಗ್ರಾಮ ಪಂಚಾಯ್ತಿ’ಗಳಿಗೆ ಒಂದು ಲಕ್ಷ ರೂ. ಪ್ರೋತ್ಸಾಹಧನ ನೀಡಲು ಸರ್ಕಾರ ಮುಂದಾಗಿದೆ. ಇದಕ್ಕಾಗಿ ಮೂರು ತಿಂಗಳ ಗಡುವು ವಿಧಿಸಿದೆ. “ನವೆಂಬರ್-ಜನವರಿ ಒಳಗೆ ಸೌರ ವಿದ್ಯುತ್ ದೀಪದಲ್ಲಿ ಬೆಳಗುವ ಗ್ರಾಮ ಪಂಚಾಯ್ತಿಗಳಿಗೆ ಒಂದು ಲಕ್ಷ ರೂ. ಪ್ರೋತ್ಸಾಹಧನ ನೀಡಲಾಗುವುದು. ಜತೆಗೆ, ಆ ಪಂಚಾಯ್ತಿಯನ್ನು ಗುರುತಿಸಿ, ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು. ಇದು ಹೊಸದಾಗಿ ಅಳವಡಿಸಿಕೊಳ್ಳುವವರಿಗೆ ಮಾತ್ರ ಅನ್ವಯ ಆಗಲಿದೆ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಪ್ರಕಟಿಸಿದರು.
ನಗರದ ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ)ದ ಡಾ.ಬಾಬು ರಾಜೇಂದ್ರ ಪ್ರಸಾದ್ ಅಂತಾರಾಷ್ಟ್ರೀಯ ಸಮ್ಮೇಳನ ಸಭಾಂಗಣದಲ್ಲಿ ಶನಿವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ “ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಗ್ರಾಮ ಪಂಚಾಯ್ತಿಗಳ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಅಭಿವೃದ್ಧಿ ಅಧಿಕಾರಿಗಳ ಜತೆ ಸಂವಾದ’ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಇದರಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಾಮಾನ್ಯ ವಿದ್ಯುತ್ ಅಳವಡಿಕೆಯಿಂದ ಮೂರು ತಿಂಗಳಿಗೆ ಲಕ್ಷಗಟ್ಟಲೆ ರೂ.ಗಳ ವಿದ್ಯುತ್ ಬಿಲ್ ಬರುತ್ತದೆ. ಇದು ಆರ್ಥಿಕ ಹೊರೆಗೆ ಕಾರಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೆಲವು ಗ್ರಾಮ ಪಂಚಾಯ್ತಿಗಳು ಸೌರ ವಿದ್ಯುತ್ ಅಳವಡಿಸಿಕೊಂಡು ಮಾದರಿಯಾಗಿವೆ. ಅದೇ ರೀತಿ, ಉಳಿದೆಲ್ಲ ಪಂಚಾಯ್ತಿಗಳಿಗೂ ಅವಕಾಶ ಇದ್ದು, ಅವುಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಒಂದು ಲಕ್ಷ ರೂ.ಗಳನ್ನು ಸರ್ಕಾರದಿಂದ ಸಬ್ಸಿಡಿ ರೂಪದಲ್ಲಿ ನೀಡಲಾಗುವುದು. ಈ ಸಂಬಂಧ ಆಯಾ ಶಾಸಕರು ಮತ್ತು ಸಂಸದರಿಗೂ ಅಗತ್ಯ ನೆರವು ನೀಡುವಂತೆ ಕೋರಲಾಗುವುದು ಎಂದು ಹೇಳಿದರು.
ಸೌರ ವಿದ್ಯುತ್‌ನಿಂದ ಉಳಿತಾಯವಾಗುತ್ತಿದೆ: ಇದಕ್ಕೂ ಮುನ್ನ ನಡೆದ ಗೋಷ್ಠಿಯಲ್ಲಿ ಅನುಭವ ಹಂಚಿಕೊಂಡ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಥುಸತ್ ಮಹಾಗಾಂವ್ ಗ್ರಾಮ ಪಂಚಾಯ್ತಿ ಅಧ್ಯಕ್ಷ ಚೆನ್ನಬಸಪ್ಪ ಪಾಟೀಲ್, “ಮೂರು ತಿಂಗಳಿಗೊಮ್ಮೆ ವಿದ್ಯುತ್ ಬಿಲ್ 20-25 ಲಕ್ಷ ರೂ.ಬರುತ್ತಿತ್ತು. ಇದು ಹೊರೆಯಾಗಿದ್ದರಿಂದ ಗಾಂಧಿ ಗ್ರಾಮೀಣ ಪುರಸ್ಕಾರದ ಅಡಿ ಬಂದಿದ್ದ ಹಣ, ದೇಣಿಗೆ ಸಂಗ್ರಹದಿಂದ ಪಂಚಾಯ್ತಿ ವ್ಯಾಪ್ತಿಯ ನಾಲ್ಕು ಹಳ್ಳಿಗಳು ಹಾಗೂ ಮೂರು ತಾಂಡಾಗಳಲ್ಲಿ ಬೀದಿ ದೀಪಗಳನ್ನು ಸೌರ ವಿದ್ಯುತ್‌ಗೆ ಪರಿವರ್ತಿಸಲಾಯಿತು. ಪರಿಣಾಮ 15ರಿಂದ 20 ಲಕ್ಷ ರೂ. ಉಳಿತಾಯ ಆಗುತ್ತಿದೆ. ಅದೇ ಹಣವನ್ನು ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗಿಸಲಾಗುತ್ತಿದೆ’ ಎಂದರು.
ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವ ಈಶ್ವರಪ್ಪ, “ಇದೇ ರೀತಿ ಸೌರ ವಿದ್ಯುತ್ ವ್ಯವಸ್ಥೆ ಅಳವಡಿಸಿಕೊಂಡ ಗ್ರಾ.ಪಂ.ಗಳಿಗೆ ಉಳಿದ ಗ್ರಾ.ಪಂ.ಗಳು ಭೇಟಿ ನೀಡಿ, ಆ ಮಾದರಿಯನ್ನು ಅನುಸರಿಸಬೇಕು. ಮುಂದಿನ ಮೂರು ತಿಂಗಳಲ್ಲಿ ಈ ವ್ಯವಸ್ಥೆ ಅಳವಡಿಸಿಕೊ ಳ್ಳುವ ಪಂಚಾಯ್ತಿಗಳಿಗೆ ಒಂದು ಲಕ್ಷ ರೂ.ಗಳ ಪ್ರೋತ್ಸಾ ಹಧನ ನೀಡಲಾಗುವುದು’ ಎಂದು ಘೋಷಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ)ಗಳು ಆಯಾ ಪಂಚಾಯ್ತಿಗಳಲ್ಲಿ ಇದ್ದೇ ಕೆಲಸ ಮಾಡಬೇಕು. ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ಕತ್ತಲೆಯಲ್ಲಿಟ್ಟು ಕೆಲಸ ಮಾಡತಕ್ಕದ್ದಲ್ಲ ಎಂದು ಇದೇ ವೇಳೆ ಎಚ್ಚರಿಸಿದರು. ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಉಮಾ ಮಹದೇವನ್, ಡಾ.ಎನ್. ನಾಗಾಂಬಿಕಾದೇವಿ, ನಿರ್ದೇಶಕರಾದ ಪಿ. ಶಿವಶಂಕರ್, ಅಶ್ರಫುಲ್ ಹಸನ್ ಮತ್ತಿತರರು ಉಪಸ್ಥಿತರಿದ್ದರು.
ಫಿಟ್ ಇಂಡಿಯಾದಂತೆ ಓಪನ್ ಜಿಮ್: ಪ್ರಧಾನಿ ನರೇಂದ್ರ ಮೋದಿ ಅವರ “ಫಿಟ್ ಇಂಡಿಯಾ’ಕ್ಕೆ ಪೂರಕವಾಗಿ ಗ್ರಾಮೀಣ ಭಾಗದ ಯುವಕರ ಆರೋಗ್ಯದ ದೃಷ್ಟಿಯಿಂದ ಎಲ್ಲ ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಬಯಲು ವ್ಯಾಯಾಮ ಶಾಲೆ (ಓಪನ್ ಜಿಮ್) ನಿರ್ಮಿಸುವ ಗುರಿ ಇದೆ. ಪ್ರಾಥಮಿಕ ಹಂತದಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಪಂಚಾಯ್ತಿಗಳಲ್ಲಾದರೂ ಇದನ್ನು ಕಾರ್ಯರೂಪಕ್ಕೆ ತರುವ ಯೋಚನೆ ಇದೆ ಎಂದು ಸಚಿವರು ಹೇಳಿದರು.
ಉದ್ಘಾಟನೆ ನಂತರ ಹಲವು ಪಂಚಾಯ್ತಿಗಳಿಗೆ ಶೌಚಾಲಯ ನಿರ್ಮಾಣ, ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ, ಹೌಸಿಂಗ್ ಸೇರಿದಂತೆ ಹಲವು ಯೋಜನೆಗಳಡಿ ಅನುದಾನ ಬಿಡುಗಡೆ ಆಗಿಲ್ಲ ಎಂದು ಸಚಿವರಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರುಗಳು ಮುಗಿಬಿದ್ದರು. ಈ ಹಿನ್ನೆಲೆಯಲ್ಲಿ ಬರಬೇಕಾದ ಅನುದಾನದ ಬಗ್ಗೆ ಪಟ್ಟಿ ನೀಡುವಂತೆ ಗ್ರಾ.ಪಂ.ಗಳಿಗೆ ಸೂಚಿಸಿದರು.