ನವದೆಹಲಿ: ನರಕ ಚತುರ್ದಶಿಯ ಮಾರನೇ ದಿನ ಅಂದರೆ ಅ.25ರ ಮಂಗಳವಾರ ಭಾಗಶಃ ಸೂರ್ಯಗ್ರಹಣ ಉಂಟಾಗಲಿದೆ.
ಭಾರತದಲ್ಲಿ ಸಂಜೆ 4.29ರಿಂದ ಆರಂಭವಾಗುವ ಗ್ರಹಣ ಸೂರ್ಯಾಸ್ತದೊಂದಿಗೆ ಅಂದರೆ 5.42ರ ವೇಳೆಗೆ ಮುಗಿಯಲಿದೆ. 5.30ರ ವೇಳೆಗೆ ಗ್ರಹಣವು ಉತ್ತುಂಗಕ್ಕೆ ತಲುಪಲಿದೆ. ಇದು ಪ್ರಸಕ್ತ ವರ್ಷದ ಎರಡನೇ ಸೂರ್ಯಗ್ರಹಣವಾಗಿದೆ.
ಭಾರತದಲ್ಲಿ ಬಹುತೇಕ ಎಲ್ಲ ಭಾಗಗಳಲ್ಲೂ ಭಾಗಶಃ ಸೂರ್ಯಗ್ರಹಣ ಗೋಚರಿಸಲಿದೆ. ಬೆಂಗಳೂರಿನಲ್ಲಿ ಸಂಜೆ 5.12ರಿಂದ 5.56ರವರೆಗೆ ಗ್ರಹಣ ಕಾಣಿಸಲಿದೆ. ಗುಜರಾತ್‌ನ ದ್ವಾರಕಾದಲ್ಲಿ ದೀರ್ಘಕಾಲ ಅಂದರೆ 1 ಗಂಟೆ 45 ನಿಮಿಷಗಳ ಕಾಲ ಗ್ರಹಣವಿರಲಿದೆ. ಬೆಂಗಳೂರಿನಲ್ಲಿ ಒಟ್ಟು 44 ನಿಮಿಷಗಳ ಕಾಲ ಗೋಚರಿಸಲಿದೆ.
ಭಾರತ ಮಾತ್ರವಲ್ಲದೇ, ಯುರೋಪ್, ಮಧ್ಯಪ್ರಾಚ್ಯ, ಆಫ್ರಿಕಾದ ಈಶಾನ್ಯ ಭಾಗಗಳು, ಪಶ್ಚಿಮ ಏಷ್ಯಾ, ಉತ್ತರ ಅಟ್ಲಾಂಟಿಕ್ ಸಾಗರ ಮತ್ತು ಉತ್ತರ ಹಿಂದೂ ಮಹಾಸಾಗರ ಪ್ರದೇಶಗಳಲ್ಲೂ ಗ್ರಹಣ ಕಾಣಸಿಗಲಿದೆ. ಯಾವ ಕಾರಣಕ್ಕೂ ಮಂಗಳವಾರದ ಗ್ರಹಣವನ್ನು ಬರಿಗಣ್ಣಿನಲ್ಲಿ ವೀಕ್ಷಿಸಬಾರದು ಎಂದು ತಜ್ಞರು ತಿಳಿಸಿದ್ದಾರೆ.