Advertisement

ಧೂಪತಮಹಾಗಾಂವ್‌ ಗ್ರಾಪಂ ಸೌರಮಯ 4 ಗ್ರಾಮ-2 ತಾಂಡಾಗಳಲ್ಲಿ ಸೌರ ಬೆಳಕು

11:27 PM Dec 03, 2019 | Lakshmi GovindaRaju |

ಬೀದರ್‌: ಲಭ್ಯ ಅನುದಾನ ಸದ್ಬಳಕೆ ಮತ್ತು ಜನಪ್ರತಿನಿಧಿಗಳ ಸಹಭಾಗಿತ್ವದಲ್ಲಿ ಜಿಲ್ಲೆಯ ಧೂಪತಮಹಾಗಾಂವ್‌ ಗ್ರಾಪಂನ ಎಲ್ಲ ಗ್ರಾಮಗಳು ಸೌರ ವಿದ್ಯುತ್‌ ಬೆಳಕಿನಲ್ಲಿ ಬೆಳಗುವಂತಾಗಿವೆ. ರಾಜ್ಯದಲ್ಲಿ ಸೌರಮಯ ಆಗಿರುವ ಮೊದಲ ಗ್ರಾಪಂ ಎಂಬ ಹೆಗ್ಗಳಿಕೆ ಪಡೆದಿದ್ದು,ಈ ಮಾದರಿ ಎಲ್ಲ ಗ್ರಾಪಂಗಳಲ್ಲಿ ಅಳವಡಿಸಲು ಮುಂದಾಗಿದೆ.

Advertisement

ಧೂಪತಮಹಾಗಾಂವ್‌ ಗ್ರಾಪಂ ಕಟ್ಟಡ ಮಾತ್ರವಲ್ಲ ನಾಲ್ಕು ಗ್ರಾಮ ಮತ್ತು ಎರಡು ತಾಂಡಾಗಳು ಕೂಡ ಸೌರ ವಿದ್ಯುತೀಕರಣಗೊಂಡಿವೆ. ಕಚೇರಿ ಕೆಲಸಗಳ ಜತೆಗೆ ಹಳ್ಳಿಗಳ ಬೀದಿ ದೀಪಗಳಿಗೆ ಸೌರ ವಿದ್ಯುತ್‌ ಬಳಕೆ ಆಗುತ್ತಿದೆ. ಗ್ರಾಮ ಮಟ್ಟದಲ್ಲಿ ಪರ್ಯಾಯ ವಿದ್ಯುತ್‌ ಸ್ವಾವಲಂಬನೆ ಸಾಧಿಸುವತ್ತ ಹೆಜ್ಜೆಯನ್ನಿಟ್ಟಿರುವುದು ಹೊಸ ಸಾಧ್ಯತೆಗಳನ್ನು ತೆರೆದಿಟ್ಟಿದೆ. ಜನಪ್ರತಿನಿಧಿಗಳು, ಪಿಡಿಒ ನಡುವೆ ಸಮನ್ವಯತೆ ಇದ್ದಲ್ಲಿ ಗ್ರಾಮಾಭಿವೃದಿಟಛಿ ಸಾಧ್ಯ ಎಂಬುದನ್ನು ಈ ಗ್ರಾಪಂ ಸಾಧಿಸಿ ತೋರಿಸಿದೆ.

ಧೂಪತಮಹಾಗಾಂವ್‌ ಗ್ರಾಪಂ ಕಟ್ಟಡಕ್ಕೆ 1.60 ಲಕ್ಷ ರೂ. ವೆಚ್ಚದಲ್ಲಿ 2 ಕೆವಿ ಸೋಲಾರ್‌ ಅಳವಡಿಸಿದ್ದು, ಕಚೇರಿಯಲ್ಲಿ ಕಂಪ್ಯೂಟರ್‌, ಫ್ಯಾನ್‌, ಟ್ಯೂಬ್‌, ಸಿಸಿ ಕ್ಯಾಮೆರಾ ಸೌರ್‌ ವಿದ್ಯುತ್‌ನಲ್ಲಿ ನಡೆಯುತ್ತಿವೆ. ಇದೇ ಗ್ರಾಪಂ ವ್ಯಾಪ್ತಿಯ ಧೂಪತ ಮಹಾಗಾಂವ್‌, ಬಾಬಳಿ, ಮಣಿಗೆಂಪೂರ, ಜೀರ್ಗಾ(ಬಿ) ಗ್ರಾಮಗಳು, ಚಂದ್ರಾನಾಯ್ಕ ತಾಂಡಾಗಳಲ್ಲಿನ ಬೀದಿ ದೀಪಗಳನ್ನು ಸೌರ ವಿದ್ಯುತ್‌ಗೆ ಪರಿವರ್ತಿಸಲಾಗಿದೆ. 250 ಬೀದಿ ದೀಪಕ್ಕೆ 12.50 ಲಕ್ಷ ರೂ. ವೆಚ್ಚ ಮಾಡಲಾಗಿದೆ. ಸಾಮಾನ್ಯ ವಿದ್ಯುತ್‌ನಿಂದ ಬರುತ್ತಿದ್ದ ಲಕ್ಷಗಟ್ಟಲೆ ವಿದ್ಯುತ್‌ ಬಿಲ್‌ ಉಳಿತಾಯ ಆಗಿ ಆರ್ಥಿಕ ಹೊರೆ ತಪ್ಪುತ್ತಿದೆ. ವಿದ್ಯುತ್‌ ವ್ಯತ್ಯಯ ಇಲ್ಲದೇ ದಿನವೀಡಿ ಸೌರ ವಿದ್ಯುತ್‌ ಬೆಳಗುತ್ತಿದ್ದು, ಶೂನ್ಯ ನಿರ್ವಹಣೆಯೂ ಇಲ್ಲಿದೆ.

ಸೌರ ವಿದ್ಯುತ್‌ ವ್ಯವಸ್ಥೆಗಾಗಿ ಪಂಚಾಯತ್‌ ಯಾವುದೇ ದೇಣಿಗೆಯನ್ನು ಪಡೆಯಲಿಲ್ಲ. ಬದಲಾಗಿ ಸರ್ಕಾರದ ಲಭ್ಯ ಸಂಪನ್ಮೂಲ ಸರಿಯಾಗಿ ಬಳಸಿಕೊಂಡಿದೆ. ಕಚೇರಿಗೆ ಸಮುದಾಯ ಸ್ವತ್ತು ನಿರ್ವಹಣೆ ಅಡಿ ಹಾಗೂ ಬೀದಿ ದೀಪಕ್ಕೆ 14ನೇ ಹಣಕಾಸು ಯೋಜನೆ, ತೆರಿಗೆ ಅನುದಾನದಲ್ಲಿ 12 ಲಕ್ಷ ರೂ. ಹಣ ಮತ್ತು ಜನಪ್ರತಿನಿ ಧಿಗಳ 50 ಸಾವಿರ ರೂ. ನೆರವು ಪಡೆಯಲಾಗಿದೆ. ಚೆನ್ನೈನ ಸನ್‌ ಸೋಲಾರ್‌, ಸನ್‌ ಎಲೆಕ್ಟ್ರಿಕಲ್‌ ಸಂಸ್ಥೆಗಳ ಮೂಲಕ ಗುಣಮಟ್ಟದ ಸೌರ ವಿದ್ಯುತ್‌ ಉಪಕರಣ ಅಳವಡಿಸಲಾಗಿದೆ.

ಗ್ರಾಪಂನ ಸೌರ ವಿದ್ಯುತ್‌ ಮಾದರಿ ಕಾರ್ಯಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್‌ ಇಲಾಖೆ ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೇ ಇಲಾಖೆ ಸಚಿವ ಕೆ.ಎಸ್‌. ಈಶ್ವರಪ್ಪ ಅವರ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಅಧಿ ಕಾರಿಗಳ ಸಭೆಯಲ್ಲಿ ಇದೇ ಮಾದರಿಯಲ್ಲಿ ರಾಜ್ಯದ ಎಲ್ಲ 6,022 ಗ್ರಾಪಂಗಳಲ್ಲಿ ಸೌರ ವಿದ್ಯುತೀಕರಣ ಗೊಳಿಸುವ ಕುರಿತು ಅಧ್ಯಯನ ನಡೆಸಲು ಸಮಿತಿ ರಚಿಸಲಾಗಿದೆ.

Advertisement

ಸಮಿತಿ ಈಗಾಗಲೇ ಮಾದರಿ ಗ್ರಾಪಂಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಸಂಪನ್ಮೂಲದ ಸಂಗ್ರಹ, ಯೋಜನೆಯಿಂದ ಸಾರ್ವಜನಿಕರು ಮತ್ತು ಸರ್ಕಾರಕ್ಕೆ ಹೇಗೆ ಲಾಭ ಎಂಬುದರ ಕುರಿತು ಅಧ್ಯಯನ ನಡೆಸಿದ್ದು, ಶೀಘ್ರದಲ್ಲೇ ಗ್ರಾಮೀಣಾಭಿವೃದಿಟಛಿ ಇಲಾಖೆಗೆ ವರದಿ ಸಲ್ಲಿಸಲಿದೆ. ವರದಿ ಜಾರಿಗೆ ತಂದರೆ ನಾಡಿನ ಎಲ್ಲ ಹಳ್ಳಿಗಳು ಸೂರ್ಯನ ಬೆಳಕಿನಲ್ಲಿ ಝಗಮಗಿಸಲಿವೆ. ಔರಾದ ತಾಲೂಕಿನ ಚಿಂತಾಕಿ ಮತ್ತು ಗುಡಪಳ್ಳಿ ಗ್ರಾಪಂ ಕಚೇರಿಯಲ್ಲಿಯೂ ಪಿಡಿಒ ಆಗಿದ್ದ ಶಿವಾನಂದ, ಸೌರ ವಿದ್ಯುತೀಕರಣ ವ್ಯವಸ್ಥೆ ಪ್ರಯೋಗ ಯಶಸ್ವಿಯಾಗಿ ಮಾಡಿದ್ದರು. ನಂತರ ಧೂಪತಮಹಾಗಾಂವ್‌ನಲ್ಲಿ ಕಚೇರಿ,
ಬೀದಿ ದೀಪಕ್ಕೆ ಅಳವಡಿಸಿ ರಾಜ್ಯಕ್ಕೆ ಮಾದರಿ ಕಾರ್ಯ ಮಾಡಿದ್ದಾರೆ.

ಸಹಭಾಗಿತ್ವದಿಂದ ಯಶಸ್ಸು
ಚುನಾಯಿತ ಪ್ರತಿನಿಧಿಗಳ ಸಹಭಾಗಿತ್ವದಿಂದ ಧೂಪತ ಮಹಾಗಾಂವ್‌ ಗ್ರಾಪಂನಲ್ಲಿ ಸೌರ ವಿದ್ಯುತ್‌ ವ್ಯವಸ್ಥೆ ಕಲ್ಪಿಸಲಾಗಿದೆ. ಇದರಿಂದ ಲಕ್ಷಾಂತರ ರೂ. ವಿದ್ಯುತ್‌ ಬಿಲ್‌ ಉಳಿತಾಯ ಆಗುತ್ತಿದೇ ಮಾತ್ರಲ್ಲ, ಸಾಂಪ್ರದಾಯಿಕ ವಿದ್ಯುತ್‌ ಉಳಿತಾಯ, ಜಾಗತಿಕ ತಾಪಮಾನ ತಡೆಯತ್ತ ಹೆಜ್ಜೆ ಆಗಲಿದೆ. ಇದೇ ಮಾದರಿಯನ್ನು ರಾಜ್ಯಾದ್ಯಂತ ವಿಸ್ತರಿಸಲು ಗ್ರಾಮೀಣಾಭಿವೃದಿಟಛಿ ಇಲಾಖೆ ಈಗಾಗಲೇ ಸಮಿತಿ ರಚಿಸಿದ್ದು, ಅದು ಶೀಘ್ರದಲ್ಲಿ ತನ್ನ ವರದಿ ಸಲ್ಲಿಸಲಿದೆ.

● ಶಶಿಕಾಂತ ಬಂಬುಳಗೆ

Advertisement

Udayavani is now on Telegram. Click here to join our channel and stay updated with the latest news.

Next