Advertisement

ಜೂ. 21ರಂದು ಮತ್ತೆ ಸೂರ್ಯಗ್ರಹಣ

10:44 AM Jun 05, 2020 | mahesh |

ಉಡುಪಿ: ಕೋವಿಡ್ ಸೋಂಕು ಆರಂಭಕ್ಕೆ ನಾಲ್ಕು ದಿನಗಳ ಮುನ್ನ ಡಿ. 26ರಂದು ಕಂಕಣ ಸೂರ್ಯಗ್ರಹಣ ಗೋಚರವಾಗಿದ್ದರೆ, ಈಗ ಜೂ. 21ರಂದು ಖಂಡಗ್ರಾಸ ಸೂರ್ಯಗ್ರಹಣ ನಡೆಯಲಿದೆ. ಜೂ. 21ರ ಸೂರ್ಯಗ್ರಹಣ10.04ಕ್ಕೆ ಆರಂಭವಾಗಿ ಅಪರಾಹ್ನ 1.22ಕ್ಕೆ ಕೊನೆಗೊಳ್ಳಲಿದೆ. ಮುಂದಿನ ಸೂರ್ಯಗ್ರಹಣ ದಿಲ್ಲಿ ಸಹಿತ
ಉತ್ತರ ಭಾರತ, ಪಾಕಿಸ್ಥಾನ ಮೊದಲಾದ ಭಾಗಗಳಲ್ಲಿ ಕಂಕಣಗ್ರಹಣವಾಗಿದ್ದರೆ, ದಕ್ಷಿಣ ಭಾರತದಲ್ಲಿ ಪಾರ್ಶ್ವಗ್ರಹಣವಾಗಲಿದೆ. ಮುಂದಿನ ಬಾರಿ ಸೂರ್ಯಗ್ರಹಣದ ಸಂದರ್ಭ ಐದಾರು ಗ್ರಹಗಳು ಒಂದೇ ರಾಶಿಯಲ್ಲಿ ಸೇರುತ್ತವೆ. ಇದನ್ನು ಷಡ್ಗ್ರಹ ಯೋಗ ಎನ್ನುತ್ತಾರೆ.

Advertisement

ಗ್ರಹಣ ಅವಲಕ್ಷಣ ಎಂಬ ನಂಬಿಕೆ ಇದೆ. ವಿಶೇಷವಾಗಿ ಸೂರ್ಯಗ್ರಹಣದಿಂದ ಅನಾರೋಗ್ಯ ಸಮಸ್ಯೆ ಉಂಟಾಗುತ್ತದೆ. ಇದರ ಬಗ್ಗೆ ಇತ್ತೀಚಿನ ಪಂಚಾಂಗದಲ್ಲಿಯೂ ಹಿಂದಿನ ಬಾರಿಯ ಪಂಚಾಂಗದಲ್ಲಿಯೂ ಉಲ್ಲೇಖೀಸಿದ್ದೇನೆ ಎನ್ನುತ್ತಾರೆ ಉಡುಪಿ ಶ್ರೀಕೃಷ್ಣ ಪಂಚಾಂಗದ ಗಣಕರು, ಉಡುಪಿ ಸಂಸ್ಕೃತ ಕಾಲೇಜಿನ ಜೋತಿಷ ವಿಭಾಗದ ನಿವೃತ್ತ ಪ್ರಾಧ್ಯಾಪಕ, ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನದ ಅರ್ಚಕರಾದ ಪ್ರೊ| ಸಾಲಿಗ್ರಾಮ ಶ್ರೀನಿವಾಸ ಅಡಿಗ. 2019ರ ಡಿ. 31ರಂದು ಕೋವಿಡ್ ಸೋಂಕು ಚೀನದಲ್ಲಿ ಆರಂಭ ವಾಯಿತು. ಡಿ. 26ರಂದು ಕಂಕಣ ಸೂರ್ಯಗ್ರಹಣ ಸಂಭವಿಸಿತ್ತು. ಡಿ. 20ರಿಂದ ಚಿಕಿತ್ಸೆಯಲ್ಲಿದ್ದ ಪೇಜಾವರ ಶ್ರೀ ಆರೋಗ್ಯ ಡಿ. 26 ರಿಂದಲೇ ಕ್ಷೀಣಿಸಲು ಆರಂಭವಾಗಿ ಡಿ. 29ರಂದು ಇಹಲೋಕ ತ್ಯಜಿಸಿದ್ದರು. ಈ ಗ್ರಹಣದ ಬಳಿಕ ವಿಶ್ವದಲ್ಲಿ ಕೋವಿಡ್ ವೈರಸ್‌ ಹುಟ್ಟಿತೆ ಎಂಬ ಚರ್ಚೆಗಳು ನಡೆಯುತ್ತಿವೆ. ಈಗ ಆರು ತಿಂಗಳ ಬಳಿಕ ಜೂ. 21ರಂದು ಸೂರ್ಯಗ್ರಹಣ ಸಂಭವಿಸುತ್ತಿದೆ. ಇದು ಕೋವಿಡ್ ಅಪಾಯವನ್ನು ಹೆಚ್ಚಿಸಬಹುದೆ ಅಥವಾ ಹಿಂದಿನ ಗ್ರಹಣದ ಬಳಿಕ ಉಂಟಾದ ಕೋವಿಡ್ ಪ್ರಭಾವವನ್ನು ತಗ್ಗಿಸಬಹುದೆ ಎಂಬ ಜಿಜ್ಞಾಸೆ ಇದೆ. “ಸಾಮಾನ್ಯವಾಗಿ ಗ್ರಹಣದ ಫ‌ಲ ಆರು ತಿಂಗಳು ಇರುತ್ತದೆ ಎನ್ನುತ್ತಾರೆ ಶ್ರೀನಿವಾಸ ಅಡಿಗ ಅವರು.

ಇಂದು ಛಾಯಾ ಚಂದ್ರಗ್ರಹಣ
ಶುಕ್ರವಾರ (ಜೂ. 5) ಆಗಸದಲ್ಲಿ ಛಾಯಾ  ಚಂದ್ರಗ್ರಹಣ ಸಂಭವಿಸಲಿದೆ. ಚಂದ್ರನ ಬಣ್ಣ ಸ್ವಲ್ಪ ಮಾತ್ರ ಮಸುಕಾಗಲಿದ್ದು, ಇದನ್ನು ವೈಜ್ಞಾನಿಕವಾಗಿಯೂ ಶಾಸ್ತ್ರೀಯವಾಗಿಯೂ ಗ್ರಹಣವಾಗಿ ಪರಿಗಣಿಸುವುದಿಲ್ಲ. ಇದು ವಿಶ್ವದ ಹೆಚ್ಚಿನ ಕಡೆ ಗೋಚರಿಸುವುದಿಲ್ಲ ಎಂದು ಖಗೋಳ ವೀಕ್ಷಕ ಡಾ| ಎ.ಪಿ. ಭಟ್‌ ಅವರು ತಿಳಿಸಿದ್ದಾರೆ. ಈ ವರ್ಷ ಒಟ್ಟು ನಾಲ್ಕು ಚಂದ್ರ, ಒಂದು ಸೂರ್ಯ ಛಾಯಾಗ್ರಹಣ ಸಂಭವಿಸಲಿವೆ.

ಜೂ. 21ರ ಸೂರ್ಯಗ್ರಹಣವು ಕರ್ನಾಟಕದಲ್ಲಿ ಶೇ. 40 ಮಾತ್ರ ಗೋಚರವಾಗುತ್ತದೆ.  ಡಿ. 14ರಂದು ಸೂರ್ಯಗ್ರಹಣವಾದರೂ ಅದು ಛಾಯಾಗ್ರಹಣವಾಗಿದೆ. ಈ ಸಾಲಿನಲ್ಲಿ ಭಾರತಕ್ಕೆ ಗೋಚರಿಸುವ ಏಕೈಕ ಗ್ರಹಣ ಜೂ. 21ರ ಸೂರ್ಯಗ್ರಹಣ.
– ಡಾ| ಎ.ಪಿ. ಭಟ್‌, ಖಗೋಳ ವೀಕ್ಷಕರು, ಉಡುಪಿ

ಗ್ರಹಣದ ಫ‌ಲ ಆರು ತಿಂಗಳು ಇರುತ್ತದೆ ಎಂಬ ನಂಬಿಕೆ ಇದೆ. ಹಿಂದಿನ ಪಂಚಾಂಗದಲ್ಲಿ, ಈ ವರ್ಷದ ಪಂಚಾಂಗದಲ್ಲಿ ವರ್ಷಫ‌ಲದ ಜತೆ ಗ್ರಹಣ ಫ‌ಲವೂ ಸೇರಿ ಕೊಂಡು ಅನಾರೋಗ್ಯದ ಮುನ್ಸೂಚನೆಯನ್ನು ಉಲ್ಲೇಖೀಸಿದ್ದೆ.
– ಪ್ರೊ| ಸಾಲಿಗ್ರಾಮ ಶ್ರೀನಿವಾಸ ಅಡಿಗ, ಪಂಚಾಂಗ ಗಣಕರು

Advertisement
Advertisement

Udayavani is now on Telegram. Click here to join our channel and stay updated with the latest news.

Next