Advertisement

ಕತ್ತಲಲ್ಲಿದ್ದ ಬದುಕಿಗೆ ಸೌರ ಬೆಳಕಿನ ಸೌಭಾಗ್ಯ

11:46 PM Aug 03, 2019 | mahesh |

ಸುಳ್ಯ: ವಿದ್ಯುತ್‌ ಸಂಪರ್ಕ ಕಾಣದ ಹಲವು ಮನೆಗಳು ಆ ಗ್ರಾಮದಲ್ಲಿದ್ದವು . ಗ್ರಾಮದ ಕೆಲ ಮನೆಗಳಿಗೆ ದಶಕಗಳಿಂದ ವಿದ್ಯುತ್‌ ಸಂಪರ್ಕ ಕಲ್ಪಿಸಲು ಸಾಧ್ಯವಾಗಿರಲಿಲ್ಲ. ಕಾರಣ ವಿದ್ಯುತ್‌ ಮಾರ್ಗ ಹಾದು ಹೋಗುವಲ್ಲಿ ಕಾನೂನು ತೊಡಕಿತ್ತು. ಆದರೀಗ ಅಂತಹ ಮನೆಗಳಲ್ಲಿ ಬೆಳಕು ಬಂದಿದೆ. ಅದಕ್ಕೆ ಕಾರಣವಾದದ್ದು ಕೇಂದ್ರ ಸರಕಾರದ ಸೌಭಾಗ್ಯ ಯೋಜನೆ.

Advertisement

ಸುಳ್ಯ ತಾಲೂಕಿನ ಗಡಿ ಗ್ರಾಮಗಳ ಮನೆಗಳಿಗೆ ಸೋಲಾರ್‌ ದೀಪವನ್ನು ಅಳವಡಿಸಿದ ಮೆಸ್ಕಾಂ ಆ ಪ್ರದೇಶದ ಹತ್ತಾರು ಕುಟುಂಬಗಳ ಬಾಳಿಗೆ ಸೌಭಾಗ್ಯದ ಬೆಳಕು ಹರಿಸಿದೆ.

ಸೌಭಾಗ್ಯ ಒದಗಿತು

ಆಲೆಟ್ಟಿ ಗ್ರಾಮದ ಮಾಣಿಮರ್ಧು ಬಟ್ಟಂಗಾಯ ದೇವಕಜೆ ಚೆರ್ನೂರು ಮತ್ತು ಕೊಚ್ಚಿಯ ಗ್ರಾಮಗಳಿಗೆ ಕೇಂದ್ರ ಸರಕಾರದ ಸೌಭಾಗ್ಯ ಯೋಜನೆಯಡಿ ಸೌರ ವಿದ್ಯುತ್‌ ಒದಗಿಸಲಾಗಿದೆ. ಈ ಪ್ರದೇಶದ ಹಲವು ವರ್ಷಗಳ ವಿದ್ಯುತ್‌ ಬೇಡಿಕೆಗೆ ನಿಗಮ ಸ್ಪಂದಿಸಿದೆ.

ಜಿಲ್ಲೆಯ ಅನ್ಯ ತಾಲೂಕುಗಳಲ್ಲಿ ಈ ಯೋಜನೆ ಅನುಷ್ಠಾನವಾಗಿದ್ದರೂ ಕಾಡು ಆವೃತ ಸುಳ್ಯದ ಮಟ್ಟಿಗೆ ಇದು ಅತ್ಯಂತ ಮಹತ್ವದ್ದು. ಆಲೆಟ್ಟಿ ಗ್ರಾಮದ ಮನೆಗಳಿಗೆ ಈ ಸೌಭಾಗ್ಯ ಒದಗಿ ಬಂದಿದೆ. ಆಲೆಟ್ಟಿ ಗ್ರಾಮದ ಬಟ್ಟಂಗಾಯದಲ್ಲಿ 6, ಮಾಣಿಮರ್ಧುವಿನಲ್ಲಿ 6. ಚೆರ್ನೂರುವಿನಲ್ಲಿ 3, ದೇವಕಜೆಯಲ್ಲಿ 1 ಮತ್ತು ಕೊಚ್ಚಿಯಲ್ಲಿ 4 ಸೇರಿ ಒಟ್ಟು 20 ಮನೆಗಳಿಗೆ ಸೋಲಾರ್‌ ದೀಪದ ವ್ಯವಸ್ಥೆ ಅಳವಡಿಸಲಾಗಿದೆ.

Advertisement

ವಂಚಿತರಾಗಿದ್ದರು
ವಿದ್ಯುತ್‌ ಸಂಪರ್ಕ ಒದಗಿಸಿ ಬೆಳಕು ನೀಡುವ ಹಲವಾರು ಸರಕಾರದ ಯೋಜನೆಗಳು ಜಾರಿಯಲ್ಲಿವೆ. ದೀನ್‌ದಯಾಳ್‌ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆ ಗ್ರಾಮೀಣ ಭಾಗದಲ್ಲಿ ಅಸ್ತಿತ್ವದಲ್ಲಿದೆ. ನಗರ ಪ್ರದೇಶದಲ್ಲಿ ವಿತರಣ ಜಾಲದ ಅಭಿವೃದ್ಧಿಗೆ ಐಪಿಡಿಎಸ್‌ ಯೋಜನೆ ಇದೆ. ಲೈನ್‌ ಎಳೆದು ವಿದ್ಯುತ್‌ ಸಂಪರ್ಕ ಕಲ್ಪಿಸಲು ಸಾಧ್ಯವಾಗದ ಕಡೆಗಳಲ್ಲಿ ಸೋಲಾರ್‌ ವಿದ್ಯುತ್‌ ಒದಗಿಸುವ ಸೌಭಾಗ್ಯ ಯೋಜನೆ ಹಲವರ ಬದುಕಿಗೆ ಬೆಳಕಾಗಿದೆ. ಮೀಸಲು ಅರಣ್ಯದೊಳಗೆ ವಿದ್ಯುತ್‌ ಮಾರ್ಗ ಸಾಧ್ಯವಿಲ್ಲದೆ ಈ ಕುಟುಂಬಗಳಿಗೆ ವಿದ್ಯುತ್‌ ಸರಬರಾಜು ದೂರದ ಮಾತಾಗಿತ್ತು. ಹೀಗಾಗಿ 20 ಕುಟುಂಬಗಳು ವಿದ್ಯುತ್‌ ಸೌಕರ್ಯದಿಂದ ವಂಚಿತವಾಗಿದ್ದವು.

8.16 ಲಕ್ಷ ರೂ. ವೆಚ್ಚ
ಸೌಭಾಗ್ಯ ಯೋಜನೆಯಲ್ಲಿ ಪ್ರತಿ ಮನೆಗೆ 40,800 ರೂ. ಮೊತ್ತದ ಸೋಲಾರ್‌ ಉಪಕರಣಗಳನ್ನು ಉಚಿತವಾಗಿ ನೀಡಲಾಗುತ್ತದೆ. ಎರಡು ಸೋಲಾರ್‌ ಪ್ಯಾನಲ್, 75 ಎಎಚ್ ಸಾಮರ್ಥ್ಯದ ಬ್ಯಾಟರಿ, ಏಳು ವ್ಯಾಟ್ಸ್‌ನ ಎರಡು ಬಲ್ಬ್ಗಳು, 20 ವ್ಯಾಟ್ಸ್‌ ಡಿ.ಸಿ. ಫ್ಯಾನ್‌ ಅಳವಡಿಸಲಾಗುತ್ತದೆ. ಸೋಲಾರ್‌ ಚಾರ್ಜರ್‌, ಕಂಟ್ರೋಲರ್‌, ಜಂಕ್ಷನ್‌ ಬಾಕ್ಸ್‌, ವೈರಿಂಗ್‌ ಉಪಕರಣ ಹೀಗೆ ಎಲ್ಲವನ್ನೂ ಉಚಿತವಾಗಿ ಅಳವಡಿಸಲಾಗುತ್ತದೆ. 20 ಮನೆಗಳಿಗೆ 8.16 ಲಕ್ಷ ರೂ. ವೆಚ್ಚದಲ್ಲಿ ವ್ಯವಸ್ಥೆ ಅಳವಡಿಸಲಾಗಿದೆ. ಪ್ರಸ್ತುತ ಈ ಸ್ಕೀಂ ಮುಗಿದಿದೆ.ಗ್ರಾ. ಪಂ. ಸಮೀಕ್ಷೆ ಪ್ರಕಾರ ಸುಳ್ಯ ತಾಲೂಕಿನಲ್ಲಿ ಗ್ರಾಮೀಣ ಪ್ರದೇಶಗಳ 486 ಮನೆಗಳಿಗೆ ದೀನದಯಾಳ್‌ ಉಪಾಧ್ಯಾಯ ಯೋಜನೆಯಲ್ಲಿ ಸಂಪರ್ಕ ನೀಡಲಾಗಿದೆ. ಗ್ರಾಮ ಜ್ಯೋತಿ ಯೋಜನೆ ಮೂಲಕವು ವಿದ್ಯುತ್‌ ಸಂಪರ್ಕ ಕಲ್ಪಿಸಲಾಗಿದೆ. ಇದೀಗ ಸೌಭಾಗ್ಯ ಯೋಜನೆಯಲ್ಲಿ ಸೌರ ವಿದ್ಯುತ್‌ ಒದಗಿಸಲಾಗಿದೆ.

ಕಾನೂನು ತೊಡಕಿತ್ತು
ಆಲೆಟ್ಟಿಯ 20 ಕುಟುಂಬಗಳಿಗೆ ದೀನ್‌ದಯಾಳ್‌ ಯೋಜನೆಯಲ್ಲಿ ವಿದ್ಯುತ್‌ ಒದಗಿಸಲು ಕಾನೂನು ತೊಡಕಿತ್ತು. ಅದೇ ಹೊತ್ತಿಗೆ ಸೌಭಾಗ್ಯ ಯೋಜನೆ ಬಂತು. ಈ ಯೋಜನೆಯಲ್ಲಿ ಆ ಮನೆಗಳಿಗೆ ಸಂಪರ್ಕ ಒದಗಿಸಿದ್ದೇವೆ. ಸದ್ಯ ಸೌಭಾಗ್ಯ ಯೋಜನೆ ಸ್ಕೀಂ ಮುಗಿದಿದೆ. ವಿದ್ಯುತ್‌ ಸಂಪರ್ಕ ಆಗದ ಮನೆಗಳ ಪಟ್ಟಿ ಪಂಚಾಯತ್‌ಗಳಿಂದ ಬಂದರೆ ಮುಂದೆ ಇಂತಹ ಯೋಜನೆಗಳು ಬಂದಾಗ ಅದರಲ್ಲಿ ಸೇರಿಸಿ ನೀಡುತ್ತೇವೆ.
– ನರಸಿಂಹ, ಎಕ್ಸಿಕ್ಯೂಟಿವ್‌ ಎಂಜಿನಿಯರ್‌, ಪುತ್ತೂರು ಉಪ ವಿಭಾಗ

ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next