ಸೊಲ್ಲಾಪುರ: ಮಹಿಳೆಯರ ಮೇಲೆ ದಬ್ಟಾಳಿಕೆ ಮಾಡುವವರಿಗೆ ತಕ್ಕ ಪಾಠ ಕಲಿಸಲಾಗುವುದು ಎಂದು ಮಹಿಳಾ ಹೋರಾಟಗಾರ್ತಿ ಹಾಗೂ ಭೂಮಾತಾ ಬ್ರಿಗೇಡ್ ಸಂಸ್ಥಾಪಕಿ ತೃಪ್ತಿ ದೇಸಾಯಿ ಹೇಳಿದರು.
ಅಕ್ಕಲಕೋಟದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದಿಗೂ ಧರ್ಮ ಮತ್ತು ದೇವರ ಹೆಸರಲ್ಲಿ ಸ್ತ್ರೀಯರ ಮೇಲೆ ಅತ್ಯಾಚಾರ ನಡೆಯುತ್ತಲೇ ಇದೆ. ಯಾವುದೇ ಧರ್ಮ ಇರಲಿ, ಅದನ್ನು ತಾವು ಗೌರವಿಸುತ್ತೇವೆ. ಆದರೆ ದೇವರ ಹೆಸರಲ್ಲಿ ನಡೆಯುವ ಶೋಷಣೆ ಮಾತ್ರ ಸಹಿಸಲಾಗದು ಎಂದರು.
ಇಂದೋರಕರ್ ಮಹಾರಾಜರು ತಮ್ಮ ಕೀರ್ತನ ಕಾರ್ಯಕ್ರಮಗಳಲ್ಲಿ ಪದೇಪದೆ ಮಹಿಳೆಯರನ್ನು ನಿಂದಿಸುವ ಮೂಲಕ ಅವಮಾನಿಸುತ್ತಿದ್ದಾರೆ. ಕಾನೂನು ಎಲ್ಲರಿಗೂ ಒಂದೆ. ಹೀಗಾಗಿ ಯಾರೇ ತಪ್ಪು ಮಾಡಿದರೂ ಅವರಿಗೆ ಕಾನೂನಿನ ಪ್ರಕಾರ ಶಿಕ್ಷೆಯಾಗಬೇಕು. ಇಂದೋರಕರ್ ಮಹಾರಾಜರು ಕ್ಷಮೆಯಾಚಿಸದಿದ್ದರೆ, ಅವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.
ನಾನು ವಾರಕರಿ ಪಂಥದ ಸಿದ್ಧಾಂತಕ್ಕೆ ಬದ್ಧಳಾಗಿದ್ದೇನೆ. ಪಂಥದ ತತ್ವಗಳನ್ನು ಗೌರವಿಸುತ್ತೇನೆ. ಇಂದೋರಕರ್ ಮಹಾರಾಜರು ಧರ್ಮೋಪದೇಶ ನೀಡಬೇಕು. ಸಮಾಜ ಜಾಗೃತಿ ಮಾಡಬೇಕು. ಅವರು ಮಹಿಳೆಯರು, ಶಿಕ್ಷಕರು, ರೈತರ ಕುರಿತು ಮೃದು ಭಾಷೆ ಬಳಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಲೈಂಗಿಕ ದೌರ್ಜನ್ಯದ ಅಪರಾ ಧಿಗಳಿಗೆ 21 ದಿನಗಳಲ್ಲಿ ಗಲ್ಲಿಗೇರಿಸಬೇಕು. ಕೇಂದ್ರ ಸರ್ಕಾರ ಈ ಕಾನೂನನ್ನು ರೂಪಿಸಬೇಕು. ಹೈಕೋರ್ಟ್, ಸುಪ್ರೀಂಕೋರ್ಟ್‌ನಲ್ಲಿ, ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾ ಧಿಗಳಿಗೆ ಆರು ತಿಂಗಳಲ್ಲಿ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು. ರಾಜಕೀಯ ಮುಖಂಡರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲೆಯಾದರೆ ಅಂತರವರನ್ನು ರಾಜಕೀಯ ಪಕ್ಷದಿಂದ ಶಾಶ್ವತವಾಗಿ ಕೈಬಿಡಬೇಕು ಎಂದು ಮನವಿ ಮಾಡಿದರು.