ಕಾರ್ಕಳ: ಪಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸೋಲಾರ್ ಬ್ಯಾಟರಿ ಕಳ್ಳತನವಾಗಿ ವರ್ಷವಾಗುತ್ತ ಬಂದರೂ ಕಳ್ಳರ ಪತ್ತೆಯಿನ್ನೂ ಆಗಿಲ್ಲ.
ಪಂಚಾಯತ್ ವ್ಯಾಪ್ತಿಯಲ್ಲಿ ಒಟ್ಟು 41 ಸೋಲಾರ್ ದೀಪಗಳನ್ನು ಅಳವಡಿಸಲಾಗಿತ್ತು. ಅವುಗಳಲ್ಲಿ ಕಲ್ಕಾರ್, ಪಳ್ಳಿ ಪೇಟೆ, ವಾಸುಕಿ ಸುಬ್ರಮಣ್ಯ ರಸ್ತೆ ಬಳಿ ಅಳವಡಿಸಿದ 7 ಸೋಲಾರ್ ದೀಪಗಳನ್ನು ಕಳ್ಳರು ಕಳವುಗೈಯಲಾಗಿತ್ತು. ಈ ಕುರಿತುಗ್ರಾ.ಪಂ. ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಿಸಿತ್ತು.
ತುಕ್ಕು ಹಿಡಿಯುತ್ತಿದೆ
ರಸ್ತೆ ಬದಿಯಿರುವ ಸೋಲಾರ್ ಪ್ಯಾನಲ್ ಹಾಗೂ ಕಂಬ ತುಕ್ಕು ಹಿಡಿಯುತ್ತಿದೆ. ಒಂದು ಸೋಲಾರ್ ದೀಪಕ್ಕೆ ಸುಮಾರು 24 ಸಾವಿರ ರೂ. ವೆಚ್ಚ ಮಾಡಲಾಗಿತ್ತು. ಇದೀಗ ಸೋಲಾರ್ ಬ್ಯಾಟರಿಯಿಲ್ಲದೇ ಸಾರ್ವಜನಿಕರ ಉಪಯೋಗಕ್ಕೆ ಬಾರದಂತಾಗಿದೆ. ಮರು ಬ್ಯಾಟರಿ ಅಳವಡಿಕೆಗೂ ಪಂಚಾಯತ್ ಮುಂದಾಗಿಲ್ಲ.
ಇತ್ತೀಚೆಗೆ ಸೋಲಾರ್ ದೀಪ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು ಈ ನಿಟ್ಟಿನಲ್ಲಿ ಕಳ್ಳತನ ತಡೆಗಟ್ಟಲು ಆಧುನಿಕ ತಂತ್ರಜ್ಞಾನಗಳನ್ನೊಳಗೊಂಡ ಸೋಲಾರ್ ದೀಪ ಅಳವಡಿಸಬೇಕೆಂದು ನಾಗರಿಕರು ಅಭಿಪ್ರಾಯಪಡುತ್ತಿದ್ದಾರೆ.