Advertisement

ಬಂಟ್ವಾಳ –ಬೆಳ್ತಂಗಡಿಗಳಲ್ಲಿ ಬೆಳಗ್ಗಿನ ಹೊತ್ತು ಬಂದ್‌ ವಾತಾವರಣ.!

10:02 AM Dec 27, 2019 | Hari Prasad |

ಬಂಟ್ವಾಳ/ಬೆಳ್ತಂಗಡಿ: ಸೂರ್ಯಗ್ರಹಣದಿಂದಾಗಿ ಸಾರ್ವಜನಿಕರು ಮನೆಯಿಂದ ಹೊರಬರದ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗಿನ ಹೊತ್ತು ಬಂಟ್ವಾಳ ಹಾಗೂ ಬೆಳ್ತಂಗಡಿಯ ಬಹುತೇಕ ಕಡೆಗಳಲ್ಲಿ ಅಘೋಷಿತ ಬಂದ್‌ನ ವಾತಾವರಣವಿತ್ತು.

Advertisement

ಬಂಟ್ವಾಳ ತಾಲೂಕು ಕೇಂದ್ರ ಬಿ.ಸಿ.ರೋಡಿನಲ್ಲಿ ಬೆಳಗ್ಗೆ ಸುಮಾರು 11 ಗಂಟೆಯವರೆಗೂ ವಾಹನಗಳ ಸಂಚಾರವಿದ್ದರೂ, ಜನರಿಂದ ತುಂಬಿದ್ದ ಪೇಟೆಯಲ್ಲಿ ಜನಸಂಚಾರವೇ ಇರಲಿಲ್ಲ. ಬೆಳ್ತಂಗಡಿ ಪೇಟೆಯಲ್ಲಿ ಇದೇ ಸ್ಥಿತಿಯಿದ್ದು, ಬಸ್‌ ನಿಲ್ದಾಣದ ಪರಿಸರ ಖಾಲಿ ಖಾಲಿಯಾಗಿ ಕಂಡುಬಂದಿತ್ತು.

ಬೆಳಗ್ಗಿನ ಹೊತ್ತು ಅಂದರೆ ಸುಮಾರು 11 ಗಂಟೆಯವರೆಗೆ ಹೆಚ್ಚಿನ ಅಂಗಡಿ ಮುಂಗಟ್ಟುಗಳು ತೆರೆದಿರಲಿಲ್ಲ. ಗ್ರಹಣವೆಂದು ಮನೆಯಲ್ಲೇ ಕೂತಿದ್ದ ಸಾರ್ವಜನಿಕರು ಬಳಿಕ ಸ್ನಾನ ಮಾಡಿ ಅಡುಗೆ ತಯಾರಿಸಿ ಊಟ ಮಾಡಿ ಅನಂತರ ಹೊರಟು ಬಂದಿದ್ದರು. ಹೀಗಾಗಿ ಮಧ್ಯಾಹ್ನದ ಬಳಿಕವೇ ಪೇಟೆಗಳು ಸಹಜ ಸ್ಥಿತಿಗೆ ಮರಳಿತ್ತು.


ಧಾರ್ಮಿಕ ಕಾರ್ಯ!
ಗ್ರಹಣ ದೋಷ ನಿವಾರಣೆಗಾಗಿ ಹೆಚ್ಚಿನ ಕಡೆಗಳಲ್ಲಿ ಹೋಮ ಹವನ ಸೇರಿದಂತೆ ವಿವಿಧ ಧಾರ್ಮಿಕ ಕ್ರಿಯೆಗಳು ನಡೆದವು. ಬಹುತೇಕ ಎಲ್ಲಾ ಕಡೆ ದೇವಸ್ಥಾನಗಳಲ್ಲಿ ಪೂಜೆಯ ಸಮಯವನ್ನು ಬದಲಾವಣೆ ಮಾಡಲಾಗಿತ್ತು. ಗ್ರಹಣ ದೋಷದ ಪರಿಹಾರ್ಥವಾಗಿ ಜನರು ದೇವಸ್ಥಾನಗಳಿಗೆ ತೆರಳಿ ಪೂಜೆ ಮಾಡಿಸಿಕೊಂಡಿದ್ದರು.

ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣ!
ಶಾಲೆ ಕಾಲೇಜುಗಳಲ್ಲೂ ಗ್ರಹಣದ ಪ್ರಭಾವ ಕಂಡುಬಂದಿದ್ದು, ವಿದ್ಯಾರ್ಥಿಗಳ ಸಂಖ್ಯೆ ಸಾಕಷ್ಟು ಕಡಿಮೆ ಇತ್ತು. ಶಾಲೆಗಳಿಗೆ ಅಧಿಕೃತವಾಗಿ ರಜೆ ಘೋಷಣೆಯಾಗದಿದ್ದರೂ, ವಿದ್ಯಾರ್ಥಿಗಳಿಲ್ಲದೆ ಬಹುತೇಕ ಕಡೆ ತರಗತಿಗಳು ನಡೆದಿರಲಿಲ್ಲ. ಹೀಗಾಗಿ ಹೆಚ್ಚಿನ ಕಡೆಗಳಲ್ಲಿ ರಜೆಯ ವಾತಾವರಣವೇ ಕಂಡುಬಂದಿತ್ತು.

ಹೆಚ್ಚಿನ ಶಾಲೆಗಳಲ್ಲಿ ಗ್ರಹಣವನ್ನು ವೀಕ್ಷಣೆ ಮಾಡುವ ಕಾರ್ಯಕ್ರಮವು ನಡೆದಿತ್ತು. ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಆಸಕ್ತ ಶಿಕ್ಷಕರಿಗೆ ಗ್ರಹಣ ವೀಕ್ಷಣೆಯ ತರಬೇತಿ ನೀಡಿ ಕನ್ನಡಕಗಳನ್ನು ವಿತರಿಸಲಾಗಿತ್ತು. ಹೀಗಾಗಿ ಶಿಕ್ಷಕರು ಗುರುವಾರ ಶಾಲೆಗಳಿಗೆ ಆಗಮಿಸಿದ ವಿದ್ಯಾರ್ಥಿಗಳಿಗೆ ಗ್ರಹಣ ವೀಕ್ಷಣೆಯ ಅವಕಾಶ ಕಲ್ಪಿಸಿದರು. ಜತೆಗೆ ಕನ್ನಡಿಯ ಮೂಲಕವೂ ಗೋಡೆಯಲ್ಲಿ ಗ್ರಹಣದ ಪ್ರಕ್ರಿಯೆ ತೋರಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next