Advertisement

ವಿದ್ಯೆ-ಸಿದ್ಧಿ ಲೋಕಕಲ್ಯಾಣಕ್ಕೆ ಬಳಸಿ

01:51 PM Feb 01, 2020 | Naveen |

ಸೊಲ್ಲಾಪುರ: ಭಾರತೀಯ ಸಂಸ್ಕೃತಿಯಲ್ಲಿ 64 ವಿದ್ಯೆಗಳು ಹೇಳಲ್ಪಟ್ಟಿವೆ. ಅದರಂತೆ ಅಷ್ಟಸಿದ್ಧಿಗಳು ಯೋಗಶಾಸ್ತ್ರದಲ್ಲಿ ಪ್ರತಿಪಾದಿತವಾಗಿವೆ. ಈ ವಿದ್ಯೆ ಹಾಗೂ ಸಿದ್ಧಿ ಪಡೆದುಕೊಂಡ ವ್ಯಕ್ತಿಯು ಅವುಗಳನ್ನು ಲೋಕಕಲ್ಯಾಣಕ್ಕಾಗಿ ಬಳಸಬೇಕು ಎಂದು ಕಾಶಿ ಜಗದ್ಗುರು ಡಾ| ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ನುಡಿದರು.

Advertisement

ಉತ್ತರಪ್ರದೇಶದ ಕಾಶಿ ಮಹಾ ಪೀಠದಲ್ಲಿ ನಡೆಯುತ್ತಿರುವ ಶ್ರೀ ಜಗದ್ಗುರು ವಿಶ್ವಾರಾಧ್ಯ ಗುರುಕುಲದ ಶತಮಾನೋತ್ಸವದ ಧರ್ಮಸಭೆಯಲ್ಲಿ ಅವರು ಮಾತನಾಡಿದರು. ನಮ್ಮ ದೇಶದ ಋಷಿಗಳು ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಉಪಯೋಗಕ್ಕೆ ಬರುವ ಹಾಗೂ ಲೋಕ ಕಲ್ಯಾಣಕ್ಕೆ ಸಾಧನಗಳಾದ 64 ವಿದ್ಯೆಗಳನ್ನು ಉಪದೇಶಿಸಿದ್ದಾರೆ. ವಿದ್ಯಾರ್ಥಿಯಾದವನು ಆಯಾ ವಿದ್ಯೆಗಳ ಗುರುಗಳಿಂದ ತಮಗಿಷ್ಟವಾದ ವಿದ್ಯೆ
ಕಲಿತು ಅದನ್ನು ತನ್ನ ಜೀವನದ ಉಜ್ವಲತೆಗೆ ಬಳಸುವುದರ ಜೊತೆಗೆ ಲೋಕವನ್ನು ಸಹ
ಬಯಸಬೇಕು. ಅದರಂತೆ ಯೋಗ ಶಾಸ್ತ್ರದಲ್ಲಿ ಹೇಳಿದ ಪದ್ಧತಿಯಂತೆ ಜೀವನ ಸಾಗಿಸಿ ಅಷ್ಟ ಸಿದ್ಧಿಗಳನ್ನು ಪಡೆದುಕೊಳ್ಳಬಹುದು. ತನಗೆ ಪ್ರಾಪ್ತವಾದ ಈ ಸಿದ್ಧಿಗಳ ದುರುಪಯೋಗ ಮಾಡದೆ ಲೋಕಕಲ್ಯಾಣಕ್ಕಾಗಿ ಅವುಗಳನ್ನು ಬಳಸಿದ ವ್ಯಕ್ತಿಯು ಪವಾಡ ಪುರುಷನಾಗಿ ಖ್ಯಾತಿ ಪಡೆಯುತ್ತಾನೆ ಎಂದರು.

ಶ್ರೀ ಜಗದ್ಗುರು ವಿಶ್ವಾರಾಧ್ಯ ಗುರುಕುಲದಲ್ಲಿ ಅಭ್ಯಾಸ ಮಾಡಿದ ಯಾದಗಿರಿ ಜಿಲ್ಲಾ ಸುಕ್ಷೇತ್ರ ಅಬ್ಬೆತುಮಕೂರಿನ ಘನ ಪಂಡಿತ ವಿಶ್ವಾರಾಧ್ಯರು ಕಾಶಿ ಪೀಠದಲ್ಲಿ 1902ರಿಂದ 1911ರ ವರೆಗೆ ಅಧ್ಯಯನ ಮಾಡಿ ಸ್ವಗ್ರಾಮಕ್ಕೆ ಮರಳಿದ ನಂತರ ಗೃಹಸ್ಥಾಶ್ರಮ ಸ್ವೀಕರಿಸಿ ತಮ್ಮ ಪಾಂಡಿತ್ಯವನ್ನು ಪ್ರವಚನಗಳ ಮುಖಾಂತರ ಲೋಕಹಿತಕ್ಕಾಗಿ ಬಳಸಿದರು. ಕೊನೆಗೆ ವೀರ ವೈರಾಗ್ಯ ಮೂರ್ತಿಗಳಾಗಿ ಕಠೊರ ತಪಸ್ಸನ್ನಾಚರಿಸಿ ದೇವಿಯನ್ನು ಸಾಕ್ಷಾತ್ಕರಿಸಿಕೊಂಡು ಅಷ್ಟಸಿದ್ಧಿ ಪಡೆದುಕೊಂಡರು. ಆ ಸಿದ್ಧಿಗಳನ್ನು ತಮ್ಮ ಜೀವನದುದ್ದಕ್ಕೂ ಸಮಾಜದ ಸರ್ವ
ವರ್ಗಗಳ ಕಲ್ಯಾಣಕ್ಕಾಗಿ ಬಳಸಿದರು. ಅಂತೆಯೇ ಲಕ್ಷಾಂತರ ಭಕ್ತರು ಅವರ ಅನುಯಾಯಿಗಳಾಗಿದ್ದಾರೆ ಎಂದರು.

ಶ್ರೀಗಳ ಆ ಪರಂಪರೆಯನ್ನು ಸದ್ಯದ ಮಠಾಧಿ ಪತಿಗಳಾದ ಶಿವಾಚಾರ್ಯರತ್ನ ಗಂಗಾಧರ ಶಿವಾಚಾರ್ಯರು ನಡೆಸಿಕೊಂಡು ಹೋಗುತ್ತಿರುವುದು ಸಂತೋಷದ ಸಂಗತಿಯಾಗಿದೆ ಎಂದು ಹೇಳಿದರು. ಕೊಪ್ಪಳ ಗವಿಮಠದ ಶ್ರೀ ಮರಿಶಾಂತವೀರ ಸ್ವಾಮಿಗಳು 1913ರಿಂದ 1923ರ ವರೆಗೆ ಶ್ರೀ ಜಗದ್ಗುರು ವಿಶ್ವಾರಾಧ್ಯ ಗುರುಕುಲದಲ್ಲಿ ಸಂಸ್ಕೃತ ಸಾಹಿತ್ಯದ ಜೊತೆಗೆ ಆಯುರ್ವೇದ ವಿದ್ಯೆಯನ್ನು ಅಭ್ಯಾಸ ಮಾಡಿ ನಾಡಿ ಪರೀಕ್ಷೆಯಲ್ಲಿ ಪ್ರಾವೀಣ್ಯತೆ ಪಡೆದುಕೊಂಡರು. ನಾಡಿ ಪರೀಕ್ಷೆಯೆಂದರೆ ರೋಗವನ್ನು ಕಂಡುಹಿಡಿದು ಆಯುರ್ವೇದ ಔಷಧ ನೀಡುವ ಮುಖಾಂತರ ಅವುಗಳನ್ನು ಗುಣಪಡಿಸುತ್ತಿದ್ದರು. ಅಲ್ಲದೇ ಹೆಣ್ಣು ಮಕ್ಕಳನ್ನು ಅವರು ಸ್ಪರ್ಶಿಸುತ್ತಿರಲಿಲ್ಲ. ಅವರ ಮುಂಗೈಗೆ ಸೂಕ್ಷ್ಮದಾರ ಕಟ್ಟಿ ಆ ದಾರದ ಸ್ಪಂದನೆ ಮುಖಾಂತರ ಅವರಿಗೆ ಉಪಚರಿಸುತ್ತಿದ್ದರು ಎಂಬುದು ಸೋಜಿಗದ ಸಂಗತಿ ಎಂದರು. ಬಿಚ್ಚಾಲಿ, ಸುಲೇಪೇಟ್‌, ಬಾರ್ಸಿ, ಸೊಲ್ಲಾಪುರ ಮುಂತಾದ ನಗರಗಳ ಶಿವಾಚಾರ್ಯರು ಹಾಗೂ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next